ಹಾಲಿ ಗ್ರಾಹಕರಿಗೆ ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯವಲ್ಲ : ಬೆಸ್ಕಾಂ

Update: 2025-03-24 22:53 IST
ಹಾಲಿ ಗ್ರಾಹಕರಿಗೆ ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯವಲ್ಲ : ಬೆಸ್ಕಾಂ
  • whatsapp icon

ಬೆಂಗಳೂರು : ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಸ್ಥಾಪನಗಳಲ್ಲಿ ಅಳವಡಿಸುತ್ತಿರುವ ಸ್ಮಾರ್ಟ್ ಮೀಟರ್ ದರ ವೈಜ್ಞಾನಿಕವಾಗಿದ್ದು, ಹಾಲಿ ಗ್ರಾಹಕರಿಗೆ ಸ್ಮಾರ್ಟ್ ಮೀಟರ್ ಅಳವಡಿಕೆ ಐಚ್ಛಿಕವಾಗಿದೆ. ಹೊಸ ಹಾಗೂ ತಾತ್ಕಾಲಿಕ ಸಂಪರ್ಕಗಳಿಗೆ ಮಾತ್ರ ಸ್ಮಾರ್ಟ್ ಮೀಟರ್ ಅಳವಡಿಸಲಾಗುತ್ತಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್.ಶಿವಶಂಕರ್ ಸ್ಪಷ್ಟಪಡಿಸಿದ್ದಾರೆ.

ಸೋಮವಾರ ಇಲ್ಲಿನ ಕೆ.ಆರ್. ವೃತ್ತದಲ್ಲಿರುವ ಬೆಳಕು ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 2024ರಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆ ಕುರಿತು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಮಾರ್ಗಸೂಚಿ ಹೊರಡಿಸಿತ್ತು. ಅದರಂತೆ ಹಂತ ಹಂತವಾಗಿ ಸ್ಮಾರ್ಟ್ ಮೀಟರ್ ಅಳವಡಿಕೆ ಹಾಗೂ ಬದಲಾವಣೆ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದರು.

ವಿದ್ಯುತ್ ಮೀಟರ್ ಹಾಗೂ ಬಿಲ್ ಲೋಪದೋಷಗಳನ್ನು ಸರಿಪಡಿಸಲು ಸ್ಮಾರ್ಟ್ ಮೀಟರ್ ಅಳವಡಿಕೆ ಮಾಡುತ್ತಿದೆ. ಟಿಓಡಿ ಸೌಲಭ್ಯ(ಟೈಮ್ ಆಫ್ ದ ಡೇ), ರಿಮೋಟ್ ರೀಡಿಂಗ್, ಆಟೋ ಕನೆಕ್ಷನ್ ಮತ್ತು ಆಟೋ ಡಿಸ್‍ಕನೆಕ್ಷನ್ ಸ್ಮಾರ್ಟ್ ಮೀಟರ್ ಅಳವಡಿಕೆಯಿಂದ ಸಾಧ್ಯವಾಗಲಿದೆ. ವಿದ್ಯುತ್ ಕಡಿತವಾದಾಗ ವಿದ್ಯುತ್ ವಿತರಣಾ ಕಂಪನಿಗೆ ಕ್ಷಿಪ್ರ ಮಾಹಿತಿ ತಲುಪಿ, ವಿದ್ಯುತ್ ಮರು ಸ್ಥಾಪನೆ ಪ್ರಕ್ರಿಯೆ ಸುಲಭ ಮತ್ತು ತ್ವರಿತಗೊಳ್ಳುವುದು ಎಂದು ಅವರು ವಿವರಿಸಿದರು.

ಕೆಲ ರಾಜ್ಯಗಳಲ್ಲಿ ವಿದ್ಯುತ್ ಸರಬರಾಜು ಕಂಪನಿಗಳೇ ಸ್ಮಾರ್ಟ್ ಮೀಟರ್ ಖರೀದಿಸಿ ಗ್ರಾಹಕರಿಗೆ ಅಳವಡಿಸಿವೆ. ನಂತರ ಸ್ಮಾರ್ಟ್ ಮೀಟರ್ ವೆಚ್ಚ ಹಾಗೂ ಅದರ ತಾಂತ್ರಿಕ ನಿರ್ವಹಣ ವೆಚ್ವವನ್ನು ವಿದ್ಯುತ್ ದರಕ್ಕೆ ಹೊಂದಾಣಿಕೆ ಮಾಡಿ ವಸೂಲಿ ಮಾಡುತ್ತವೆ. ಅಲ್ಲದೇ, ಈ ರಾಜ್ಯಗಳಲ್ಲಿ ಏಕಕಾಲದಲ್ಲಿ ಎಲ್ಲ ಗ್ರಾಹಕರ ಸ್ಥಾಪನಗಳಿಗೂ ಸ್ಮಾರ್ಟ್ ಮೀಟರ್ ಅಳವಡಿಸುತ್ತಿವೆ ಎಂದು ಅವರು ಮಾಹಿತಿ ನೀಡಿದರು.

ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ದರ(ಸಿಂಗಲ್ ಫೇಸ್ - 4,998 ರೂ.) ಗ್ರಾಹಕರೇ ಭರಿಸುತ್ತಿದ್ದಾರೆ. ಜತೆಗೆ, ಪ್ರತಿ ತಿಂಗಳ ತಾಂತ್ರಿಕ ನಿರ್ವಹಣಾ ವೆಚ್ಚ 75 ರೂ. ಮೊತ್ತವನ್ನು ಬೆಸ್ಕಾಂ ಭರಿಸಿ, ನಂತರ ನಿರ್ವಹಣಾ ವೆಚ್ಚದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಾಗುತ್ತದೆ. ಇತರೆ ರಾಜ್ಯಗಳ ದರದಂತೆ ಲೆಕ್ಕ ಹಾಕಿದರೆ, ರಾಜ್ಯದಲ್ಲಿ ಈ ಮೊತ್ತ 116.65 ರೂ. ಆಗುತ್ತದೆ. ಹೀಗಾಗಿ ಇತರೆ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಸ್ಮಾರ್ಟ್ ಮೀಟರ್ ದರ ಹೆಚ್ಚಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾದುದು ಎಂದು ಡಾ. ಎನ್.ಶಿವಶಂಕರ್ ಸ್ಪಷ್ಟಪಡಿಸಿದರು.

ಸುದ್ದಿಗೋಷ್ಟಿಯಲ್ಲಿ ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ ಸೇರಿದಂತೆ ಮತ್ತಿತರರು ಇದ್ದರು.

ನಿಯಮಾನುಸಾರ ಟೆಂಡರ್: ಕೇಂದ್ರ ವಿದ್ಯುತ್ ಸಚಿವಾಲಯ ನಿಗದಿಪಡಿಸಿರುವ ಸಾಮಾನ್ಯ ಬಿಡ್ಡಿಂಗ್ ದಾಖಲೆಗಳ ಪ್ರಕಾರ ಹಾಗೂ ಕೆಟಿಪಿಪಿ ಕಾಯ್ದೆ ಅನುಸಾರ 2024ರ ಸೆ. 26ರಂದು ಟೆಂಡರ್ ಕರೆಯಲಾಗಿತ್ತು. ಬೆಸ್ಕಾಂ ನಿರ್ದೇಶಕರ ಮಂಡಳಿಯ ಅನುಮೋದನೆ ಮೇರೆಗೆ, ಕಡಿಮೆ ದರ ಬಿಡ್ ಮಾಡಿದ್ದ ರಾಜಶ್ರೀ ಎಲೆಕ್ಟ್ರಿಕಲ್ಸ್ ಸಂಸ್ಥೆಗೆ 2024ರ ಡಿ.23ರಂದು ಗುತ್ತಿಗೆ ನೀಡಲಾಯಿತು ಎಂದು ಡಾ. ಎನ್.ಶಿವಶಂಕರ್ ವಿವರಿಸಿದರು.

2025ರ ಫೆಬ್ರವರಿ 15ರಿಂದ ನಗರ ಪ್ರದೇಶಗಳಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆ ಪ್ರಕ್ರಿಯೆ ಆರಂಭವಾಗಿದ್ದು, ಮುಂಬರುವ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆ ಪ್ರಕ್ರಿಯೆ ಆರಂಭವಾಗಲಿದೆ. ಬೆಸ್ಕಾಂನಲ್ಲಿ ಸದ್ಯ, 30,600 ಸ್ಮಾರ್ಟ್ ಮೀಟರ್‍ಗಳ ದಾಸ್ತಾನು ಇದೆ.

-ಡಾ.ಎನ್.ಶಿವಶಂಕರ್, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ

ಸ್ಮಾರ್ಟ್ ಮೀಟರ್ ವೈಶಿಷ್ಟ್ಯ ಏನು?

