ಅಧಿಕಾರ ಪಡೆಯುವ ಉದ್ದೇಶಕ್ಕಾಗಿ ತತ್ವ ಸಿದ್ದಾಂತವನ್ನೇ ಮಾರಿಕೊಂಡ ಛಲವಾದಿ ನಾರಾಯಣಸ್ವಾಮಿ : ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

Update: 2025-03-25 10:46 IST
ಅಧಿಕಾರ ಪಡೆಯುವ ಉದ್ದೇಶಕ್ಕಾಗಿ ತತ್ವ ಸಿದ್ದಾಂತವನ್ನೇ ಮಾರಿಕೊಂಡ ಛಲವಾದಿ ನಾರಾಯಣಸ್ವಾಮಿ : ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ಛಲವಾದಿ ನಾರಾಯಣಸ್ವಾಮಿ,ಬಿ.ಕೆ.ಹರಿಪ್ರಸಾದ್

  • whatsapp icon

ಬೆಂಗಳೂರು : ಅಧಿಕಾರ ಪಡೆಯುವ ಏಕೈಕ ಉದ್ದೇಶಕ್ಕಾಗಿ ತತ್ವ ಸಿದ್ದಾಂತವನ್ನೇ ಮಾರಿಕೊಂಡು, ಬೆಳೆಸಿದವರನ್ನೇ ಬೆನ್ನು ತೋರಿಸಿ, ಎರಡು ಬಗೆಯುವ ಛಲವಾದಿ ನಾರಾಯಣಸ್ವಾಮಿಯವರೇ, ಸಂಘ ಪರಿವಾರ ತೊಟ್ಟಿದ್ದ ಚೆಡ್ಡಿಗಳಿಂದ ಪ್ಯಾಂಟಿಗೆ ಶಿಫ್ಟ್ ಆದ ಮೇಲೆ ಅವರು ಹಾಕಿ ಬಿಸಾಡಿದ್ದ ಚೆಡ್ಡಿಗಳನ್ನು ಒಟ್ಟು ಮಾಡಿ ತಲೆಯ ಮೇಲೆ ಹೊತ್ತು ತಿರುಗಿದ ಕಾರಣಕ್ಕಾಗಿ ಪರಿಷತ್ತಿನ ವಿಪಕ್ಷ ನಾಯಕ ಸ್ಥಾನ ಒಲಿದು ಬಂದಿರೋದು ಸಾರ್ವಜನಿಕ ಸತ್ಯ ಎಂದು ಬಿ.ಕೆ.ಹರಿಪ್ರಸಾದ್ ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿನ ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ವಿಪಕ್ಷ ಸ್ಥಾನದ ಘನತೆ, ಗೌರವಕ್ಕೆ ತಕ್ಕುದಾಗಿ ಎಂದೂ ನಡೆದುಕೊಳ್ಳದೇ ಗುಲಾಮಗಿರಿಯನ್ನೇ ಬಂಡವಾಳ ಮಾಡಿಕೊಂಡರೆ ಹೇಗೆ? ಸಾಂವಿಧಾನಿಕ ಹುದ್ದೆ ನಿಭಾಯಿಸುವುದೆಂದರೆ ಹೌಸಿಂಗ್ ಬೋರ್ಡ್ ನಲ್ಲಿ ಶಿಕ್ಷಣ ಸಂಸ್ಥೆಗಾಗಿ ಸಿಎ ಸೈಟ್ ಪಡೆದು ಹೊಸಕೋಟೆಯಲ್ಲಿ ಧಮ್ ಬಿರಿಯಾನಿ ಹೋಟೆಲ್ ಬಾಡಿಗೆ ಪಡೆಯುವಷ್ಟು ಸುಲಭವಲ್ಲ. ನಿಮ್ಮ ಸ್ವಚ್ಛ ಚಾರಿತ್ರ್ಯ, ಪ್ರಾಮಾಣಿಕ, ಆವಿಷ್ಕಾರಿ ಪ್ರಧಾನಿ ಗುಜರಾತಿನಲ್ಲಿ "ರಾಜಧರ್ಮ" ಪಾಲಿಸದೆ ಗೋದ್ರಾ ಹತ್ಯಾಕಾಂಡದಲ್ಲಿ ನಡೆಸಿದ ಹೇಯ ಕೃತ್ಯಗಳಿಗಾಗಿ ನಿಮ್ಮ ಪಕ್ಷದ "ಅಜಾತಶತೃ" ವಾಜಪೇಯಿಯಿಂದ ಛೀಮಾರಿ ಹಾಕಿಸಿಕೊಂಡ ಇತಿಹಾಸ ಹೇಳಿಸಿಕೊಳ್ಳಿ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ನಾನು ನಿಭಾಯಿಸಿದ ಜವಾಬ್ದಾರಿ, ಪಕ್ಷ ನೀಡಿದ ಅವಕಾಶ, ಸಾಂವಿಧಾನಿಕ ಹುದ್ದೆಗಳ ನಿರ್ವಹಣೆಗಳನ್ನು ನಿಮ್ಮ ಇಡೀ ರಾಜಕೀಯ ಜೀವನದಲ್ಲಿ ಹತ್ತಿರದಿಂದ ನೋಡಲೂ ಸಾಧ್ಯವಿಲ್ಲ. ಅದರ ಬಗ್ಗೆ ತಲೆಕೆಡಿಸಿಕೊಂಡು ಆರೋಗ್ಯ ಹಾಳು ಮಾಡಿಕೊಳ್ಳಬೇಡಿ ಎಂದು ತಿಳಿಸಿದ್ದಾರೆ.

