ಸರಕಾರ ಅಧಿಕಾರಕ್ಕೆ ಬಂದ ನಂತರ 83 ಕಾಯ್ದೆಗಳ ಅಧಿಸೂಚನೆ : ಎಚ್.ಕೆ.ಪಾಟೀಲ್

ಬೆಂಗಳೂರು : ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ 83 ಕಾಯ್ದೆಗಳ ಅಧಿಸೂಚನೆಯನ್ನು ಹೊರಡಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ಬುಧವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಂದಿನ 22 ತಿಂಗಳ ಅವಧಿಯಲ್ಲಿ ನಮ್ಮ ಇಲಾಖೆ ಸಂತೃಪ್ತಿ ತರುವ ರೀತಿಯಲ್ಲಿ ಕಾರ್ಯ ನಿರ್ವಹಿಸಿದೆ ಎಂದರು.
ಈ ಬಾರಿ ನಡೆದ ಬಜೆಟ್ ಅಧಿವೇಶನದಲ್ಲಿ ಗ್ರೇಟರ್ ಬೆಂಗಳೂರು, ಮೈಕ್ರೋ ಫೈನಾನ್ಸ್, ಬೆಂಗಳೂರು ಅರಮನೆ ಸೇರಿದಂತೆ 28 ವಿಧೇಯಕಗಳನ್ನು ವಿಧಾನಮಂಡಲದಲ್ಲಿ ಅಂಗೀಕರಿಸಲಾಗಿದ್ದು, ಇದರಲ್ಲಿ ಈಗಾಗಲೇ 5 ವಿಧೇಯಕಗಳಿಗೆ ರಾಜ್ಯಪಾಲರ ಅಂಕಿತವೂ ದೊರೆತಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
2023ರ ಆಗಸ್ಟ್ ನಂತರ ಉಳಿದ 22 ವಿಧೇಯಕಗಳನ್ನು ಪರಿಶೀಲನಾ ಸಮಿತಿಯಿಂದ ಅನುಮೋದಿಸಿದ್ದು, 17 ವಿಧೇಯಕಗಳು ಉಭಯ ಸದನಗಳಲ್ಲಿ ಅನುಮೋದನೆ ಪಡೆದು ಅಧಿನಿಯಮಗಳಾಗಿ ರಾಜ್ಯಪತ್ರದಲ್ಲಿ ಅಧಿಕೃತವಾಗಿ ಪ್ರಕಟವಾಗಿವೆ. 2024ರಲ್ಲಿ 47 ವಿಧೇಯಕಗಳು ಅಧಿನಿಯಮಗಳಾಗಿ ಪ್ರಕಟವಾಗಿವೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
2025ರಲ್ಲಿ 41 ವಿಧೇಯಕಗಳನ್ನು ಪರಿಶೀಲನಾ ಸಮಿತಿ ಅನುಮೋದಿಸಿದ್ದು, 28 ವಿಧೇಯಕಗಳು ಎರಡೂ ಸದನದಲ್ಲಿ ಅಂಗೀಕಾರಗೊಂಡಿವೆ. ರಾಜ್ಯಪಾಲರಿಂದ ಇನ್ನು ಸುಮಾರು 11 ವಿಧೇಯಕಗಳು ಅನುಮೋದನೆ ಆಗಬೇಕಿದೆ. 7 ವಿಧೇಯಕಗಳಿಗೆ ಸಂಬಂಧಿಸಿದಂತೆ ಸ್ಪಷ್ಟೀಕರಣವನ್ನು ಕೋರಿದ್ದಾರೆ. 5 ವಿಧೇಯಕಗಳು ರಾಷ್ಟ್ರಪತಿಗಳ ಅಂಕಿತಕ್ಕಾಗಿ ಬಾಕಿ ಉಳಿದಿವೆ. 20 ವಿಧೇಯಕಗಳನ್ನು ರಾಜ್ಯಪಾಲರಿಗೆ ಕಳುಹಿಸಲಾಗಿದೆ. ಒಟ್ಟಾರೆ 119 ವಿಧೇಯಕಗಳನ್ನು ಕಳುಹಿಸಿದ್ದು, 110 ವಿಧೇಯಕಗಳು ಅಧಿನಿಯಮವಾಗುವ ಸಾಧ್ಯತೆ ಇದೆ ಎಂದು ಎಚ್.ಕೆ.ಪಾಟೀಲ್ ವಿವರಿಸಿದರು.
ಕಾನೂನು ನೀತಿಯನ್ನು ಜಾರಿಗೆ ತಂದು ಕಾನೂನು ಸುಧಾರಣೆಗೆ ಒತ್ತು ಕೊಟ್ಟಿದ್ದೇವೆ. ಸಾಮಾಜಿಕ ನ್ಯಾಯ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಗುತ್ತಿಗೆಯಲ್ಲಿ ಮೀಸಲಾತಿ ನೀಡುವುದು, ತಂಬಾಕು ಬೆಳೆಗಾರರ ಹಿತ ಕಾಪಾಡುವುದು, ವಕೀಲರ ಮೇಲಿನ ಹಿಂಸಾಚಾರ ತಡೆಯುವುದು, ಪರೀಕ್ಷಾ ಅಕ್ರಮ ತಡೆಯಲು 10 ವರ್ಷಗಳ ಕಠಿಣ ಶಿಕ್ಷೆ ವಿಧಿಸುವಂತಹ ವಿಧೇಯಕಗಳನ್ನು ತಂದಿದ್ದೇವೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.