ಬೆಂಗಳೂರು | ಪತ್ನಿಯನ್ನು ಹತ್ಯೆಗೈದು ಸೂಟ್ಕೇಸ್ನಲ್ಲಿ ತುಂಬಿದ್ದ ಪತಿಯ ಬಂಧನ
ಬೆಂಗಳೂರು : ಪತಿಯೇ ಪತ್ನಿಯನ್ನು ಕೊಂದು ಆಕೆಯ ದೇಹವನ್ನು ತುಂಡರಿಸಿ ಸೂಟ್ ಕೇಸ್‌ಗೆ ತುಂಬಿರುವ ಭೀಕರ ಘಟನೆ ಬೆಂಗಳೂರಿನ ಹುಳಿಮಾವು ಸಮೀಪದ ದೊಡ್ಡಕಮ್ಮನಹಳ್ಳಿಯಲ್ಲಿ ಗುರುವಾರ ನಡೆದಿತ್ತು. ಮಹಾರಾಷ್ಟ್ರ ಮೂಲದ ಆರೋಪಿ ಪತಿ ರಾಕೇಶ್ ಎಂಬಾತ ಪತ್ನಿ ಗೌರಿ ಅನಿಲ್ ಸಾಂಬೆಕರ್(32)ರನ್ನು ಹತ್ಯೆಗೈದಿದ್ದನು. ಅಲ್ಲದೆ, ಪತ್ನಿಯನ್ನು ಭೀಕರವಾಗಿ ಹತ್ಯೆ ಮಾಡಿರುವ ಆರೋಪಿ ಪತಿ ರಾಕೇಶ್ ಬಳಿಕ ಈ ವಿಚಾರವನ್ನು ಆಕೆಯ ಪೋಷಕರಿಗೆ ಕರೆ ಮಾಡಿ ಹೇಳಿ ಅಲ್ಲಿಂದ ಪರಾರಿಯಾಗಿದ್ದ. ಇದೀಗ ಆರೋಪಿಯನ್ನು ಮಹಾರಾಷ್ಟ್ರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಪ್ರಕರಣ ಸಂಬಂಧ ಮಾತನಾಡಿರುವ ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ ಅವರು, ಹುಳಿಮಾವು ಸಮೀಪದ ದೊಡ್ಡ ಕನ್ನಹಳ್ಳಿಯ ಮನೆಯಲ್ಲಿ ರಾಕೇಶ್ ಎಂಬಾತ ತನ್ನ ಪತ್ನಿ ಗೌರಿ ಎಂಬವರನ್ನು ಹತ್ಯೆ ಮಾಡಿ ಮೃತದೇಹವನ್ನು ತುಂಡರಿಸಿ ಸೂಟ್ ಕೇಸ್ನಲ್ಲಿ ತುಂಬಿ, ಬಳಿಕ ರೋಪಿ ರಾಕೇಶ್ ಮಹಾರಾಷ್ಟ್ರಕ್ಕೆ ತೆರಳಿದ್ದ. ಗುರುವಾರ ಆತ ಮುಂಬೈಗೆ ಹೋಗುತ್ತಿದ್ದಾಗ ಶಿರ್ವಾಲ್ ಪೊಲೀಸ್ ಠಾಣೆ ಸಮೀಪದಲ್ಲಿ ಅಸ್ವಸ್ಥನಾಗಿ ಬಿದ್ದಿದ್ದ. ನಂತರ ಸ್ಥಳಕ್ಕೆ ಧಾವಿಸಿದ್ದ ಅಲ್ಲಿನ ಪೊಲೀಸರು ಆತನನ್ನು ಸತಾರದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ತಡರಾತ್ರಿ ಪುಣೆಯ ಸಸೂನ್ ಆಸ್ಪತ್ರೆಗೆ ಆರೋಪಿಯನ್ನು ರವಾನಿಸಲಾಯಿತು. ಈಗ ಪುಣೆಯ ಸಸೂನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಸದ್ಯ ಆರೋಪಿಯನ್ನು ದಾಖಲಿಸಲಾಗಿರುವ ಮುಂಬೈ ಆಸ್ಪತ್ರೆಗೆ ಹುಳಿಮಾವು ಪೊಲೀಸರ ತಂಡ ಭೇಟಿ ನೀಡಿದ್ದು, ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಆರೋಪಿ ರಾಕೇಶ್ ವಿಷ ಸೇವನೆ ಮಾಡಿದ್ದ ಬಗ್ಗೆ ಅನುಮಾನ ಇದ್ದು, ಸದ್ಯ ಆತನಿಗೆ ಚಿಕಿತ್ಸೆ ನೀಡಿಲಾಗುತ್ತಿದೆ. ಆಸ್ಪತ್ರೆಯ ವೈದ್ಯರ ಅಭಿಪ್ರಾಯ ಮತ್ತು ಚಿಕಿತ್ಸೆ ಬಳಿಕ ಆರೋಪಿಯನ್ನು ಬೆಂಗಳೂರಿಗೆ ಕರೆತರಬಹುದು ಎಂದು ಮಾಹಿತಿ ನೀಡಿದ್ದಾರೆ.