ಬೆಂಗಳೂರು | ನಕಲಿ ಅಂಕಪಟ್ಟಿ ದಂಧೆ: ಮೂವರ ಬಂಧನ

ಸಾಂದರ್ಭಿಕ ಚಿತ್ರ
ಬೆಂಗಳೂರು : ಕರ್ನಾಟಕ ರಾಜ್ಯ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಮಂಡಳಿ ಸಂಸ್ಥೆ ಹೆಸರಿನಲ್ಲಿ ಕಾನೂನು ಬಾಹಿರವಾಗಿ 10ನೆ ತರಗತಿ ಮತ್ತು ಪಿಯುಸಿ ನಕಲಿ ಅಂಕಪಟ್ಟಿಗಳನ್ನು ನೀಡುತ್ತಿದ್ದ ಮೂವರು ಆರೋಪಿಗಳನ್ನು ಸಿಸಿಬಿಯ ಆರ್ಥಿಕ ಅಪರಾಧ ದಳದ ಪೊಲೀಸರು ಬಂಧಿಸಿದ್ದಾರೆ.
ಪ್ರಶಾಂತ್ ಗುಂಡುಮಿ (41), ಮೋನೀಷ್ ಕೆ.ಜೆ (36) ಹಾಗೂ ರಾಜಶೇಖರ (41) ಬಂಧಿತ ಆರೋಪಿಗಳು ಎಂದು ಪೊಲೀಸರು ಹೇಳಿದ್ದಾರೆ.
ಇಲ್ಲಿನ ಕತ್ರಿಗುಪ್ಪೆಯ ರಾಮ್ ರಾವ್ ಲೇಔಟ್‍ನಲ್ಲಿರುವ ಅಕಾಡೆಮಿಯೊಂದರಲ್ಲಿ ಪಿಯುಸಿಗೆ ದಾಖಲಾಗಿದ್ದ ವಿದ್ಯಾರ್ಥಿಗೆ ಯಾವುದೇ ಪರೀಕ್ಷೆ ಬರೆಯದೆಯೇ ಆರೋಪಿಗಳು ಕರ್ನಾಟಕ ರಾಜ್ಯ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಮಂಡಳಿ ಎಂಬ ಹೆಸರಿನಲ್ಲಿ ಅಂಕಪಟ್ಟಿ ನೀಡಿದ್ದರು. ವಿದ್ಯಾರ್ಥಿಯ ಕಡೆಯವರು ಅಂಕಪಟ್ಟಿ ಪರಿಶೀಲಿಸಿ ಅನುಮಾನಗೊಂಡು ಪೊಲೀಸ್ ಆಯುಕ್ತರ ಕಚೇರಿಗೆ ದೂರು ನೀಡಿದ್ದರು.
ಈ ಸಂಬಂಧ ಕಾರ್ಯಾಚರಣೆ ನಡೆಸಿದ ಸಿಸಿಬಿಯ ಆರ್ಥಿಕ ಅಪರಾಧ ದಳದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಧ್ಯಯನ ಕೇಂದ್ರಗಳನ್ನು ತೆರೆದು, ಅಲ್ಲಿ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುತ್ತಿದ್ದರು. ಬಳಿಕ ಕೆಲವೇ ದಿನಗಳದಲ್ಲಿ ಅವರಿಗೆ ಕರ್ನಾಟಕ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಮಂಡಳಿ ಹೆಸರಿನಲ್ಲಿ ಆರೋಪಿಗಳು ಅಂಕಪಟ್ಟಿಗಳನ್ನು ನೀಡುತ್ತಿದ್ದರು ಎನ್ನಲಾಗಿದೆ.
ಆರೋಪಿಗಳು 5 ರಿಂದ 10 ಸಾವಿರ ಹಣ ಪಡೆದು ನಕಲಿ ಅಂಕಪಟ್ಟಿ ನೀಡುತ್ತಿದ್ದರು. ಸದ್ಯ ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಈ ಮಾದರಿಯ ಅಂಕಪಟ್ಟಿ ಎಲ್ಲಿಯಾದರೂ ಸಲ್ಲಿಕೆಯಾಗಿದ್ದಲ್ಲಿ ಸಿಸಿಬಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.