ತಮಿಳುನಾಡಿಗೆ ನೀರು ಹರಿಸಲು ಕೆಆರ್‌ಎಸ್ ಗೇಟ್ ತೆರೆದಿರಲಿಲ್ಲ : ಚಲುವರಾಯಸ್ವಾಮಿ ಸ್ಪಷ್ಟನೆ

Update: 2025-03-26 21:26 IST
ತಮಿಳುನಾಡಿಗೆ ನೀರು ಹರಿಸಲು ಕೆಆರ್‌ಎಸ್ ಗೇಟ್ ತೆರೆದಿರಲಿಲ್ಲ : ಚಲುವರಾಯಸ್ವಾಮಿ ಸ್ಪಷ್ಟನೆ
  • whatsapp icon

ಮಂಡ್ಯ: ತಾಂತ್ರಿಕ ನಿರ್ವಹಣೆ ವೇಳೆ ಕೆಆರ್‌ಎಸ್ ಅಣೆಕಟ್ಟೆಯ ಒಂದು ಗೇಟ್ ತೆರೆದುಕೊಂಡಿತ್ತು. ಅಧಿಕಾರಿಗಳು ಆದಷ್ಟು ಬೇಗ ಸರಿಪಡಿಸಿದ್ದಾರೆ. ತಮಿಳುನಾಡಿಗೆ ನೀರು ಹರಿಸಲು ಗೇಟ್ ತೆರೆದಿರಲಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಬುಧವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಪ್ರತಿಯೊಂದರಲ್ಲೂ ತಪ್ಪು ಹುಡುಕುವುದೇ ವಿಪಕ್ಷದವರ ಕೆಲಸವಾಗಿಬಿಟ್ಟಿದೆ. ಇಂತಹ ಅವಘಡ ಸಂದರ್ಭದಲ್ಲಿ ಸಲಹೆ ಸೂಚನೆ ನೀಡಬೇಕೆ ಹೊರತು ಅದರಲ್ಲೂ ರಾಜಕೀಯ ಮಾಡುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈ ವರ್ಷ ಅಣಕೆಟ್ಟೆಯಲ್ಲಿ ಇನ್ನೂ 107 ಅಡಿ ನೀರಿದೆ. ನೀರು 80 ಅಡಿಗೆ ಇಳಿಯುವ ಮುಂಚೆ ಅಣೆಕಟ್ಟೆಯನ್ನು ನಿರ್ವಹಣೆ ಮಾಡುತ್ತಾರೆ. ಆ ವೇಳೆ ಅವಘಡ ಸಂಭವಿಸಿದೆ. ತಮಿಳುನಾಡಿನವರು ನೀರು ಕೇಳಿಯೇ ಇಲ್ಲವಾದ್ದರಿಂದ ನೀರುಹರಿಸುವ ಪ್ರಮೇಯ ಎಲ್ಲಿದೆ? ಎಂದು ಅವರು ಪ್ರಶ್ನಿಸಿದರು.

ಗೇಟ್ ತೆರೆದುಕೊಂಡಿದ್ದರಿಂದ ಸುಮಾರು 700 ಕ್ಯೂಸೆಕ್ ನೀರು ಹರಿದುಹೋಗಿದೆ ಅಷ್ಟೆ. ಅಣೆಕಟ್ಟೆ ನಿರ್ಮಾಣವಾಗಿ ನೂರು ವರ್ಷ ಆಗುತ್ತಿದೆ. ಹಾಗಾಗಿ ಗೇಟ್‍ಗಳ ಪರಿಶೀಲನೆ ಆಗಬೇಕಿದೆ. ಪರಿಶೀಲನೆಗೆ ಜಲಸಂಪನ್ಮೂಲ ಸಚಿವರಾದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಕರೆದಿದ್ದೇನೆ ಎಂದು ಅವರು ಹೇಳಿದರು.

ಹನಿಟ್ರ್ಯಾಪ್ ಯತ್ನಕ್ಕೆ ಸಂಬಂಧಿಸಿದಂತೆ ಗೃಹಸಚಿವರಿಗೆ ದೂರು ನೀಡಿರುವ ಬಗ್ಗೆ ಪ್ರತಿಕ್ರಿಯಿಸಿ, ಈ ಸಂಬಂಧ ಉನ್ನತ ಮಟ್ಟದ ತನಿಖೆ ನಡೆಸುವುದಾಗಿ ಸಿಎಂ ಹೇಳಿದ್ದಾರೆ. ಇಲ್ಲಿ ಪಕ್ಷಕ್ಕೆ ಮುಜುಗರದ ಪ್ರಶ್ನೆ ಮುಖ್ಯ ಅಲ್ಲ. ಏಕೆಂದರೆ, ಕೇಂದ್ರಮಟ್ಟದವರೂ ಈ ಬಲೆಯಲ್ಲಿ ಸಿಲುಕಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕೆ ಹಲವರು ಸ್ಟೇ ತಂದಿದ್ದಾರೆ ಎಂದರು.

ಮಂಡ್ಯದಲ್ಲಿ ಕೃಷಿ ವಿವಿ ಆಗುತ್ತಿರುವುದು ರೈತರಿಗೆ ಹೆಚ್ಚು ಅನುಕೂಲವಾಗುತ್ತದೆ. ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಸಹೋದರ ಎಚ್.ಡಿ.ರೇವಣ್ಣ ಅವರಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬುದ್ದಿ ಹೇಳದೆ ಮೌನವಾಗಿದ್ದಾರೆ. ಏಕೆಂದರೆ, ಅವರು ಯಾವತ್ತೂ ಮಂಡ್ಯ ಅಭಿವೃದ್ಧಿ ಸಹಿಸುವುದಿಲ್ಲ ಎಂದು ಚಲುವರಾಯಸ್ವಾಮಿ ಟೀಕಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News