ಬೇಸಿಗೆಯಲ್ಲಿ ಕುಡಿಯಲು, ಕೃಷಿಗೆ ನೀರಿಗೆ ಕ್ರಮ : ಸಚಿವ ಶಿವರಾಜ ತಂಗಡಗಿ

Update: 2025-03-24 14:32 IST
ಬೇಸಿಗೆಯಲ್ಲಿ ಕುಡಿಯಲು, ಕೃಷಿಗೆ ನೀರಿಗೆ ಕ್ರಮ : ಸಚಿವ ಶಿವರಾಜ ತಂಗಡಗಿ
  • whatsapp icon

ಬೆಂಗಳೂರು : ಬೇಸಿಗೆಯಲ್ಲಿ ಕುಡಿಯುವ ನೀರು ಹಾಗೂ ಬೆಳೆಗಳಿಗೆ ಯಾವುದೇ ಸಮಸ್ಯೆಯಾಗದಂತೆ ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಿಗೆ ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ನೀರಾವರಿ ಸಲಹಾ ಸಮಿತಿ ಅಧ್ಯಕ್ಷ, ಸಚಿವ ಶಿವರಾಜ ಎಸ್. ತಂಗಡಗಿ ಹೇಳಿದ್ದಾರೆ.

ಶುಕ್ರವಾರ(ಮಾ.21) ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ಬಳಿಕ ಮಾತನಾಡಿದ ಅವರು, ಸದ್ಯ ಜಲಾಶಯದಲ್ಲಿ ನೀರಿನ ಸಾಮರ್ಥ್ಯ 18 ಟಿಎಂಸಿ, ಇದರಲ್ಲಿ ಡೆಟ್ ಸ್ಟೋರೇಜ್ 2 ಟಿಎಂಸಿ, ಅವಿಯಾಗುವಿಕೆ 1.2 ಟಿಎಂಸಿ, ಈ ಪೈಕಿ ರಾಜ್ಯದ ಪಾಲು 11 ಟಿಎಂಸಿ, ಆಂಧ್ರದ ಪಾಲು 4 ಟಿಎಂಸಿ ಇದೆ. ಈ ಹಿನ್ನೆಲೆಯಲ್ಲಿ ಜಲಾಶಯದಲ್ಲಿನ ನೀರಿನ ಲಭ್ಯತೆ ಆಧಾರಿಸಿ ನಾಲ್ಕು ಜಿಲ್ಲೆಗಳಿಗೆ ಕುಡಿಯುವ ನೀರು ಒಳಗೊಂಡಂತೆ ನೀರಾವರಿಗೆ ಈ ಕೆಳಗಿನಂತೆ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.

ತುಂಗಭದ್ರಾ ಎಡದಂಡೆ ಮುಖ್ಯಕಾಲುವೆ ಮೂಲಕ ಎ.1ರಿಂದ ಎ.10ರ ವರೆಗೆ ಕುಡಿಯುವ ನೀರು ಒಳಗೊಂಡಂತೆ ಹಾಗೂ ನಿಂತ ಬೆಳೆಗಳ ಸಂರಕ್ಷಣೆಗಾಗಿ 3ಸಾವಿರ ಕ್ಯೂಸೆಕ್‌ನಂತೆ ನೀರು ಹರಿಸಲಾಗುವುದು. ಎಡದಂಡೆ ವಿಜಯನಗರ ಕಾಲುವೆಗೆ ಎ.11ರಿಂದ ಮೇ 10ರ ವರೆಗೆ 150 ಕ್ಯೂಸೆಕ್‌ನಂತೆ ವಿತರಣಾ ಕಾಲುವೆ 1ರಿಂದ ಎ 11ವರೆಗೆ ಅಥವಾ ಈ ಕಾಲುವೆಯಡಿ ನೀರಿನ ಲಭ್ಯತೆಯು ಇರುವವರೆಗೆ ಮಾತ್ರ ಇದ್ದಲ್ಲಿ ಯಾವುದೇ ಮೊದಲು ಅದು ಅನ್ವಯಿಸುತ್ತದೆ ಎಂದು ಅವರು ಹೇಳಿದರು.

ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ ಲಭ್ಯವಾಗುವ ನೀರಿನಲ್ಲಿ ಎ.1ರಿಂದ ಎ.10ರ ವರೆಗೆ ಕುಡಿಯುವ ನೀರು ಒಳಗೊಂಡಂತೆ ಹಾಗೂ ನಿಂತ ಬೆಳೆಗಳ ಸಂರಕ್ಷಣೆಗಾಗಿ 450 ಕ್ಯೂಸೆಕ್‌ ನಂತೆ ನೀರು ಹರಿಸಲಾಗುವುದು. ಇನ್ನು ರಾಯ ಬಸವಣ್ಣ ಕಾಲುವೆಗೆ ಎ.1ರಿಂದ ಮೇ 31ರ ವರೆಗೆ ಲಭ್ಯವಾಗುವ ನೀರಿನಲ್ಲಿ 200ಕ್ಯೂಸೆಕ್‌ ನಂತೆ ನೀರು ಹರಿಸಲಾಗುವುದು ಎಂದು ಶಿವರಾಜ್ ಎಸ್. ತಂಗಡಗಿ ವಿವರಿಸಿದರು.

ಈ ಸಂದರ್ಭದಲ್ಲಿ ಸಚಿವರಾದ ಝಮೀರ್ ಅಹ್ಮದ್ ಖಾನ್, ಡಾ.ಶರಣ್ ಪ್ರಕಾಶ್ ಪಾಟೀಲ್, ಮಾಜಿ ಸಚಿವ ಬಿ.ನಾಗೇಂದ್ರ, ಶಾಸಕರಾದ ನಾಗರಾಜ್, ಎಚ್.ಆ‌ರ್.ಗವಿಯಪ್ಪ, ಹಂಪನಗೌಡ ಬಾದರ್ಲಿ, ಕೆ.ಎನ್.ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News