ಮಂಡ್ಯ ತಾಲೂಕು ವ್ಯಾಪ್ತಿಯ ವಿದ್ಯಾರ್ಥಿ ನಿಲಯಗಳ ನಿರ್ವಹಣೆಯಲ್ಲಿ ಭಾರೀ ಅವ್ಯವಹಾರ : ವರದಿ

Update: 2025-03-25 14:14 IST
Editor : Ashik | Byline : ಜಿ.ಮಹಾಂತೇಶ್
ಮಂಡ್ಯ ತಾಲೂಕು ವ್ಯಾಪ್ತಿಯ ವಿದ್ಯಾರ್ಥಿ ನಿಲಯಗಳ ನಿರ್ವಹಣೆಯಲ್ಲಿ ಭಾರೀ ಅವ್ಯವಹಾರ : ವರದಿ
  • whatsapp icon

ಬೆಂಗಳೂರು : ಮಂಡ್ಯ ತಾಲೂಕು ವ್ಯಾಪ್ತಿಯಲ್ಲಿರುವ ವಿದ್ಯಾರ್ಥಿ ನಿಲಯಗಳ ನಿರ್ವಹಣೆಯಲ್ಲಿ ಭಾರೀ ಅವ್ಯವಹಾರ ನಡೆದಿದೆ. ಟಿವಿ, ಬೆಡ್ ಕವರ್, ಸೊಳ್ಳೆ ಪರದೆ ಸೇರಿದಂತೆ ಇನ್ನಿತರೆ ವಸ್ತುಗಳ ಖರೀದಿ ಹೆಸರಿನಲ್ಲಿ ಭಾರೀ ಪ್ರಮಾಣದಲ್ಲಿ ಹಣ ದುರುಪಯೋಗವಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಿಗೆ ವರದಿ ಸಲ್ಲಿಸಿರುವ ಬಗ್ಗೆ 'ದಿ ಫೈಲ್' ವರದಿ ಮಾಡಿದೆ.

ಅವ್ಯವಹಾರದ ಬಗ್ಗೆ ಡಾ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಉಪ ವ್ಯವಸ್ಥಾಪಕಿ ಪ್ರತಿಭ ಎಸ್. ನೇತೃತ್ವದ ತಂಡವು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಿಗೆ 2024ರ ಆಗಸ್ಟ್ 19ರಂದು ವರದಿ ಸಲ್ಲಿಸಿದೆ ಎಂದು ಹೇಳಲಾಗಿದೆ.

2020-21ನೇ ಸಾಲಿನಿಂದ 2023-24ನೇ ಸಾಲಿನವರೆಗೆ ಸರಕಾರವು ಮಂಡ್ಯ ತಾಲೂಕಿನ ವಿವಿಧ ವಿದ್ಯಾರ್ಥಿ ನಿಲಯಗಳಿಗೆ ಅನುದಾನ ಬಿಡುಗಡೆ ಮಾಡಿತ್ತು. ಈ ಅನುದಾನವನ್ನು ಮಿತವಾಗಿ ವೆಚ್ಚ ಮಾಡಿಲ್ಲ. ಬೇಡಿಕೆ ಇಲ್ಲದಿದ್ದರೂ ಅನಗತ್ಯವಾಗಿ ವಸ್ತುಗಳನ್ನು ಖರೀದಿ ಮಾಡಲಾಗಿದೆ. ಅಲ್ಲದೆ ಮಾರುಕಟ್ಟೆ ದರಕ್ಕಿಂತಲೂ ದುಪ್ಪಟ್ಟು ಬೆಲೆಯಲ್ಲಿ ಟಿವಿ, ಬೆಡ್ ಕವರ್ ಸೇರಿದಂತೆ ವಸ್ತುಗಳನ್ನು ಖರೀದಿಸಿರುವುದನ್ನು ತನಿಖಾ ತಂಡವು ಬಯಲು ಮಾಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಟಿವಿ ಖರೀದಿ, ಬೆಡ್ ಕವರ್ಸ್ ಖರೀದಿ, ಗ್ಯಾಸ್ ಸ್ಟೌವ್ ರಿಪೇರಿ, ಕಂಪ್ಯೂಟರ್ ರಿಪೇರಿ, ಬಾಗಿಲು ರಿಪೇರಿ, ಗ್ರೈಂಡರ್ ಮೋಟಾರ್ ರಿಪೇರಿ, ಫ್ಯಾನ್ ರೆಗ್ಯುಲೇಟರ್, ವಾಟರ್ ಫ್ಯೂರಿಫೈಯರ್, ಸೊಳ್ಳೆ ಪರದೆ, ಸೇರಿದಂತೆ ಇನ್ನಿತರೆ ವಸ್ತುಗಳ ಖರೀದಿಯಲ್ಲಿ ಅಕ್ರಮಗಳು ನಡೆದಿದೆ ಮಾತ್ರವಲ್ಲದೆ ಕೆಲವೊಂದು ವಸ್ತುಗಳ ರಿಪೇರಿಗೆ ಪದೇ ಪದೇ ವೆಚ್ಚ ಭರಿಸಿರುವುದು ಕಂಡು ಬಂದಿದೆ.

