ನಮ್ಮ ಗಾಡಿ ಈಗಾಗಲೇ ಫುಲ್ ಆಗಿದೆ, ಜೆಡಿಎಸ್‍ನ ಶಾಸಕರನ್ನು ತೆಗೆದುಕೊಂಡು ನಾವೇನು ಮಾಡ್ಲಿ : ಸತೀಶ್ ಜಾರಕಿಹೊಳಿ

ಬೆಂಗಳೂರು : ನಮ್ಮ ಗಾಡಿ ಈಗಾಗಲೇ ಫುಲ್ ಆಗಿದೆ. ಹೀಗಿರುವಾಗ ಜೆಡಿಎಸ್‍ನ 18 ಮಂದಿ ಶಾಸಕರನ್ನು ತೆಗೆದುಕೊಂಡು ನಾವೇನು ಮಾಡಲಿ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪ್ರಶ್ನಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಓವರ್ ಲೋಡೆಡ್ ಇದ್ದರೂ ನಮ್ಮದು ಕಾಂಗ್ರೆಸ್ ಪಕ್ಷವೇ. ಇಲ್ಲಿಯೇ ಅಧ್ಯಕ್ಷ ಆಗಬೇಕು. ಇಲ್ಲಿಯೇ ಸಿಎಂ ಆಗಬೇಕು. ಸದ್ಯಕ್ಕೆ ಆ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದು, ಇಲ್ಲಿಯೇ ಕಾಯುತ್ತಿದ್ದೇವೆ ಎಂದು ಹೇಳಿದರು.
ಸಹಕಾರ ಸಚಿವ ಕೆ.ಎನ್.ರಾಜಣ್ಣರ ‘ಹನಿಟ್ರ್ಯಾಪ್’ ಪ್ರಕರಣ ಬೇರೆ, ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣರ ಪ್ರಕರಣವೇ ಬೇರೆ. ಎರಡೂ ಒಂದಕ್ಕೊಂದು ಸಂಬಂಧ ಇಲ್ಲ. ರಾಜೇಂದ್ರ ಪ್ರಕರಣ ಹಳೆಯದು, ಎರಡು ತಿಂಗಳು ಹಿಂದಿನದ್ದು. ಅವರಿಗೆ ಯಾರೋ ಕರೆ ಮಾಡಿ ಬೆದರಿಕೆ ಹಾಕಿದ್ದರು. ಈ ಪ್ರಕರಣಕ್ಕೂ ರಾಜಣ್ಣ ಅವರು ಉಲ್ಲೇಖಿಸಿರುವ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧವೇ ಇಲ್ಲ’ ಎಂದು ಹೇಳಿದರು.
‘ವಿಧಾನಸಭೆ ಅಧಿವೇಶನ ಮುಗಿದ ಬಳಿಕ ನಾನು ಸಚಿವ ರಾಜಣ್ಣ ಅವರನ್ನು ಭೇಟಿ ಮಾಡಿಲ್ಲ. ರಾಜಣ್ಣ ಸಿಕ್ಕಿದ ಮೇಲೆ ಏಕೆ ತಣ್ಣಗಾದರು ಎಂಬ ಬಗ್ಗೆ ಚರ್ಚೆ ಮಾಡುತ್ತೇನೆ. ಎಲ್ಲದಕ್ಕೂ ಇತಿಶ್ರೀ ಹಾಡಬೇಕು. ಇಲ್ಲದಿದ್ದರೆ ಹೋದಲ್ಲಿ-ಬಂದಲ್ಲಿ ಹನಿಟ್ರ್ಯಾಪ್ ಪ್ರಕರಣವೇ ಚರ್ಚೆ ಆಗುತ್ತದೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.