ಎಲ್ಲಿ ಅನ್ಯಾಯವಾಗುತ್ತೆ ಅಲ್ಲಿ ತಮಟೆ ನುಡಿಸುತ್ತೇನೆ : ಭರತ್ ಡಿಂಗ್ರಿ

ಸಂದರ್ಶನ: ಮಾಳಿಂಗರಾಯ ಕೆಂಭಾವಿ
ಬೆಂಗಳೂರು : ತಮಟೆಗೂ ದಲಿತ ಚಳವಳಿಗೂ ದೊಡ್ಡ ಸಂಬಂಧವಿದೆ. ಎಲ್ಲಿ ಅನ್ಯಾಯವಾಗುತ್ತೆ ಅಲ್ಲಿ ನಾನು ತಮಟೆ ನುಡಿಸುತ್ತೇನೆ ಎಂದು ತಮಟೆ ಕಲಾವಿದ ಭರತ್ ಡಿಂಗ್ರಿ ಅಭಿಪ್ರಾಯಪಟ್ಟಿದ್ದಾರೆ.
ತಮಟೆ ಎನ್ನುವುದು ದಲಿತ ಸಮುದಾಯಗಳ ಅಸ್ತಿತ್ವವಾಗಿದೆ. ಅನೇಕ ವರ್ಷಗಳಿಂದ ತಮಟೆಯನ್ನು ನೋಡುವ ಕ್ರಮ ಬದಲಾಗಿಲ್ಲ. ಅದು ಬದಲಾಗಬೇಕು ಎನ್ನುವ ನಿಟ್ಟಿನಲ್ಲಿ ತಮಟೆ ಶಿಬಿರಗಳನ್ನು ಆಯೋಜಿಸಿದ್ದೇನೆ ಎನ್ನವ ವಿಷಯವನ್ನು ವಾರ್ತಾಭಾರತಿಯ ವಿಶೇಷ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ವಾ.ಭಾ : ನಿಮಗೆ ತಮಟೆ ನುಡಿಸುವ ಆಸಕ್ತಿ ಬಂದಿರುವುದು ಯಾವಾಗಿನಿಂದ?
ಭರತ್ ಡಿಂಗ್ರಿ : ನಾನು ಚಿಕ್ಕ ವಯಸ್ಸಿನಿಂದಲೇ ನನ್ನ ತಂದೆ ಜೊತೆ ಬೀದಿ ನಾಟಕಕ್ಕೆ ಹೋಗುತ್ತಿದ್ದೆ. ಅಲ್ಲಿಂದಲೇ ನಾನು ತಮಟೆ ನುಡಿಸುವುದನ್ನು ಕಲಿತಿದ್ದೇನೆ. ಚಿಕ್ಕ ವಯಸ್ಸಿನಲ್ಲೇ ಶಾಲೆ ಬಿಟ್ಟು ತಮಟೆ ಅಪ್ಪನ ಜತೆ ತಮಟೆ ನುಡಿಸುವ ಕಾರ್ಯಕ್ರಮಕ್ಕೆ ಹೋಗುತ್ತಿದ್ದೆ, ಶಾಲೆಯಲ್ಲಿಯೇ ಹಾಡು ಹಾಡುತ್ತಾ ತಮಟೆ ನುಡಿಸುತ್ತಿದ್ದೆ.
ವಾ.ತಾ : ತಮಟೆ ನುಡಿಸುವಾಗ ಕೆಲವು ಕಡೆ ಅಸ್ಪಶ್ಯತೆ ನಡೆಯುತ್ತೆ, ಈ ಬಗ್ಗೆ ಹೇಳುವುದಾದರೆ?
