ರನ್ಯಾರಾವ್ ಪ್ರಕರಣ | ಮುಖ್ಯಮಂತ್ರಿಗಳಿಗೆ ಮಧ್ಯಂತರ ವರದಿ ಸಲ್ಲಿಕೆ ಬಗ್ಗೆ ಖಚಿತವಿಲ್ಲ: ಡಾ.ಜಿ.ಪರಮೇಶ್ವರ್
Update: 2025-03-25 18:24 IST

ಡಾ.ಜಿ.ಪರಮೇಶ್ವರ್
ಬೆಂಗಳೂರು: ರನ್ಯಾರಾವ್ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಪ್ರೋಟೋಕಾಲ್ ಉಲ್ಲಂಘನೆ ತನಿಖೆಯ ವಿಚಾರವಾಗಿ ಮುಖ್ಯಮಂತ್ರಿಗಳಿಗೆ ಯಾವುದೇ ಮಧ್ಯಂತರ ವರದಿ ಸಲ್ಲಿಕೆಯಾಗಿರುವ ಬಗ್ಗೆ ಖಚಿತವಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದ ತನಿಖಾಧಿಕಾರಿ ಗೌರವ್ ಗುಪ್ತಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಧ್ಯಂತರ ವರದಿಯನ್ನು ಕೊಟ್ಟಿರಬಹುದು. ನನಗೆ ಆ ಬಗ್ಗೆ ಮಾಹಿತಿ ಇಲ್ಲ. ಒಂದು ವಾರ ಸಮಯ ಕೊಟ್ಟಿದ್ದೆವು, ಅವರು ವರದಿ ಕೊಟ್ಟ ಮೇಲೆ ಕ್ರಮದ ಬಗ್ಗೆ ತೀರ್ಮಾನಿಸುತ್ತೇವೆ ಎಂದರು.
ಇದೇ ವೇಳೆ ಪ್ರಮುಖ ಸಚಿವರ ಫೋನ್ ಕದ್ದಾಲಿಕೆ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಡಾ.ಜಿ.ಪರಮೇಶ್ವರ್, ಯಾರೂ ದೂರು ಕೊಟ್ಟಿಲ್ಲ, ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಆರ್.ಅಶೋಕ್ ಮಾತನಾಡಿದ್ದಾರೆ. ದೂರು ಕೊಟ್ಟರೆ ಕ್ರಮ ಆಗಲಿದೆ ಎಂದರು.