ಬೆಂಗಳೂರು | ಡಿಕೆಶಿ ಹೇಳಿಕೆ ವಿರೋಧಿಸಿ ಪ್ರತಿಭಟನೆ : ಬಿಜೆಪಿ ಶಾಸಕ ಸೇರಿ ಹಲವರು ಪೊಲೀಸ್ ವಶಕ್ಕೆ

ಬೆಂಗಳೂರು : ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂವಿಧಾನ ಬದಲಾವಣೆ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಪ್ರತಿಭಟನೆ ನಡೆಸಿದ ಜಯನಗರ ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿ ಸೇರಿದಂತೆ ಪ್ರಮುಖರನ್ನು ಇಲ್ಲಿನ ಆಡುಗೋಡಿ ಠಾಣಾ ಪೊಲೀಸರು ವಶಕ್ಕೆ ಪಡೆದರು.
ಬುಧವಾರ ಇಲ್ಲಿನ ಜಯನಗರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಬಳಿ ಶಾಸಕ ಸಿ.ಕೆ.ರಾಮಮೂರ್ತಿ ನೇತೃತ್ವದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಈ ವೇಳೆ ಸಿ.ಕೆ.ರಾಮಮೂರ್ತಿ ಮಾತನಾಡಿ, ಡಾ.ಬಾಬಾಸಾಹೇಬ ಅಂಬೇಡ್ಕರ್ ರಚಿಸಿರುವ ಸಂವಿಧಾನದ ಶೆಡ್ಯೂಲ್‍ನಲ್ಲಿ ಇಲ್ಲದ ಜನರಿಗೆ ಮೀಸಲಾತಿ ಕಲ್ಪಿಸುವ ಮೂಲಕ ಡಾ.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನಕ್ಕೆ ಅಪಮಾನ ಮಾಡುವ ಕೆಲಸ ಕಾಂಗ್ರೆಸ್ ಸರಕಾರ ಮಾಡುತ್ತಿದೆ ಎಂದು ದೂರಿದರು.
ಮೇಲ್ನೋಟಕ್ಕೆ ಶೇ.4 ಕಾಮಗಾರಿ ಗುತ್ತಿಗೆಗಳಲ್ಲಿ ಮೀಸಲಾತಿ ಕೊಡುವ ಕಾನೂನು ಮಾಡಿರಬಹುದು. ಆದರೇ ದೂರಗಾಮಿ ಪರಿಣಾಮ ಮೀಸಲಾತಿ ಚರ್ಚೆಗೆ ಧಕ್ಕೆ ತರುವಂತಹ ಹುನ್ನಾರಕ್ಕೆ ಕಾಂಗ್ರೆಸ್ ಸರಕಾರ ಕೈ ಹಾಕಿದ್ದು, ಇದಕ್ಕೆ ತಕ್ಕಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು.
ಈ ವೇಳೆಯಲ್ಲಿ ಬಿಬಿಎಂಪಿ ಮಾಜಿ ಸದಸ್ಯರಾದ ಆರ್.ಗೋವಿಂದ ನಾಯ್ಡು, ಚಂದ್ರಶೇಖರ್ ರಾಜು, ದೀಪಿಕಾ ಮಂಜುನಾಥ್ ರೆಡ್ಡಿ, ಚಿನ್ನಗಿರಿಯಪ್ಪ, ಮಂಡಲ ಅಧ್ಯಕ್ಷ ವೇಣುಗೋಪಾಲ್ ರೆಡ್ಡಿ, ನಾಯಕರಾದ ಮಂಜುನಾಥ್ ರೆಡ್ಡಿ, ಷಣ್ಮುಗಂ, ಯಶ್ವತ್ ರೆಡ್ಡಿ, ರಮಾದೇವಿ ಸೇರಿದಂತೆ ಪ್ರಮುಖರಿದ್ದರು.