ಬಿಜೆಪಿ ಧರ್ಮಾಧಾರಿತವಾಗಿ ತನ್ನ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹವಣಿಸುತ್ತಿದೆ : ರಮೇಶ್ ಬಾಬು

Update: 2025-03-24 21:04 IST
ಬಿಜೆಪಿ ಧರ್ಮಾಧಾರಿತವಾಗಿ ತನ್ನ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹವಣಿಸುತ್ತಿದೆ : ರಮೇಶ್ ಬಾಬು
  • whatsapp icon

ಬೆಂಗಳೂರು : ಸಾಮಾಜಿಕ ನ್ಯಾಯದ ವಿರುದ್ಧವಾಗಿರುವ ಬಿಜೆಪಿ, ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಧರ್ಮಾಧಾರಿತವಾಗಿ ತನ್ನ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹವಣಿಸುತ್ತಿದೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಆರೋಪಿಸಿದ್ದಾರೆ.

ಸೋಮವಾರ ಪ್ರಕಟನೆ ಹೊರಡಿಸಿರುವ ಅವರು, ದೇಶದ ಸಾಮಾಜಿಕ ವಾಹಿನಿಯಿಂದ ಮುಸಲ್ಮಾನರನ್ನು ಆಚೆ ಇಡಬೇಕೆಂಬ ಬಿಜೆಪಿಯ ರಾಜಕೀಯ ಹೇಳಿಕೆಯು ಅವರ ಹತಾಶೆಯ ಹೇಳಿಕೆಯಾಗಿದ್ದು, ದುರುದ್ದೇಶದಿಂದ ಕೂಡಿದೆ ಎಂದಿದ್ದಾರೆ.

ಕಾಂಗ್ರೆಸ್ ಸರಕಾರವು ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಈ ಬಾರಿಯ ಆಯವ್ಯಯದಲ್ಲಿ ಸರಕಾರಿ ಕಾಮಗಾರಿಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಪ್ರವರ್ಗ-2ಎ ಮತ್ತು ಪ್ರವರ್ಗ-2ಬಿ ಗುತ್ತಿಗೆದಾರರಿಗೆ ಎರಡು ಕೋಟಿ ರೂ.ಗಳವರೆಗಿನ ಕಾಮಗಾರಿಗಳನ್ನು ನೀಡಲು ಘೋಷಣೆಯನ್ನು ಮಾಡಿದೆ. ಆರ್ಥಿಕವಾಗಿ ಈ ಸಮುದಾಯಗಳನ್ನು ಸಬಲೀಕರಣ ಮಾಡುವ ಉದ್ದೇಶದಿಂದ ಅಲ್ಪಸಂಖ್ಯಾತರನ್ನು ಒಳಗೊಂಡಂತೆ ಆಯವ್ಯಯದಲ್ಲಿ ಘೋಷಣೆಯನ್ನು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಮಾಡಲಾಗಿದೆ ಎಂದು ರಮೇಶ್ ಬಾಬು ತಿಳಿಸಿದ್ದಾರೆ.

ರಾಜಕೀಯ ವೈಷಮ್ಯಕ್ಕಾಗಿ ಮುಸಲ್ಮಾನರನ್ನು ದ್ವೇಷ ಮಾಡುವ ಬಡಾಯಿ ಜನತಾ ಪಾರ್ಟಿ(ಬಿಜೆಪಿ), ಸತ್ಯವನ್ನು ತಿರುಚಿ ಸುಳ್ಳು ಸುದ್ದಿಗಳ ಮೂಲಕ ಜನರನ್ನು ಧಾರ್ಮಿಕವಾಗಿ ಕೆರಳಿಸುವ ಸಂಚನ್ನು ಮಾಡುತ್ತಿದೆ ಎಂದು ರಮೇಶ್ ಬಾಬು ಹೇಳಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News