ಭರತ್ ಡಿಂಗ್ರಿ : ಹಿಂದೆ ನಮ್ಮ ಊರಿನಲ್ಲಿ ಮೇಲ್ಜಾತಿಯ ಹುಡುಗನಿಗೆ ತಮಟೆ ಕಲಿಸುವಾಗ ಮನೆಯೊಳಗೆ ಹೋಗುತ್ತಿದ್ದೆ. ಒಂದು ದಿನ ಕಲಿಯುವ ಹುಡುಗನ ದೊಡ್ಡಪ್ಪ, ಬೈದು ಮನೆಯಿಂದ ಹೊರಗೆ ಕಳುಹಿಸಿದ್ದ. ಆವಾಗ ನನಗೆ ಏನು ಗೊತ್ತಿರಲಿಲ್ಲ. ಮೂರ್ನಾಲ್ಕು ವರ್ಷವಾದ ಮೇಲೆ ನನಗೆ ಅದು ಅಸ್ಪಶ್ಯತೆ ಎನ್ನುವುದು ಗೊತ್ತಾಯಿತು. ಅವರೇ ನನ್ನನ್ನು ಕರೆಸಿಕೊಂಡಿದ್ದರು. ಜಾತಿ ಕಾರಣಕ್ಕೆ ಹೊರಗೆ ಹಾಕಿದ್ದರು.
ವಾ.ಭಾ : ನೀವು ತಮಟೆ ಶಿಬಿರಗಳನ್ನು ಮಾಡುತ್ತಿರುವ ಉದ್ದೇಶವೇನು?.
ಭರತ್ ಡಿಂಗ್ರಿ : ತಮಟೆ ಎನ್ನುವುದು ಅಸ್ಪೃಶ್ಯತೆಯ ವಾದ್ಯ ಅಲ್ಲ. ಅದು ಈಗಾಗಲೇ ಮುಖ್ಯವಾಹಿನಿಯಲ್ಲಿದೆ. ಅದನ್ನು ನೋಡುವ ದೃಷ್ಠಿಕೋನ ಸರಿಯಿಲ್ಲ. ಅದು ಕೇವಲ ಒಂದು ಸಮುದಾಯ ಮಾತ್ರ ನುಡಿಸಬೇಕು. ಅದನ್ನು (ಕೆಲಸ) ಚಾಕರಿ ಮಾಡಲು ಮಾತ್ರ ಬಳಸಿಕೊಳ್ಳುತ್ತಿದ್ದಾರೆ. ತಮಟೆ ಒಂದು ಸಮುದಾಯದ ಅಸ್ತಿತ್ವವಾಗಿದೆ. ಆ ಅಸ್ತಿತ್ವ ಮರೆಯಾಗುತ್ತಿದೆ. ಮೆರವಣಿಗೆ, ಮತ್ತಿತರರ ಕಾರ್ಯಕ್ರಮಕ್ಕೆ ಮಾತ್ರ ತಮಟೆಯನ್ನು ಬಳಸಿಕೊಳ್ಳುತ್ತಿದ್ದಾರೆ. ತಮಟೆಯನ್ನು ಒಳಗೆ ನುಡಿಸಲು ಬಿಡುವುದಿಲ್ಲ. ಹೊರಗಡೆಯೇ ನುಡಿಸಬೇಕಿದೆ. ತಬಲ, ವೀಣೆ, ಮೃದಂಗ ಇತ್ಯಾದಿಗಳನ್ನು ಒಳಗಡೆಯೇ ನುಡಿಸುತ್ತಾರೆ. ಅವರಿಗಾಗಿ ಪ್ರೇಕ್ಷಕರೇ ಕಾಯುತ್ತಿರುತ್ತಾರೆ.