2021-22ನೇ ಸಾಲಿನಲ್ಲಿ ಕಿಯೋನಿಕ್ಸ್ ಸಂಸ್ಥೆಯಿಂದ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರದಲ್ಲಿ ಟಿ ವಿ ಖರೀದಿಸಲಾಗಿದೆ ಎಂದು ಹೇಳಲಾಗಿದೆ. ಕೊತ್ತತ್ತಿ, ಮಂಗಲ, ಕೆರೆಗೋಡು, ಮಂಡ್ಯ ಟೌನ್, ಶಿವಪುರ, ಬಸರಾಳುವಿನಲ್ಲಿರುವ 8 ವಿದ್ಯಾರ್ಥಿ ನಿಲಯಗಳಿಗೆ ತಲಾ 93,440ರೂ. ದರದಲ್ಲಿ ಒಟ್ಟು 7,47,520 ರೂ ವೆಚ್ಚದಲ್ಲಿ ಟಿವಿ ಖರೀದಿಸಲಾಗಿತ್ತು. ಆದರೆ ಇದೇ ಟಿವಿಗೆ ಆನ್ ಲೈನ್ನಲ್ಲಿ ತಲಾ 47,990 ರೂ. ಬೆಲೆಯಿದೆ. ಇದರ ಪ್ರಕಾರ, 8 ಟಿವಿಗಳಿಗೆ 3,83,920 ರೂ. ವೆಚ್ಚವಾಗಲಿದೆ. ಆದರೆ ಇಲಾಖೆಯು 3,63,600ರೂ. ಹೆಚ್ಚುವರಿ ವೆಚ್ಚ ಮಾಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕೊತ್ತತ್ತಿ ಸೇರಿದಂತೆ 14 ಸರಕಾರಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳಿಗೆ 2021-22ನೇ ಸಾಲಿನಲ್ಲಿ 2,76,236ರೂ. ದರದಲ್ಲಿ ಬೆಡ್ ಕವರ್ಸ್‌ಗಳನ್ನು ಸಿರಾ ಎಂಟರ್ ಪ್ರೈಸೆಸ್, ಎಸ್‌ಬಿಎಂಜೆಪಿ ಎಂಟರ್ ಪ್ರೈಸೆಸ್ನಿಂದ ಖರೀದಿಸಿತ್ತು. ಬೆಡ್ ಕವರ್ಸ್‌ಗಳಿಗೆ ವಿದ್ಯಾರ್ಥಿ ನಿಲಯಗಳ ವಾರ್ಡನ್‌ಗಳು ಯಾವುದೇ ಬೇಡಿಕೆ ಸಲ್ಲಿಸಿರಲಿಲ್ಲ. ಆದರೂ ನಿಯಮಬಾಹಿರವಾಗಿ ಎರಡೆರಡು ಬಾರಿ ಡಿಸಿ ಬಿಲ್ ಮುಖಾಂತರ ಬೆಡ್ ಕವರ್ಸ್‌ಗಳನ್ನು ಬೇರೆ ಬೇರೆ ಸಂಸ್ಥೆಗಳಿಂದ ಹೆಚ್ಚಿನ ಮೊತ್ತ ಪಾವತಿಸಿ ಖರೀದಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವಿದ್ಯಾರ್ಥಿ ನಿಲಯಗಳಲ್ಲಿ ವಾಟರ್ ಫ್ಯೂರಿಫೈಯರ್‌ಗಳು ಇದ್ದರೂ ಅನಗತ್ಯವಾಗಿ ವಾಟರ್ ಫ್ಯೂರಿಫೈಯರ್‌ಗಳನ್ನು ಖರೀದಿಸಲಾಗಿದೆ. ಇದಕ್ಕೆ 4,43,370ರೂ. ವ್ಯಯಿಸಲಾಗಿದೆ. ಇದಲ್ಲದೆ ಅನಗತ್ಯವಾಗಿ ರಿಪೇರಿ ವೆಚ್ಚವನ್ನು ಭರಿಸಲಾಗಿದೆ ಎಂದು ಹೇಳಲಾಗಿದೆ.

2023-24ನೇ ಸಾಲಿನಲ್ಲಿ ಮಂಡ್ಯ ತಾಲೂಕುವೊಂದರಲ್ಲೇ ಡಿಸಿ ಬಿಲ್‌ಗಳ ಮೂಲಕ 86,05,365 ರೂ.ಗಳನ್ನು ಖಜಾನೆಯಿಂದ ವ್ಯಯಿಸಲಾಗಿದೆ. ಈ ಮೊತ್ತವನ್ನು ಬೇರೆ ಬೇರೆ ಸಂಸ್ಥೆಗಳಿಗೆ ಪಾವತಿಸಲಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ 2,08,99,815 ರೂ.ಗಳನ್ನು ಡಿಸಿ ಬಿಲ್‌ಗಳ ಮೂಲಕ ಬೇರೆ ಬೇರೆ ಸಂಸ್ಥೆಗಳಿಗೆ ಪಾವತಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

2020-21ನೇ ಸಾಲಿನಲ್ಲಿ ಮಂಡ್ಯ ತಾಲೂಕು ವ್ಯಾಪ್ತಿಯಲ್ಲಿರುವ ವಿದ್ಯಾರ್ಥಿ ನಿಲಯಗಳಿಗೆ ನಿರ್ವಹಣೆ ಹೆಸರಿನಲ್ಲಿ ಡಿ ಸಿ ಬಿಲ್ ಮೂಲಕ ಖಜಾನೆಯಿಂದ ಹಣ ಪಾವತಿಸಿರುವುದು ಕೂಡ ತನಿಖೆಯಲ್ಲಿ ಬಯಲಾಗಿದೆ ಎಂದು 'ದಿ ಫೈಲ್' ವರದಿಯಲ್ಲಿ ಉಲ್ಲೇಖಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ಜಿ.ಮಹಾಂತೇಶ್

contributor

Similar News