ದಲಿತ ಸಮುದಾಯದಿಂದ ಬಂದು, ರಾಜಕೀಯ ಅಧಿಕಾರಕ್ಕಾಗಿ ಬಾಬಾ ಸಾಹೇಬರ ಸಿದ್ದಾಂತವನ್ನೇ ತೊರೆದು, ಗೋಸುಂಬೆಯ ಥರ ಬಣ್ಣ ಬದಲಾಯಿಸಿದಂತೆ ಅಧಿಕಾರಕ್ಕಾಗಿ ಸಂವಿಧಾನ ವಿರೋಧಿಗಳ ಸಖ್ಯ ಬೆಳಸಿ, ಮನಸ್ಮೃತಿಯ ಪ್ರತಿಪಾದಕರಾಗಿ ಬದಲಾದ ನಿಮ್ಮ ಮನಸ್ಥಿತಿಯ ಬಗ್ಗೆ ಮರುಕವಿದೆ. ನಿಮ್ಮಿಂದ ರಾಜಕೀಯ ನೈತಿಕತೆ, ಜನಪರ ಕೆಲಸಗಳ ಬಗ್ಗೆ ಪಾಠ ಹೇಳಿಸಿಕೊಳ್ಳುವ ದಾರಿದ್ರ್ಯ ನನಗಂತೂ ಬಂದಿಲ್ಲ, ಬರುವುದೂ ಇಲ್ಲ ಎಂದು ಹೇಳಿದ್ದಾರೆ.

ಕೊನೆಯದಾಗಿ, ನಿಮ್ಮ ಎಕ್ಸ್ ನಲ್ಲಿ "ಹನಿ ಟ್ರ್ಯಾಪ್, ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಮತ್ತು ಎಲ್ಲಾ ವಲಯಗಳ ಬೆಲೆ ಏರಿಕೆ" ಬಗ್ಗೆ ಮಾತಾಡಿ ನಿಮ್ಮದೇ ಪಕ್ಷದ ಆಂತರಿಕ ವಿಷಯ ಹಾಗೂ ಸರ್ಕಾರದ ವಿಫಲತೆಯ ಬಗ್ಗೆ ಆಕ್ರೋಶ ಹೊರಹಾಕಿದಂತೆ ಕಾಣುತ್ತಿದೆ. ಅದಕ್ಕಾಗಿಯಾದರೂ ನಿಮ್ಮನ್ನು ಅಭಿನಂದಿಸಲೇಬೇಕು ಎಂದು ಟೀಕಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News