ಗರ್ಭಕಂಠ ಕ್ಯಾನ್ಸರ್ ತಡೆಯಲು ಎಚ್‍ಪಿವಿ ಲಸಿಕೆ ವಿತರಣೆ : ದಿನೇಶ್ ಗುಂಡೂರಾವ್

Update: 2025-03-26 22:06 IST
ಗರ್ಭಕಂಠ ಕ್ಯಾನ್ಸರ್ ತಡೆಯಲು ಎಚ್‍ಪಿವಿ ಲಸಿಕೆ ವಿತರಣೆ : ದಿನೇಶ್ ಗುಂಡೂರಾವ್
  • whatsapp icon

ಬೆಂಗಳೂರು: ಮಹಿಳೆಯರನ್ನು ಸಂಭಾವ್ಯ ಗರ್ಭಕಂಠ ಕ್ಯಾನ್ಸರ್‌ ದಿಂದ ಪಾರು ಮಾಡುವ ಎಚ್‍ಪಿವಿ ಲಸಿಕಾ ಪ್ರಾಯೋಗಿಕ ಅಭಿಯಾನವನ್ನು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುವ ಬಗ್ಗೆ ಶೀಘ್ರವೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಬುಧವಾರ ಇಲ್ಲಿನ ಖಾಸಗಿ ಹೋಟೆಲ್‍ನಲ್ಲಿ ಎಚ್‍ಡಿಆರ್ ಫೌಂಡೇಷನ್ ಮತ್ತು ಆರ್ಟಿಸ್ಟ್ ಫಾರ್ ಹರ್ ಸಂಸ್ಥೆ ಸಹಯೋಗದಲ್ಲಿ ‘ಗರ್ಭಕಂಠ ಕ್ಯಾನ್ಸರ್ ಮುಕ್ತ ಕರ್ನಾಟಕ’ ಧ್ಯೇಯದೊಂದಿಗೆ ‘ಕರ್ನಾಟಕದಲ್ಲಿ ಎಚ್‍ಪಿವಿ ಲಸಿಕಾ ಅಭಿಯಾನ: ಜಾಗೃತಿಯಿಂದ ಅನುಷ್ಠಾನದವರೆಗೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹದಿಹರೆಯದ ಹೆಣ್ಣು ಮಕ್ಕಳಿಗೆ ಎಚ್‍ಪಿವಿ ಲಸಿಕೆ ಹಾಕುವುದರಿಂದ ಭವಿಷ್ಯದಲ್ಲಿ ಅವರಿಗೆ ಎದುರಾಗಬಹುದಾದ ಗರ್ಭಕಂಠ ಕ್ಯಾನ್ಸರ್ ತಡೆಗಟ್ಟಬಹುದು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇದರ ಪ್ರಾಯೋಗಿಕ ಅನುಷ್ಠಾನಕ್ಕೆ ಸಂಬಂಧಿಸಿದ ಪ್ರಸ್ತಾವವು ಸರಕಾರದ ಮುಂದಿದ್ದು, ಶೀಘ್ರವೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.

ಗರ್ಭಕಂಠ ಕ್ಯಾನ್ಸರ್ ನಿರ್ಮೂಲನೆಗಾಗಿ ವಿಶ್ವ ಆರೋಗ್ಯ ಸಂಸ್ಥೆ ರೂಪಿಸಿರುವ 90-70-90 ಸೂತ್ರಕ್ಕೆ (14 ವರ್ಷದೊಳಗಿನ ಶೇ.90ರಷ್ಟು ಹೆಣ್ಣು ಮಕ್ಕಳಿಗೆ ಲಸಿಕೆ, ಇಪ್ಪತ್ತೈದು ವರ್ಷದ ನಂತರ ಶೇ.70ರಷ್ಟು ಮಹಿಳೆಯರ ಸ್ಕ್ರೀನಿಂಗ್, ಬಾಧಿತರ ಪೈಕಿ ಶೇ.90ರಷ್ಟು ಮಹಿಳೆಯರಿಗೆ ಚಿಕಿತ್ಸೆ ಲಭ್ಯತೆ) ಅನುಗುಣವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇದರ ಪ್ರಾಯೋಗಿಕ ಅನುಷ್ಠಾನ ನಡೆಯಲಿದೆ. ಈ ವಿಷಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯು ರಾಜ್ಯಕ್ಕೆ ಮಾದರಿಯಾಗಬೇಕು ಎಂಬುದು ಸರಕಾರದ ಆಶಯವಾಗಿದೆ ಎಂದು ಅವರು ಹೇಳಿದರು.

