‘ಅರ್ಜಿ ಕರೆಯದೇ ರಾಜ್ಯೋತ್ಸವ ಪ್ರಶಸ್ತಿ’ ನೀಡುವ ಕುರಿತು ಸಿಎಂ ಜತೆ ಚರ್ಚೆ: ಶಿವರಾಜ ತಂಗಡಗಿ

ಬೆಂಗಳೂರು: ಕರ್ನಾಟಕ ರಾಜ್ಯೋತ್ಸವ ಸೇರಿದಂತೆ ಇತರ ಪ್ರಶಸ್ತಿಗಳಿಗೆ ಅರ್ಜಿ ಕರೆಯದೇ, ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುವ ಕುರಿತು ಸಿಎಂ, ಡಿಸಿಎಂ ಜತೆಗೆ ಚರ್ಚೆ ಮಾಡಲಾಗುದು. ಈ ಕುರಿತು ಸಾಹಿತಿಗಳು ಸಲಹೆ ನೀಡಬೇಕು ಎಂದು ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.
ಸೋಮವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿ ವತಿಯಿಂದ ಆಯೋಜಿಸಿದ್ದ ಗೌರವ ಪ್ರಶಸ್ತಿ-2023, ಸಾಹಿತ್ಯಶ್ರೀ ಪ್ರಶಸ್ತಿ-2023, ಪುಸ್ತಕ ಬಹುಮಾನ ಹಾಗೂ ದತ್ತಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾಣಗೆರೆ ವೆಂಕಟರಾಮಯ್ಯ ಅವರು ರಾಜ್ಯೋತ್ಸವ ಪ್ರಶಸ್ತಿಗೆ ಯಾಕೆ ಅರ್ಜಿ ಹಾಕಬೇಕು ಎಂದು ಇತ್ತೀಚಿಗೆ ವೇದಿಕೆಯೊಂದರಲ್ಲಿ ಮಾತನಾಡಿದ್ದರು. ನಾನು ಅದನ್ನು ಬೆಂಬಲಿಸುತ್ತೇನೆ ಎಂದು ಹೇಳಿದರು.
ಕೇಳಿ ಪ್ರಶಸ್ತಿ ಪಡೆಯಬಾರದು. ಪ್ರಶಸ್ತಿ ಗುರುತಿಸಿ ನೀಡುವ ಕೆಲಸವಾಗಬೇಕು. ಕಳೆದ ಬಾರಿ 20ರಿಂದ30 ಮಂದಿ ಅರ್ಜಿ ಹಾಕದ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ. ಮುಂದೆ ನೀಡಲಾಗುವ ರಾಜ್ಯೋತ್ಸವ ಪ್ರಶಸ್ತಿಗಳ ಕುರಿತು ಸಲಹೆ ನೀಡಬೇಕು. ಪ್ರಶಸ್ತಿ ನೀಡುವಾಗ ಸಾಮಾಜಿಕ ನ್ಯಾಯ, ಪ್ರಾದೇಶಿಕತೆ, ತುಳಿತಕ್ಕೊಳಗಾದ ಕಟ್ಟಕಡೆಯ ವ್ಯಕ್ತಿಗೂ ಕೂಡ ಪ್ರಶಸ್ತಿ ಸಿಗಬೇಕು. ಆಗ ಮಾತ್ರ ಪ್ರಶಸ್ತಿಗೆ ಗೌರವ ಬಂದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಸಾಹಿತ್ಯ ಅಕಾಡಮಿ ಅಧ್ಯಕ್ಷ ಪ್ರೊ.ಎಲ್.ಎನ್.