ʼಹನಿಟ್ರ್ಯಾಪ್ ಪ್ರಕರಣʼ ಹೈಕಮಾಂಡ್ ರಂಗಪ್ರವೇಶ?
ರಣದೀಪ್ ಸಿಂಗ್ ಸುರ್ಜೆವಾಲಾ | PC : PTI
ಬೆಂಗಳೂರು : ಆಡಳಿತಾರೂಢ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ‘ಹನಿಟ್ರ್ಯಾಪ್’ ವಿಚಾರ ಪಕ್ಷಕ್ಕೆ ತೀವ್ರ ಮುಜುಗರ ಸೃಷ್ಟಿಸಿದ್ದು, ಈ ಗೊಂದಲ ನಿವಾರಣೆಗೆ ಇದೀಗ ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರ ಪ್ರವೇಶವಾಗಿದೆ.
ಖುದ್ದು ಸಹಕಾರ ಸಚಿವ ಕೆ.ಎನ್.ರಾಜಣ್ಣ ವಿಧಾನಸಭೆ ಅಧಿವೇಶನದಲ್ಲೇ ‘ಹನಿಟ್ರ್ಯಾಪ್’ ವಿಷಯದ ಕುರಿತು ಪ್ರಸ್ತಾಪ ಮಾಡಿದ್ದರು. ಈ ಪ್ರಕರಣದಲ್ಲಿ ಯಾರೊಬ್ಬರ ಹೆಸರನ್ನು ಉಲ್ಲೇಖಿಸಿದೆ, ಕಾಂಗ್ರೆಸ್ ಪಕ್ಷದಲ್ಲಿ ಪ್ರಭಾವಿ ಮುಖಂಡರೊಬ್ಬರ ಕೈವಾಡವಿದೆ ಎಂದು ಪರೋಕ್ಷವಾಗಿ ಆರೋಪ ಮಾಡಿದ್ದಾರೆ.
ಈ ಬೆಳವಣಿಗೆಗಳ ಮಧ್ಯೆ ಎಐಸಿಸಿ ಮುಖಂಡರು, ಹನಿಟ್ರ್ಯಾಪ್ ವಿಚಾರಕ್ಕೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಿದ್ದಾರೆ. ಅಲ್ಲದೆ, ತನಿಖೆ ಸೇರಿದಂತೆ ಈ ಗೊಂದಲ ನಿವಾರಣೆಗೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆಯೂ ಸಮಾಲೋಚನೆ ನಡೆಸಿದ್ದಾರೆ. ಇದೀಗ ಇದರ ಮುಂದುವರಿದ ಭಾಗವಾಗಿಯೇ ಹೈಕಮಾಂಡ್ ನಾಯಕರು ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಕರ್ನಾಟಕಕ್ಕೆ ತೆರಳಿ ಮಾತುಕತೆ ನಡೆಸುವಂತೆ ಸೂಚಿಸಿದೆ ಎಂದು ಗೊತ್ತಾಗಿದೆ.
ವರಿಷ್ಠರ ಸೂಚನೆ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಈ ವಾರ ಆಗಮಿಸಲಿರುವ ರಣದೀಪ್ ಸಿಂಗ್ ಸುರ್ಜೇವಾಲಾ, ಪಕ್ಷದ ಪ್ರಮುಖ ನಾಯಕರು ಹಾಗೂ ಸಚಿವ ಕೆ.ಎನ್.ರಾಜಣ್ಣ ಸೇರಿದಂತೆ ಇನ್ನಿತರ ಮುಖಂಡ ಜತೆ ಸಭೆ ನಡೆಸಿದ್ದಾರೆ. ಹನಿಟ್ರ್ಯಾಪ್ ವಿಚಾರ ಪಕ್ಷಕ್ಕೆ ತೀವ್ರ ಮುಜುಗರ ಸೃಷ್ಟಿಸಿರುವುದರಿಂದ ಕೆಲವು ಸಲಹೆ, ಸೂಚನೆಗಳನ್ನು ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.