ಪ್ರಸಕ್ತ ವರ್ಷದ ಬಜೆಟ್‍ನಲ್ಲಿ ಕಲ್ಯಾಣ ಕರ್ನಾಟಕದ ಐದು ಜಿಲ್ಲೆಗಳ ವ್ಯಾಪ್ತಿಯಲ್ಲಿ ಈ ಲಸಿಕೆ ಹಾಕುವ ಕಾರ್ಯಕ್ರಮ ಪ್ರಕಟಿಸಿ ಹಣ ತೆಗೆದಿಡಲಾಗಿದೆ. ಈ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಈ ವರ್ಷದ 14 ವರ್ಷ ಪೂರೈಸುವ ಹೆಣ್ಣು ಮಕ್ಕಳಿಗೆ ಲಸಿಕೆ ಹಾಕಲಾಗುವುದು. ಮುಂಬರುವ ದಿನಗಳಲ್ಲಿ ಈ ಲಸಿಕೆಯ ಬೆಲೆ ತಗ್ಗುವ ಸಾಧ್ಯತೆ ಇದ್ದು, ಎಲ್ಲ ಹೆಣ್ಣು ಮಕ್ಕಳಿಗೂ ಇದು ಲಭ್ಯವಾಗಬೇಕು ಎಂಬುದು ಸರಕಾರದ ಉದ್ದೇಶವಾಗಿದೆ ಎಂದರು.

ರಾಜ್ಯದಲ್ಲಿ ಎಚ್‍ಪಿವಿ ಅಭಿಯಾನದ ರೂವಾರಿ ಡಾ.ಹೇಮಾ ದಿವಾಕರ್ ಮಾತನಾಡಿ, 3 ತಿಂಗಳಿಂದ ರಾಜ್ಯದ ವಿವಿಧೆಡೆ 14 ವರ್ಷದೊಳಗಿನ 4,560 ಬಾಲಕಿಯರಿಗೆ ಎಚ್‍ಡಿಆರ್ ಫೌಂಡೇಷನ್ ವತಿಯಿಂದ ಉಚಿತ ಎಚ್‍ಪಿವಿ ಲಸಿಕೆ ನೀಡುವ ಜೊತೆಗೆ 1,500 ಮಹಿಳೆಯರನ್ನು ಸ್ಕ್ರೀನಿಂಗ್‍ಗೆ ಒಳಪಡಿಸಲಾಗಿದೆ. ಇದೇ ವೇಳೆ, “ತಾಯಿಯನ್ನು ತಪಾಸಣೆಗೆ ಒಳಪಡಿಸಿ, ಮಗಳಿಗೆ ಲಸಿಕೆ ಹಾಕಿಸಿ”, “ಕ್ಯಾನ್ಸರ್ ನಿಮ್ಮನ್ನು ಕೊಲ್ಲುವ ಮುನ್ನ ನೀವು ಅದನ್ನು ಕೊಲ್ಲಿ” ಎಂಬ ಘೋಷವಾಕ್ಯಗಳ ಮೂಲಕ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಅಸೋಸಿಯೇಷನ್ ಆಫ್ ಹೆಲ್ತ್ ಕೇರ್ ಪ್ರೊವೈಡರ್ಸ್ ಇಂಡಿಯಾದ ಅಧ್ಯಕ್ಷ ಡಾ. ಅಲೆಕ್ಸ್ ಥಾಮಸ್, ಎಚ್‍ಡಿಆರ್ ಫೌಂಡೇಷನ್‍ನ ಡಾ.ದಿವಾಕರ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News