ಹಳೆಯ ಮಾದರಿಯ ಮೀಟರ್‍ಗಳಿಗಿಂತ ವಿಶಿಷ್ಟವಾಗಿರುವ ಸ್ಮಾರ್ಟ್ ಮೀಟರ್‍ಗಳು ಜಿಪಿಆರ್‍ಎಸ್ ಆಧಾರಿತ ಸಂವಹನ ಡೇಟಾ ಸಂಗ್ರಹಣೆಗೆ ಸರ್ವರ್ ಹಾಗೂ ಕ್ಲೌಡ್ ಸಂಪರ್ಕ ಹೊಂದಿರುತ್ತದೆ. ಅಡ್ವಾನ್ಸ್ಡ್‌ ಮೀಟರಿಂಗ್ ಇನ್ಫ್ರಾಸ್ಟ್ರಕ್ಚರ್ ತಂತ್ರಜ್ಞಾನದ ಸ್ಮಾರ್ಟ್ ಮೀಟರ್‍ಗಳು ವಿದ್ಯುತ್ ಬಳಕೆ ಮಾಹಿತಿಯನ್ನು ಸಂಗ್ರಹಿಸುವ ಮೂಲಕ ಗ್ರಾಹಕರು ಹಾಗೂ ಎಸ್ಕಾಂಗಳ ನಡುವೆ ನೇರ ಸಂಪರ್ಕ ಕಲ್ಪಿಸಲಿದೆ. ಮೊಬೈಲ್ ಅಪ್ಲಿಕೇಶನ್ ಮೂಲಕ ನೈಜ ಸಮಯದ ವಿದ್ಯುತ್ ಬಳಕೆ, ವೊಲ್ಟೇಜ್, ಪವರ್ ಫ್ಯಾಕ್ಟರ್ ಮಾಹಿತಿ ಹಾಗೂ ರೀಚಾರ್ಜ್ ಸೌಲಭ್ಯ ಪಡೆಯಬಹುದಾಗಿದೆ. ಮುಂಚಿತವಾಗಿ ಹಣ ಪಾವತಿಸಿ ತಮ್ಮ ಆಯ್ಕೆಯ ದಿನಗಳ ಅವಧಿಗೆ ರಿಜಾರ್ಜ್ ಮಾಡಿಕೊಳ್ಳಬಹುದು. ಗ್ರಾಹಕರು ಮುಂಚಿತವಾಗಿ ಹಣ ಪಾವತಿಸಿ ವಿದ್ಯುತ್ ಬಳಸಬಹುದಾಗಿದೆ. ಒಂದು ವೇಳೆ ವಿದ್ಯುತ್ ಕಡಿತಗೊಂಡರೆ ಗ್ರಾಹಕರು ಬಿಲ್ ಪಾವತಿಸಿದ ತಕ್ಷಣ ವಿದ್ಯುತ್ ಸಂಪರ್ಕ ಪಡೆದುಕೊಳ್ಳಬಹುದಾಗಿದೆ.

ಏನಿದು ಆರ್‍ಡಿಎಸ್‍ಎಸ್?

2021-22 ನೇ ಸಾಲಿನಲ್ಲಿ ಕೇಂದ್ರದ ಇಂಧನ ಸಚಿವಾಲಯವು ಪರಿಷ್ಕೃತ ವಿತರಣಾ ವಲಯ ಯೋಜನೆ(ಆರ್‍ಡಿಎಸ್‍ಎಸ್) ರೂಪಿಸಿತ್ತು. ಈ ಯೋಜನೆ ಒಪ್ಪಿಕೊಂಡಿದ್ದರೆ, ಎಲೆಕ್ಟ್ರಿಕಲ್ ಮೂಲ ಸೌಕರ್ಯವನ್ನು ಒದಗಿಸಲು ಕೇಂದ್ರ ಸರಕಾರ ಶೇ.60ರಷ್ಟು ಅನುದಾನ ನೀಡುತ್ತಿತ್ತು. ಅಂದಿನ ಸರಕಾರ ಒಪ್ಪದ ಕಾರಣ ರಾಜ್ಯವು ಕೇಂದ್ರದ ಯೋಜನೆಯನ್ನು ಒಪ್ಪಿಕೊಂಡಿರಲಿಲ್ಲ. ಯೋಜನೆ ಒಪ್ಪಿಕೊಂಡಿದ್ದರೆ, ಎಲ್ಲರೂ ಸ್ಮಾರ್ಟ್ ಮೀಟರ್ ಅವಡಿಸಿಕೊಳ್ಳಲೇ ಬೇಕಾದ ಅನಿವಾರ್ಯತೆ ಇತ್ತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News