ಬೆಂಗಳೂರು | ಶಾಲಾ ಮಕ್ಕಳಿಂದ ಶೌಚಾಲಯದ ಚೇಂಬರ್ ಸ್ವಚ್ಛಗೊಳಿಸಿದ ಶಿಕ್ಷಕರು : ದೂರು

ಬೆಂಗಳೂರು : ನಗರದ ಬೇಗೂರು ವ್ಯಾಪ್ತಿಯಲ್ಲಿ ಸರಕಾರಿ ಶಾಲೆವೊಂದರ ಮಕ್ಕಳ ಕೈಯಿಂದ ಶೌಚಾಲಯದ ಚೇಂಬರ್ ಸ್ವಚ್ಛಗೊಳಿಸಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಶಿಕ್ಷಣ ಇಲಾಖೆಗೆ ದೂರು ಸಲ್ಲಿಸಲಾಗಿದೆ.
ಬೇಗೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಕೃತ್ಯ ಜರುಗಿದ್ದು, ಶಾಲೆಯ ಶಿಕ್ಷಕ ಹಾಗೂ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲು ಮಾಡುವಂತೆ ಜನತಾ ಪಕ್ಷ ಕರ್ನಾಟಕದ ರಾಜ್ಯ ಪ್ರಧಾನ ಮಹಾ ಕಾರ್ಯದರ್ಶಿ ಎನ್.ನಾಗೇಶ್ ಶಿಕ್ಷಣ ಇಲಾಖೆಗೆ ದೂರು ಸಲ್ಲಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಎನ್.ನಾಗೇಶ್, ಸರಕಾರಿ ಶಾಲೆಗೆ ಬರುವ ಮಕ್ಕಳು ಬಹುತೇಕ ಬಡ ಕುಟುಂಬದಿಂದ ಬಂದಿರುತ್ತಾರೆ. ಆದರೆ, ಶಿಕ್ಷಕರು ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿ ಅವರನ್ನು ಸಮಾಜದಲ್ಲಿ ವಿದ್ಯಾವಂತರನ್ನಾಗಿಸುವ ಜವಾಬ್ದಾರಿ ಬಿಟ್ಟು, ಶೌಚಾಲಯದ ಚೇಂಬರ್ ಸ್ವಚ್ಛಗೊಳಿಸುವ ಹೇಯ ಕೃತ್ಯ ಮಾಡಿದ್ದಾರೆ ಎಂದು ಆರೋಪಿಸಿದರು.
ಈ ಸಂಬಂಧ ಮುಖ್ಯ ಶಿಕ್ಷಕಿ ಸಾಕಮ್ಮ ಮತ್ತು ದೈಹಿಕ ಶಿಕ್ಷಕಿ ಸುಮಿತ್ರಾ, ಶಿಕ್ಷಕರಾದ ಸುಂದರಮ್ಮ, ಹರೀಶ್ ಬಾಬು, ರೋಸ್‌ಮೇರಿ, ಪ್ರೇಮಲತಾ, ಮಂಜುಷಾ ಜೋಶಿ, ರಾಧಾಕೃಷ್ಣ ಹೆಗಡೆ ವಿರುದ್ಧ ಎಫ್‌ಐಆರ್ ದಾಖಲು ಮಾಡಿ ಸೂಕ್ತ ಕ್ರಮ ಜರುಗಿಸುವಂತೆ ನಾಗೇಶ್ ಆಗ್ರಹಿಸಿದ್ದಾರೆ.