ಕನ್ನಡವನ್ನು ಬೆಳೆಸಲು ಇರುವ ಅವಕಾಶಗಳನ್ನು ವೈದ್ಯರು ಬಳಸಿಕೊಳ್ಳಬೇಕು: ಪುರುಷೋತ್ತಮ ಬಿಳಿಮಲೆ

Update: 2025-03-26 20:07 IST
ಕನ್ನಡವನ್ನು ಬೆಳೆಸಲು ಇರುವ ಅವಕಾಶಗಳನ್ನು ವೈದ್ಯರು ಬಳಸಿಕೊಳ್ಳಬೇಕು: ಪುರುಷೋತ್ತಮ ಬಿಳಿಮಲೆ
  • whatsapp icon

ಬೆಂಗಳೂರು : ಕನ್ನಡವನ್ನು ಬೆಳೆಸಲು ಇರುವ ಅವಕಾಶಗಳನ್ನು ವೈದ್ಯರು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.

ನಗರದ ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆಯಲ್ಲಿ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ವೈದ್ಯಕೀಯ ಕ್ಷೇತ್ರದಲ್ಲಿ ಕನ್ನಡವನ್ನು ಬಳಸುವ ಸಾಧ್ಯತೆ ಮತ್ತು ಅದರ ಇತಿಮಿತಿಗಳ ಬಗ್ಗೆ ಅರಿವಿದ್ದು, ಕಿದ್ವಾಯಿ ಆಸ್ಪತ್ರೆಯಂತಹ ಜಾಗತಿಕ ಪ್ರಸಿದ್ಧಿಯನ್ನು ಹೊಂದಿರುವ ಸಂಸ್ಥೆಯಲ್ಲಿ ಅಲ್ಲಿನ ವೈದ್ಯರಿಂದ ಭಾಷಾ ಮತಾಂಧತೆಯನ್ನು ನಿರೀಕ್ಷಿಸುವುದಿಲ್ಲ. ಆದರೂ ದಿನೇ ದಿನೇ ಬಳಕೆಯಲ್ಲಿ ಇಳಿಮುಖವಾಗುತ್ತಿರುವ ಕನ್ನಡ ಭಾಷೆಯನ್ನು ವೈದ್ಯಕೀಯ ಕ್ಷೇತ್ರದಲ್ಲಿ ಉಳಿಸುವ ಮತ್ತು ಬೆಳೆಸುವ ನಿಟ್ಟಿನಲ್ಲಿ ವೈದ್ಯರು ಇನ್ನಷ್ಟು ಪರಿಣಾಮಕಾರಿಯಾಗಿ ಆಲೋಚಿಸಬಹುದಾಗಿದೆ ಎಂದರು.

ಮುಂದಿನ 50 ವರ್ಷಗಳಲ್ಲಿ ಪ್ರಪಂಚದ ಶೇ.92ರಷ್ಟು ಜನರಿಗೆ ಇಂದು ಕೇವಲ ಶೇ.6ರಷ್ಟು ಜನರು ಬಳಸುತ್ತಿರುವ ಭಾಷೆಯನ್ನು ಮಾತನಾಡುವ ಅನಿವಾರ್ಯತೆ ಸೃಷ್ಟಿಯಾಗಲಿದೆ. ಇದು ಕನ್ನಡ ಭಾಷೆಯ ಭವಿಷ್ಯಕ್ಕೆ ಕಂಟಕವಾಗಲಿದೆ. ಹಾಗಾಗಿ ಕನ್ನಡವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲರ ಮೇಲಿದೆ ಎಂದು ತಿಳಿಸಿದರು.

ವೈದ್ಯಕೀಯ ಕ್ಷೇತ್ರದಲ್ಲಿ ಕನ್ನಡ ಜ್ಞಾನವನ್ನು ಹೆಚ್ಚಿಸಲು ನಾವು ಏನು ಮಾಡಬಹುದೆನ್ನುವ ಕುರಿತಂತೆ ಕಿದ್ವಾಯಿ ಸಂಸ್ಥೆಯು ಒಂದು ಪ್ರಸ್ತಾವವನ್ನು ಸಲ್ಲಿಸಿದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಿದೆ. ವೈದ್ಯಕೀಯ ಕ್ಷೇತ್ರದಲ್ಲಿ, ವಿಶೇಷವಾಗಿ ಕ್ಯಾನ್ಸರ್ ಕ್ಷೇತ್ರದಲ್ಲಿ ವಿಶ್ವದ ಶ್ರೇಷ್ಠ ಪುಸ್ತಕಗಳನ್ನು ಅನುವಾದಿಸುವ ಮೂಲಕ ಸಾಮಾನ್ಯ ಕನ್ನಡಿಗರಿಗೆ ಉಪಯುಕ್ತವಾಗಬಹುದು. ಈ ಕಾರ್ಯಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ನೈತಿಕ ಬೆಂಬಲ ನೀಡಲಿದೆ ಎಂದರು.

