ರಾಜ್ಯ ವಕ್ಫ್ ಬೋರ್ಡ್‌ನಲ್ಲಿನ ಅಕ್ರಮಗಳ ತನಿಖೆಯಾಗಲಿ: ಸೈಯದ್ ಅಶ್ರಫ್

ಬೆಂಗಳೂರು : ರಾಜ್ಯ ವಕ್ಫ್ ಬೋರ್ಡ್‌ನಲ್ಲಿ ಈ ಹಿಂದಿನ ಇಬ್ಬರು ಅಧ್ಯಕ್ಷರ(ಶಾಫಿ ಸಅದಿ ಹಾಗೂ ಅನ್ವರ್ ಬಾಷಾ)ಅವಧಿಯಲ್ಲಿ ಆಗಿರುವ ನಿರ್ಣಯಗಳು, ಅಕ್ರಮಗಳ ಸಮರ್ಪಕ ತನಿಖೆಯಾಗಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸೈಯದ್ ಅಶ್ರಫ್ ಆಗ್ರಹಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ಭ್ರಷ್ಟ ಅಧಿಕಾರಿಗಳು ಇವರೊಂದಿಗೆ ಶಾಮೀಲಾಗಿ ವಕ್ಫ್ ಬೋರ್ಡ್‌ಗೆ ನಷ್ಟವನ್ನುಂಟು ಮಾಡಿದ್ದಾರೆ. ಸರಕಾರ ಒಂದು ವಾರದಲ್ಲಿ ಈ ಅಕ್ರಮಗಳ ತನಿಖೆಗೆ ಆದೇಶಿಸಬೇಕು. ಇಲ್ಲದಿದ್ದರೆ, ವಕ್ಫ್ ಬೋರ್ಡ್ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಆಗುತ್ತಿದೆ. ಸಚಿವ ಸಂಪುಟದಲ್ಲಿ ಇಬ್ಬರು ಸಚಿವರು ಇದ್ದರೂ ಈವರೆಗೆ ಸಮುದಾಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಯಾವುದೇ ಪ್ರಾಮಾಣಿಕ ಪ್ರಯತ್ನಗಳು ನಡೆದಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಹೈಕೋರ್ಟ್‌ನಿಂದ ಸದಸ್ಯತ್ವ ಅನರ್ಹಗೊಂಡಿರುವ ವ್ಯಕ್ತಿ ಹಾಗೂ ಆರೋಪಗಳನ್ನು ಎದುರಿಸುತ್ತಿರುವ ಮೌಲಾನಾ ಒಬ್ಬರನ್ನು ವಕ್ಫ್ ಬೋರ್ಡ್‌ಗೆ ನಾಮ ನಿರ್ದೇಶನ ಮಾಡಲಾಗಿದೆ ಎಂದು ಸೈಯದ್ ಅಶ್ರಫ್ ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಚಿತ್ರದುರ್ಗದ ಖಬರಸ್ತಾನ್ ಜಮೀನಿನ ಸರ್ವೇ ಮಾಡಿಸುವ ಸಂಬಂಧ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದರು. ಆದರೆ, 10 ದಿನಗಳಾದರೂ ಸರ್ವೇ ಕಾರ್ಯ ಆರಂಭಗೊಂಡಿಲ್ಲ. ಈ ವಿಚಾರದಲ್ಲಿ ಯಾರಿಗೂ ಗಂಭೀರತೆ ಇಲ್ಲದಂತಾಗಿದೆ ಎಂದು ಅವರು ಹೇಳಿದರು.
ಕೆಪಿಸಿಸಿ ಉಪಾಧ್ಯಕ್ಷ ಮುಹಮ್ಮದ್ ಉಬೇದುಲ್ಲಾ ಶರೀಫ್ ಮಾತನಾಡಿ, ರಾಜ್ಯ ವಿಧಾನಸಭೆಯಲ್ಲಿ ಕೇಂದ್ರ ಸರಕಾರದ ವಕ್ಫ್ ತಿದ್ದುಪಡಿ ಮಸೂದೆ ವಾಪಸಾತಿಗೆ ಒತ್ತಾಯಿಸಿ ನಿರ್ಣಯ ಅಂಗೀಕರಿಸಿದ್ದು ಸ್ವಾಗತಾರ್ಹ. ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್‌ಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ತಿಳಿಸಿದರು.
ಅದೇ ರೀತಿ, ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸಂಬಂಧಿಸಿದಂತೆಯೂ ಒಂದು ಉತ್ತಮ ನಿರ್ಣಯ ಕೈಗೊಂಡರು. ಒಳ್ಳೆಯ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಚುನಾಯಿಸಿದ್ದಾರೆ. ಚುನಾವಣೆಯ ದಿನ ಸರಕಾರದಿಂದ ನಾಮ ನಿರ್ದೇಶಿತಗೊಂಡಿದ್ದ ಮೂರು ಸದಸ್ಯರು ಗೈರು ಹಾಜರಾಗಿದ್ದು ಸರಿಯಲ್ಲ. ಅವರನ್ನು ಸರಕಾರ ತಕ್ಷಣ ಸದಸ್ಯತ್ವದಿಂದ ವಜಾಗೊಳಿಸಬೇಕು ಎಂದು ಅವರು ಆಗ್ರಹಿಸಿದರು.