ಬೆಂಗಳೂರು | ಪರಿಶಿಷ್ಟರ ಒಳಮೀಸಲಾತಿಗಾಗಿ ಆಗ್ರಹಿಸಿ ಬೃಹತ್ ಧರಣಿ

ಬೆಂಗಳೂರು : ಪರಿಶಿಷ್ಟ ಜಾತಿ ಒಳ ಮೀಸಲಾತಿಗಾಗಿ ಆಗ್ರಹಿಸಿ ಹರಿಹರದಿಂದ ಪ್ರಾರಂಭವಾದ ಕ್ರಾಂತಿಕಾರಿ ಪಾದಯಾತ್ರೆಯು ಶುಕ್ರವಾರ ಬೆಂಗಳೂರು ತಲುಪಿದ್ದು, ಫ್ರೀಡಂ ಪಾರ್ಕ್‍ನಲ್ಲಿ ಬೃಹತ್ ಬೃಹತ್ ಧರಣಿ ಸತ್ಯಾಗ್ರಹವನ್ನು ನಡೆಸಲಾಯಿತು.
ಈ ವೇಳೆ ಮಾತನಾಡಿದ ಒಳಮೀಸಲಾತಿ ಹೋರಾಟಗಾರ ಅಂಬಣ್ಣ ಅರೋಲಿಕರ್, ‘ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಎಸ್‍ಡಿಪಿಐ ಎಲ್ಲರೂ ಹೊಲೆಯ ಮತ್ತು ಮಾದಿಗ ಸಮುದಾಯಗಳಿಗೆ ಮೋಸವಾಗುತ್ತದೆ ಅದಕ್ಕಾಗಿ ಒಳಮೀಸಲಾತಿ ಜಾರಿಗೊಳಿಸಬಾರದು ಎಂದು ಹೇಳಿದ್ದವು. ಆದರೆ, ಸುಪ್ರೀಂ ಕೋರ್ಟ್ ಆದೇಶ ಇಡೀ ದೇಶಕ್ಕೆ ಸಂಬಂಧಿಸಿದೆ. ತೆಲಂಗಾಣ, ಆಂದ್ರಪ್ರದೇಶ, ತಮಿಳುನಾಡಿನಲ್ಲಿ ಒಳಮೀಸಲಾತಿ ಜಾರಿಯಾಗಿದೆ’ ಎಂದು ಹೇಳಿದರು.
ಇಡೀ ಭಾರತದಲ್ಲಿ ಒಳಮೀಸಲಾತಿಯನ್ನು ಜಾರಿಗೊಳಿಸಬೇಕು. ಸುಪ್ರೀಂ ಕೋರ್ಟ್ ಆದೇಶ ಕೇವಲ ಕರ್ನಾಟಕಕ್ಕೆ ಸೀಮಿತವಾಗಿಲ್ಲ. ಸಿದ್ದರಾಮಯ್ಯ ಅವರು ನ್ಯಾಯಾಲಯವನ್ನು ಗೌರವಿಸುವ ಸೌಜನ್ಯ ಇದ್ದರೆ ಒಳಮೀಸಲಾತಿಯನ್ನು ಜಾರಿಗೊಳಿಸಬೇಕು. ಇಲ್ಲವಾದರೆ ನ್ಯಾಯಾಲಯಕ್ಕೆ ವಿರುದ್ಧ ನಿಂತಂತೆ ಎಂದು ಅವರು ಅಭಿಪ್ರಾಯಪಟ್ಟರು.
ಧರಣಿಯಲ್ಲಿ ಹೋರಾಟಗಾರರಾದ ಬಿ.ಆರ್.ಭಾಸ್ಕರ್ ಪ್ರಸಾದ್, ಪಿ.ಮೂರ್ತಿ, ಎಸ್‍ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮತ್ತಿತರರು ಹಾಜರಿದ್ದರು.