ಸ್ಮಾರ್ಟ್ ಮೀಟರ್ ಅಳವಡಿಕೆ ಹಗರಣ ಸರಕಾರದ ಮತ್ತೊಂದು ಸಾಧನೆ : ವಿ.ಸುನೀಲ್ ಕುಮಾರ್ ಟೀಕೆ

ವಿ.ಸುನೀಲ್ ಕುಮಾರ್
ಬೆಂಗಳೂರು : ವಿದ್ಯುತ್ ಸ್ಮಾರ್ಟ್ ಮೀಟರ್ ಅಳವಡಿಕೆ ಹಗರಣ ರಾಜ್ಯದ 60 ಪರ್ಸೆಂಟ್ ಸರಕಾರದ ಮತ್ತೊಂದು ಸಾಧನೆಯಾಗಿದ್ದು, ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಎಷ್ಟೇ ಸ್ಪಷ್ಟೀಕರಣ ನೀಡಿದರೂ ಮುಚ್ಚಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಮಾಜಿ ಇಂಧನ ಸಚಿವ ವಿ.ಸುನೀಲ್ ಕುಮಾರ್ ಟೀಕಿಸಿದ್ದಾರೆ.
ಬುಧವಾರ ಮಾಧ್ಯಮ ಹೇಳಿಕೆ ನೀಡಿರುವ ಅವರು, ಇದು ಇಂಧನ ಇಲಾಖೆಯಲ್ಲಿ ನಡೆದ ಅತಿದೊಡ್ಡ ಹಗರಣವಾಗಿದ್ದು, ದೇಶದ ಯಾವುದೇ ರಾಜ್ಯದಲ್ಲಿ 9,200 ರೂ. ಅನ್ನು ಸ್ಮಾರ್ಟ್ ಮೀಟರ್ ಅಳವಡಿಕೆಗೆ ನಿಗದಿ ಮಾಡಿದ ಉದಾಹರಣೆ ಇಲ್ಲ. ಇದು ಜನರ ಮೇಲೆ ಹೇರುತ್ತಿರುವ ಬೆಲೆ ಏರಿಕೆಯ ನೇರ ಬರೆಯಾಗಿದೆ ಎಂದರು.
ಸಚಿವ ಕೆ.ಜೆ.ಜಾರ್ಜ್ ಅವರು ಎಷ್ಟೇ ಸಮರ್ಥನೆ ಮಾಡಿಕೊಂಡರೂ, ನಡೆದ ಅವ್ಯವಹಾರವನ್ನು ಮುಚ್ಚಿಡುವುದಕ್ಕೆ ಸಾಧ್ಯವೇ ಇಲ್ಲ. ಕಪ್ಪು ಪಟ್ಟಿಗೆ ಸೇರಿದ ಕಂಪನಿಯನ್ನು ಸಚಿವರು ಈ ಪರಿಯಾಗಿ ಸಮರ್ಥಿಸಿಕೊಳ್ಳುವುದು ‘ಕುಂಬಳ ಕಾಯಿ ಕಳ್ಳ’ನ ಕತೆಯಂತಾಗಿದೆ ಎಂದು ವಿ.ಸುನೀಲ್ ಕುಮಾರ್ ವ್ಯಂಗ್ಯವಾಡಿದರು.
ವಿದ್ಯುತ್ ಸ್ಮಾರ್ಟ್ ಮೀಟರ್ ಹಗರಣ ಗ್ರಾಹಕರಿಗೆ ಕರೆಂಟ್ ಶಾಕ್ ಆಗಿದ್ದು, ಈ ಹಗರಣದ ಹಿಂದೆ ಕೆ.ಜೆ.ಜಾರ್ಜ್ ಅವರ ‘ಸನ್ ಸ್ಟ್ರೋಕ್’ ಹೆಚ್ಚು ಪ್ರಭಾವ ಬೀರಿದಂತೆ ಕಾಣುತ್ತಿದೆ ಎಂದು ಇಂಧನ ಇಲಾಖೆ ಮಾತನಾಡುತ್ತಿದೆ ಎಂದು ವಿ.ಸುನೀಲ್ ಕುಮಾರ್ ಆರೋಪಿಸಿದರು.