ಮುಕುಂದರಾಜ್ ಮಾತನಾಡಿ, ಅನ್ಯಾಯವನ್ನು ಪರಿಹರಿಸಬೇಕಾದರೆ ಆ ಕಾಲದ ಲೇಖಕರನ್ನು ಗುರುತಿಸಿ ಪ್ರಶಸ್ತಿ ನೀಡಬೇಕು. ಸಾಹಿತ್ಯ ಅಕಾತಿಮಿ ಪ್ರಶಸ್ತಿಯಿಂದ ಅನೇಕರನ್ನು ಹಲವು ಕಾರಣಕ್ಕೆ ತಿರಸ್ಕರಿಸಲಾಗಿದೆ. ಕುವೆಂಪು ಅವರಿಗೆ 75 ವರ್ಷಕ್ಕೆ ಸಾಹಿತ್ಯ ಅಕಾಡಮಿ ಪ್ರಶಸ್ತಿ ಬಂದಿದೆ. ಉತ್ತರ ಕರ್ನಾಟಕದಲ್ಲಿ ಅನೇಕ ಪ್ರತಿಭಾವಂತ ಲೇಖಕರು ಇದ್ದಾರೆ. ಸಾಮಾಜಿಕ ನ್ಯಾಯ ಸೇರಿ ಎಲ್ಲವನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗುತ್ತಿದೆ. ಇಂದು ಸಂವಿಧಾನ, ಪ್ರಜಾಪ್ರಭುತ್ವ ಆತಂಕದಲ್ಲಿದೆ. ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಲೇಖಕರು ತುಂಬಾ ಮುಖ್ಯ. ಹೋರಾಟದ ಪ್ರಜ್ಞೆ ಇರುವವರನ್ನು ಗುರುತಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ನಾಡೋಜ ಪ್ರೊ.ಹಂಪ ನಾಗರಾಜಯ್ಯ, ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಗಾಯತ್ರಿ, ಸಾಹಿತ್ಯ ಅಕಾಡಮಿ ರಿಜಿಸ್ಟ್ರಾರ್ ಕರಿಯಪ್ಪ.ಎನ್ ಮತ್ತಿತರರು ಹಾಜರಿದ್ದರು.
ಡಾ.ಸಬಿಹಾ ಭೂಮಿಗೌಡ ಸೇರಿ 5 ಮಂದಿಗೆ ಪ್ರಶಸ್ತಿ ಪ್ರಧಾನ: ವಿಶ್ರಾಂತ ಕುಲಪತಿ ಡಾ.ಸಬಿಹಾ ಭೂಮಿಗೌಡ, ಹಿರಿಯ ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ, ಡಾ.ಶ್ರೀರಾಮ ಇಟ್ಟಣ್ಣವರ, ಡಾ.ಸಿ. ವೀರಣ್ಣ, ಎಂ.ಎಂ.ಮದರಿ ಅವರಿಗೆ 2023ರ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ಡಾ.ಎಂ.ಎಸ್.ಶೇಖರ್, ಜಿ.ಎನ್.ಮೋಹನ್, ಡಾ.ಟಿ..ಎಸ್.ವಿವೇಕಾನಂದ, ಡಾ.ಜಯಶ್ರೀ ಕಂಬಾರ, ಪ್ರೊ.ನಿಜಲಿಂಗಪ್ಪ ಯಮನಪ್ಪ ಮಟ್ಟಿಹಾಳ, ಡಾ.ಬಾಲಗುರುಮೂರ್ತಿ, ಪ್ರೊ.ಶಿವಗಂಗಾ ರುಮ್ಮಾ, ಡಾ.ರೀಟಾ ರೀನಿ, ಡಾ.ಕಲೀಮ್ ವುಲ್ಲಾ, ಡಾ.ವೆಂಕಟಗಿರಿ ದಳವಾಯಿ ಅವರಿಗೆ ಸಾಹಿತ್ಯಶ್ರೀ ಪ್ರಶಸ್ತಿ, 18 ಜನರಿಗೆ 2022ನೇ ಸಾಲಿನ ಪುಸ್ತಕ ಬಹುಮಾನ, 27 ಜನರಿಗೆ 2022ನೇ ಸಾಲಿನ ಪುಸ್ತಕ ದತ್ತಿ ಬಹುಮಾನ ನೀಡಿ ಗೌರವಿಸಲಾಯಿತು.