ಕೆಎಸ್‌ಎಲ್‌ಟಿಎ ಕ್ರೀಡಾಂಗಣ ಎಸ್.ಎಂ.ಕೃಷ್ಣರ ಪರಿಶ್ರಮದ ಫಲ : ಆರ್.ಅಶೋಕ್

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಟೆನಿಸ್ ಕ್ರೀಡೆಯನ್ನು ತುಂಬಾ ಪ್ರೀತಿಸುತ್ತಿದ್ದರು. ಈ ಕ್ರೀಡಾಂಗಣ ಅವರ ಕಠಿಣ ಪರಿಶ್ರಮದ ಫಲ ಎಂದು ಕೆಎಸ್‌ಎಲ್‌ಟಿಎ ಅಧ್ಯಕ್ಷ ಮತ್ತು ವಿರೋಧ ಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಶುಕ್ರವಾರ ನಗರದ ಕಬ್ಬನ್ ಪಾರ್ಕ್‌ನಲ್ಲಿರುವ ಟೆನಿಸ್ ಕ್ರೀಡಾಂಗಣದ ಮರುನಾಮಕರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಎಸ್‌ಎಲ್‌ಟಿಎ ವತಿಯಿಂದ ನಿರ್ವಹಿಸಲಾಗುತ್ತಿರುವ ಈ ಕ್ರೀಡಾಂಗಣಕ್ಕೆ ಎಸ್.ಎಂ.ಕೃಷ್ಣ ಹೆಸರು ಇಟ್ಟಿರುವುದರಿಂದ ಸಂತೋಷವಾಗುತ್ತಿದೆ ಎಂದರು.
ಅತ್ಯಾಧುನಿಕ ಟೆನಿಸ್ ಸಂಕೀರ್ಣವನ್ನು ನಿರ್ಮಿಸಲು ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಏಳು ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿದೆ ಎಂದು ಆರ್.ಅಶೋಕ್‌ಹೇಳಿದರು.
ದಿವಂಗತ ಎಸ್.ಎಂ.ಕೃಷ್ಣ ಅವರ ಪತ್ನಿ ಪ್ರೇಮಾ ಮಾತನಾಡಿ, ನಗರದ ಶ್ರೀಮಂತ ಸಮುದಾಯ ಮತ್ತು ಐಟಿ ವಲಯವು ಟೆನಿಸ್ ಕೋರ್ಟ್‌ನಲ್ಲಿ ಹೂಡಿಕೆ ಮಾಡಬೇಕು. ಇದರಿಂದ ಯುವ ಮತ್ತು ಮಹತ್ವಾಕಾಂಕ್ಷಿ ಟೆನಿಸ್ ತಾರೆಗಳಿಗೆ ಸಹಾಯ ಮಾಡಿದಂತಾಗುತ್ತದೆ ಎಂದರು.
ಎಸ್.ಎಂ. ಕೃಷ್ಣ ಅವರಿಗೆ ಕ್ರೀಡೆಯ ಮೇಲೆ ಅಪಾರ ಪ್ರೀತಿ ಇತ್ತು. ಅವರಿಗೆ ಕ್ರೀಡೆ ಆಡುವುದು ಬಹಳ ಮುಖ್ಯ. ಏಕೆಂದರೆ ಅದು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢವಾಗಿರಲು ಸಹಾಯ ಮಾಡುತ್ತದೆ. ಈ ಗೌರವಕ್ಕಾಗಿ ನಾನು ಮತ್ತು ನನ್ನ ಕುಟುಂಬವು ಕೆಎಸ್‌ಎಲ್‌ಟಿಎಗೆ ಬಹಳ ಕೃತಜ್ಞರಾಗಿದ್ದೇನೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕದ 13 ಯುವ ಮತ್ತು ಉದಯೋನ್ಮುಖ ಟೆನಿಸ್ ಆಟಗಾರರಿಗೆ 12 ಲಕ್ಷರೂ. ಮೌಲ್ಯದ ಎಸ್.ಎಂ.ಕೃಷ್ಣ ಸ್ಮಾರಕ ವಿದ್ಯಾರ್ಥಿವೇತನವನ್ನು ನೀಡಲಾಯಿತು. ಎಸ್.ಎಂ. ಕೃಷ್ಣ ಅವರ ಪುತ್ರಿಯರಾದ ಮಾಳವಿಕಾ ಮತ್ತು ಶಾಂಭವಿ, ಕೆಎಸ್‌ಎಲ್‌ಟಿಎ ಹಿರಿಯ ಉಪಾಧ್ಯಕ್ಷ ರೋಹನ್ ಬೋಪಣ್ಣ, ಕೆಎಸ್‌ಎಲ್‌ಟಿಎ ಉಪಾಧ್ಯಕ್ಷ ಮತ್ತು ಸಚಿವ ಪ್ರಿಯಾಂಕ್ ಖರ್ಗೆ, ಇತರರು ಉಪಸ್ಥಿತರಿದ್ದರು.
ಎ.6ರವರೆಗೆ ಪಂದ್ಯಾವಳಿ: ಎಸ್.ಎಂ. ಕೃಷ್ಣ ಸ್ಮಾರಕ ಕ್ರೀಡಾಂಗಣದಲ್ಲಿ ಐಟಿಎಫ್ ಪುರುಷರ-ಎಂ25 ಟೂರ್ನಮೆಂಟ್ ಆಯೋಜಿಸಲಿದ್ದು, ಮಾ.30 ಮತ್ತು 31 ರಂದು ಅರ್ಹತಾ ಪಂದ್ಯಗಳು ನಡೆಯಲಿವೆೆ. ಎ.1ರಿಂದ 6ರ ವರೆಗೆ ಕ್ರೀಡಾಕೂಟ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.