ಕೊಡಗಿನ ವಿವಿಧೆಡೆ ಮಳೆ : ರಸ್ತೆಗುರುಳಿದ ಬೃಹತ್ ಮರ
Update: 2025-03-26 21:33 IST

ಮಡಿಕೇರಿ: ಕೊಡಗಿನ ವಿವಿಧೆಡೆ ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿದೆ. ಬುಧವಾರ ಸುರಿದ ಗಾಳಿ ಮಳೆಗೆ ಮಡಿಕೇರಿ ತಾಲ್ಲೂಕಿನ ಪಾರಾಣೆ ಗ್ರಾಮದಲ್ಲಿ ಸುಮಾರು 200 ವರ್ಷಗಳಷ್ಟು ಹಳೆಯದಾದ ಬೃಹತ್ ಮರ ರಸ್ತೆಗಡ್ಡ ಉರುಳಿ ಬಿದ್ದ ಘಟನೆ ನಡೆದಿದೆ.
ಮಧ್ಯಾಹ್ನ 2.30 ಗಂಟೆಗೆ ಆರಂಭಗೊಂಡ ಭಾರೀ ಗಾಳಿ ಮಳೆಗೆ ಪಾರಾಣೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಬಳಿ ಭಾರೀ ಗಾತ್ರದ ಮರ ಬಿದ್ದಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ. ರಸ್ತೆಗಡ್ಡಲಾಗಿ ಬಿದ್ದ ಮರವನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದರು.
ಜಿಲ್ಲೆಯ ಇತರ ಭಾಗಗಳಲ್ಲಿ ಕೂಡ ಗುಡುಗು ಸಹಿತ ಮಳೆಯಾಗಿದೆ. ಕಾಫಿ ಕೊಯ್ಲಿನ ಬಳಿಕ ಮುಂದಿನ ಸಾಲಿನ ಫಸಲಿಗೆ ಅತ್ಯಗತ್ಯವಾದ ಹೂಮಳೆಯನ್ನು ಬೆಳೆಗಾರರು ನಿರೀಕ್ಷಿಸಿದ್ದರು.