ಹನಿಟ್ರ್ಯಾಪ್ ಪ್ರಕರಣ : ವಿಡಿಯೊ ಕ್ಲಿಪ್ ಸಿಐಡಿ ವಶಕ್ಕೆ

ಸಾಂದರ್ಭಿಕ ಚಿತ್ರ
ಬೆಂಗಳೂರು : ಹನಿಟ್ರ್ಯಾಪ್ ಆರೋಪ ಪ್ರಕರಣ ಸಂಬಂಧ ಸಚಿವ ಕೆ.ಎನ್.ರಾಜಣ್ಣ ಅವರಿಗೆ ಬೆದರಿಕೆವೊಡ್ಡಲು ಕಳುಹಿಸಲಾಗಿದ್ದ ವಿಡಿಯೊ ಕ್ಲಿಪ್‍ವೊಂದನ್ನು ಸಿಐಡಿ ತನಿಖಾ ತಂಡ ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರೆಸಿದೆ ಎಂದು ಗೊತ್ತಾಗಿದೆ.
ಹನಿಟ್ರ್ಯಾಪ್ ಪ್ರಕರಣದ ತನಿಖೆ ಆರಂಭಿಸಿರುವ ಸಿಐಡಿ ಪೊಲೀಸರು, ನಿನ್ನೆ ರಾಜಣ್ಣ ಅವರ ಮನೆಗೆ ಭೇಟಿ ನೀಡಿ ಸಿಬ್ಬಂದಿಗಳಿಂದ ಮಾಹಿತಿ ಸಂಗ್ರಹಿಸಿದರು. ಜೊತೆಗೆ ಸಚಿವರ ಕಚೇರಿಯಲ್ಲಿರುವ ಲೆಡ್ಜರ್ ಬುಕ್‍ನ್ನು ವಶಪಡಿಸಿಕೊಂಡು ಹನಿಟ್ರಾಪ್ ನಡೆದಿದೆ ಎಂದು ಉಲ್ಲೇಖಿಸಲಾದ ದಿನದಂದು ಯಾರೆಲ್ಲ ರಾಜಣ್ಣನವರ ನಿವಾಸಕ್ಕೆ ಭೇಟಿ ನೀಡಿದ್ದರು ಎಂಬ ಮಾಹಿತಿಯನ್ನು ಪರಿಶೀಲಿಸುತ್ತಿದ್ದಾರೆ .
ಮೂಲಗಳ ಪ್ರಕಾರ, ರಾಜಣ್ಣ ಅವರನ್ನು ಬ್ಲಾಕ್‍ಮೇಲ್ ಮಾಡಲು ಸ್ಕ್ರೀನ್ ರೆಕಾರ್ಡ್ ವಿಡಿಯೊ ತುಣಕನ್ನು ಕಳುಹಿಸಲಾಗಿತ್ತು ಎನ್ನಲಾಗಿದೆ.. ಸದ್ಯ ಅದನ್ನು ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ರಾಜಣ್ಣನವರಿಗೆ ಕರೆ ಮಾಡಿರುವವರ ಮೊಬೈಲ್ ನಂಬರ್‌ಗಳ ಸಿಡಿಆರ್ ಅನ್ನು ಪಡೆದಿರುವ ಪೊಲೀಸರು ಅನುಮಾನಸ್ಪದ ನಂಬರ್‌ಗಳ ಬೆನ್ನು ಹತ್ತಿದ್ದಾರೆ. ಇನ್ನೊಂದೆಡೆ, ರಾಜಣ್ಣ ಅವರಿಗೆ ಯುವ ಕಾಂಗ್ರೆಸ್‍ನ ಕಾರ್ಯಕರ್ತರು ಹೆಚ್ಚಾಗಿ ಕರೆ ಮಾಡಿರುವ ಮಾಹಿತಿ ತಿಳಿದುಬಂದಿದೆ. ಹೀಗಾಗಿ ತುಮಕೂರು ಮತ್ತು ಬೆಂಗಳೂರಿನ ಯುವ ಕಾಂಗ್ರೆಸ್‍ನ ಕಾರ್ಯಕರ್ತರನ್ನು ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ.