‘ಹನಿಟ್ರ್ಯಾಪ್’ ಅನಿಷ್ಟ ಪದ್ಧತಿಯಿಂದ ರಾಜ್ಯಕ್ಕೆ ಕೆಟ್ಟ ಹೆಸರು: ಎಂ.ಬಿ.ಪಾಟೀಲ್

ಬೆಂಗಳೂರು : ಹನಿಟ್ರ್ಯಾಪ್ ಅನಿಷ್ಟ ಪದ್ಧತಿಯಾಗಿದೆ. ಇದರಿಂದ ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹನಿಟ್ರ್ಯಾಪ್‍ನಿಂದ ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತಿದೆ. ಸುಪ್ರೀಂ ಕೋರ್ಟ್ ಸಹ ಈ ಪ್ರಕರಣವನ್ನು ವಜಾ ಮಾಡಿದೆ ಎಂದು ಹೇಳಿದರು.
ಸಚಿವ ಕೆ.ಎನ್.ರಾಜಣ್ಣ ವಿರುದ್ಧ ನಡೆದಿರುವ ಹನಿಟ್ರ್ಯಾಪ್ ಯತ್ನ ಪ್ರಕರಣದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಎಂ.ಬಿ.ಪಾಟೀಲ್, ಒಬ್ಬರನ್ನು ರಾಜಕೀಯವಾಗಿ ಮುಗಿಸಲು, ಬೆದರಿಕೆ ಹಾಕುವುದಕ್ಕೆ ಹನಿಟ್ರ್ಯಾಪ್ ಬಳಸಿಕೊಳ್ಳುವುದು ಹೀನಕೃತ್ಯ. ಹನಿಟ್ರ್ಯಾಪ್ ವಿಚಾರವಾಗಿ ಕೆ.ಎನ್.ರಾಜಣ್ಣ ಪೊಲೀಸರಿಗೆ ದೂರು ನೀಡಲು ಹಿಂದೇಟು ಹಾಕಿರುವುದು ಅವರಿಗೆ ಬಿಟ್ಟ ವಿಚಾರವಾಗಿದೆ ಎಂದು ತಿಳಿಸಿದರು.
ನಾರಾಯಣಪುರ ಡ್ಯಾಂ ನೀರು ಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಎಂ.ಬಿ.ಪಾಟೀಲ್, 10 ಟಿಎಂಸಿ ನೀರು ಬಿಡಲು ಸಾಧ್ಯವಿಲ್ಲ. ಒಂದು ಟಿಎಂಸಿ ನೀರು ಬಿಟ್ಟಿರಬಹುದು ಎಂದು ಹೇಳಿದರು.