ಸಂಸ್ಥೆಯಲ್ಲಿ ಬಹುಪಾಲು ವೈದ್ಯರು ಕನ್ನಡಿಗರಾಗಿದ್ದು, ಶುಶ್ರೂಷಕಿಯರಲ್ಲಿ ಗಣನೀಯ ಸಂಖ್ಯೆಯ ಕನ್ನಡೇತರರು ಇದ್ದಾರೆ ಎಂಬ ಅಂಶವನ್ನು ಗಮನಿಸಿದ ಬಳಿಕ ಕನ್ನಡೇತರರಿಗೆ ಕನ್ನಡವನ್ನು ಕಲಿಸುವ ಪ್ರಯತ್ನಕ್ಕೆ ಕಿದ್ವಾಯಿ ಆಸ್ಪತ್ರೆ ಮುಂದಾಗಬೇಕಿದೆ. ಈ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಹಾಯ ನೀಡಲು ಸಿದ್ಧವಿದೆ. ಕಿದ್ವಾಯಿ ಆಸ್ಪತ್ರೆಯಲ್ಲಿ ಕನ್ನಡಿಗರ ಹಿತರಕ್ಷಣೆ ಮಾಡಲು ಕನ್ನಡ ಘಟಕವನ್ನು ಆರಂಭಿಸಬೇಕು. ಪ್ರತಿ ವರ್ಷ ರಾಜ್ಯೋತ್ಸವ ಕಾರ್ಯಕ್ರಮ ನಡೆಸಲು ಮುಂದಾಗಬೇಕು ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ವಿ.ಪಿ.ನಿರಂಜನಾರಾಧ್ಯ, ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ, ಅಧ್ಯಕ್ಷರ ಆಪ್ತಕಾರ್ಯದರ್ಶಿ ಟಿ.ಎಸ್. ಫಣಿಕುಮಾರ್, ಕಿದ್ವಾಯಿ ಸಂಸ್ಥೆಯ ನಿರ್ದೇಶಕ ಡಾ. ನವೀನ್.ಟಿ, ಮೆಡಿಕಲ್ ಅಂಕಾಲಜಿ ವಿಭಾಗದ ಮುಖ್ಯಸ್ಥ ಡಾ.ಸುರೇಶ್ ಬಾಬು, ರೇಡಿಯಾಲಜಿ ವಿಭಾಗದ ಮುಖ್ಯಸ್ಥ ಡಾ. ಮಧು ಎಸ್.ಡಿ., ಹಿರಿಯ ವೈದ್ಯಾಧಿಕಾರಿ ಡಾ. ಮಹಂತೇಶ್ ಎ.ಎನ್, ಡಾ.ಸಿ.ಎ.ಕಿಶೋರ್ ಮತ್ತಿತರರು ಹಾಜರಿದ್ದರು.

ಡಾ.ವಿಜಯಲಕ್ಷ್ಮಿ ದೇಶಮಾನೆ ಹೆಸರಿಡಿ: ಸಂಸ್ಥೆಯ ಆವರಣದಲ್ಲಿರುವ ಹಲವು ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಶೇ.60ರ ಪ್ರಾತಿನಿಧ್ಯ ನೀಡಿಲ್ಲವೆಂಬ ಅಂಶವನ್ನು ಅವಲೋಕಿಸಿ ಈ ಕುರಿತು ಕೂಡಲೇ ಕ್ರಮಕ್ಕೆ ಮುಂದಾಗಬೇಕು. ಸಂಸ್ಥೆಯ ಕಟ್ಟಡ ಸಂಕೀರ್ಣಗಳು, ರಸ್ತೆಗಳಿಗೆ ನಾಡಿನ ಖ್ಯಾತ ವೈದ್ಯರು, ಕನ್ನಡ ಸಾಹಿತಿಗಳ ಹೆಸರುಗಳನ್ನು ಇಡಬೇಕು. ಇತ್ತೀಚಿಗಷ್ಟೇ ಕಲಬುರಗಿಯ ಕ್ಯಾನ್ಸರ್ ತಜ್ಞೆ ಡಾ.ವಿಜಯಲಕ್ಷ್ಮಿ ದೇಶಮಾನೆ ಅವರಿಗೆ ಕೇಂದ್ರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗಿದ್ದು, ಸಂಸ್ಥೆಯ ಯಾವುದಾದರೂ ಪ್ರಮುಖ ಸಂಕೀರ್ಣಕ್ಕೆ ಅವರ ಹೆಸರನ್ನು ಇಡಬಹುದಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಸಲಹೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News