ಆದರೆ ತಮಟೆ ನುಡಿಸುವವರು ಹೊರಗಡೆ ಕಾಯಬೇಕಿದೆ. ಈ ಪದ್ಧತಿ ಬದಲಾಗಬೇಕಿದೆ. ಯಾವುದೇ ವ್ಯಕ್ತಿ ತಮಟೆ ನುಡಿಸುತ್ತಾರೆ ಎಂದರೆ ಅವರಿಗೆ ಅದರ ಇತಿಹಾಸ ಗೊತ್ತಿರಬೇಕು. ಚರ್ಮದ ಜತೆ ಕೆಲಸ ಮಾಡುವುದು, ಚರ್ಮವನ್ನು ಹದ ಮಾಡಿ ತಮಟೆ ತಯಾರಿಸುವುದು ಎಲ್ಲವೂ ದೊಡ್ಡ ಜ್ಞಾನವಾಗಿದೆ. ಅದು ಇಂದಿನ ತಲೆಮಾರಿಗೆ ತಿಳಿಸಿಕೊಡುವುದೇ ನನ್ನ ಉದ್ದೇಶ.
ವಾ.ಭಾ : ತಮಟೆ ಒಂದು ಚಳವಳಿಯನ್ನಾಗಿ ನೀವು ಯಾವ ರೀತಿ ನೋಡುತ್ತೀರಿ?
ಭರತ್ ಡಿಂಗ್ರಿ : ಹಿಂದೆ ದಲಿತರಿಗೆ ಮಾತನಾಡುವ ಅವಕಾಶವೇ ಇರಲಿಲ್ಲ. ಆದ್ದರಿಂದ ಚಳವಳಿ ಆರಂಭವಾಗಿದ್ದೆ ತಮಟೆಯಿಂದ, ತನ್ನ ನೋವನ್ನು ತಮಟೆ ನುಡಿಸುವ ಮೂಲಕ ಹೊರಗೆ ಹಾಕುತ್ತಿದ್ದರು. ಎಲ್ಲಿ ಅನ್ಯಾಯವಾಗುತ್ತೋ ಅಲ್ಲಿ ನಾನು ತಮಟೆ ನುಡಿಸುತ್ತೇನೆ. ತಮಟೆ ನುಡಿಸುವ ಮೂಲಕ ಧ್ವನಿ ಎತ್ತುತ್ತೇನೆ.
ಎ.24ರಿಂದ ತಮಟೆ ಶಿಬಿರ :
ಹಲ್ಗಿ ಕಲ್ಚರ್ ಹಾಗೂ ಸಂವಿಧಾನ ಸಾಥಿ ಸಹಯೋಗದೊಂದಿಗೆ ಎ.24ರಿಂದ 27ರವರೆಗೆ ನಗರದ ಬಂಜಾರಪಾಳ್ಯದಲ್ಲಿರುವ ಸಂವಾದ-ಬದುಕು ಕ್ಯಾಂಪಸ್‌ನಲ್ಲಿ ತಮಟೆ ಶಿಬಿರ ಆಯೋಜಿಸಲಾಗಿದೆ. ಶಿಬಿರದಲ್ಲಿ ಭಾಗವಹಿಸಲು ಆಸಕ್ತಿ ಇದ್ದವರು, 7829060263, 7259607639ಗೆ ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
ತಮಟೆ ಅಸ್ಪಶ್ಯ ವಾದ್ಯ ಅಲ್ಲ. ಅದನ್ನು ಕೆಳಮಟ್ಟದಲ್ಲೇ ನೋಡಲಾಗುತ್ತಿದೆ. ಅದರಲ್ಲಿಯೂ ನಾದ ಇದೆ. ಕೇವಲ ಮನರಂಜನೆಯ ನಾದ ನೋಡಲಾಗುತ್ತಿದೆ. ತಮಟೆಯದು ಒಂದು ಸಮುದಾಯದ ನೋವಿನ ನಾದ ಎನ್ನುವುದನ್ನು ತಮಟೆ ಶಿಬಿರದ ಮೂಲಕ ತಿಳಿಸಿಕೊಡುತ್ತೇನೆ.
-ಭರತ್ ಡಿಂಗ್ರಿ, ತಮಟೆ ಕಲಾವಿದ