ಮಾರಕಾಸ್ತ್ರ ಹಿಡಿದ ಆರೋಪ : ಬಿಗ್‍ಬಾಸ್ ಮಾಜಿ ಸ್ಪರ್ಧಿಗಳಾದ ರಜತ್, ವಿನಯ್‌ಗೆ ಪೊಲೀಸರ ಎಚ್ಚರಿಕೆ

ಬೆಂಗಳೂರು : ಮಾರಕಾಸ್ತ್ರ ಹಿಡಿದು ಸಾರ್ವಜನಿಕ ಸ್ಥಳದಲ್ಲಿ ವಿಡಿಯೊ ಮಾಡಿದ್ದ ಆರೋಪದಡಿ ಬಿಗ್ ಬಾಸ್ ರಿಯಾಲಿಟಿ ಶೋ ಮಾಜಿ ಸ್ಪರ್ಧಿಗಳಾದ ರಜತ್ ಕಿಶನ್ ಹಾಗೂ ವಿನಯ್ ಗೌಡ ಅವರನ್ನು ವಶಕ್ಕೆ ಪಡೆದು ಎಚ್ಚರಿಕೆ ನೀಡಿ ನೋಟಿಸ್ ಮೇರೆಗೆ ಬಿಡುಗಡೆಗೊಳಿಸಿದ್ದಾರೆ.
ರಜತ್ ಕಿಶನ್ ಹಾಗೂ ವಿನಯ್ ಗೌಡ ಮಾರಕಾಸ್ತ್ರ ಹಿಡಿದು ಸಾರ್ವಜನಿಕ ಸ್ಥಳದಲ್ಲಿ ಸುಮಾರು 18 ಸೆಕೆಂಡ್‍ಗಳ ರೀಲ್ಸ್ ವಿಡಿಯೋ ಮಾಡಿದ್ದು, ಅದನ್ನು ಬುಜ್ಜಿ ಹೆಸರಿನ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಅಪ್‍ಲೋಡ್ ಮಾಡಲಾಗಿತ್ತು. ಸಾರ್ವಜನಿಕ ಸ್ಥಳದಲ್ಲಿ, ಕಾನೂನುಬಾಹಿರವಾಗಿ ಮಾರಕಾಸ್ತ್ರ ಹಿಡಿದು ಸಾರ್ವಜನಿಕರ ಶಾಂತಿಭಂಗವಾಗುವಂತಹ ದುರ್ವರ್ತನೆ ತೋರಲಾಗಿದೆ ಎಂದು ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಈ ದೂರು ಆಧರಿಸಿ ಬಿಗ್‍ಬಾಸ್ ಮಾಜಿ ಸ್ಪರ್ಧಿಗಳಿಬ್ಬರನ್ನೂ ಸೋಮವಾರ ಮಧ್ಯಾಹ್ನ ವಶಕ್ಕೆ ಪಡೆಯಲಾಗಿತ್ತು. ತದನಂತರ, ಎಚ್ಚರಿಕೆ ನೀಡಿ ಬಿಡುಗಡೆಗೊಳಿಸಲಾಗಿದೆ.ವಿಡಿಯೊ ಮಾಡಲು ಬಳಸಿದ್ದ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.