ಸಮಸ್ಯೆಗಳ ಆಗರವಾದ ರಾಜ್ಯದ ‘ಕಾರಾಗೃಹಗಳು’

ಸಾಂದರ್ಭಿಕ ಚಿತ್ರ
ಬೆಂಗಳೂರು : ರಾಜ್ಯದ ಕಾರಾಗೃಹಗಳು ಭದ್ರತಾ ಸಮಸ್ಯೆ, ಸಿಬ್ಬಂದಿ ಕೊರತೆ, ಅಧಿಕಾರಿಗಳ ಲಂಚಗುಳಿತನ, ಅವ್ಯವಸ್ಥಿತ ಬ್ಯಾರಕ್‌ಗಳು, ಕೈದಿಗಳಿಗೆ ಕಳಪೆ ಊಟವೂ ಸೇರಿದಂತೆ ಹತ್ತು ಹಲವು ಸಮಸ್ಯೆಗಳ ಆಗರವಾಗಿವೆ ಎನ್ನುವ ಆರೋಪಗಳು ಕೇಳಿಬಂದಿವೆ.
ರಾಜ್ಯದಲ್ಲಿ ಕೇಂದ್ರ ಕಾರಾಗೃಹ, ಜಿಲ್ಲೆ, ತಾಲೂಕು, ಬಯಲು ಬಂದಿಖಾನೆ ಸೇರಿ ಒಟ್ಟು 50 ಜೈಲುಗಳಿವೆ. ಅವುಗಳಲ್ಲಿ ವಿಚಾರಣಾಬಂದಿ ಮತ್ತು ಶಿಕ್ಷಾಬಂದಿಗಳು ಸೇರಿ ಸುಮಾರು 16 ಸಾವಿರಕ್ಕೂ ಅಧಿಕ ಕೈದಿಗಳಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಂತೂ ಅಗತ್ಯ ಸಾಮರ್ಥ್ಯಕ್ಕಿಂತ ಎರಡು ಪಟ್ಟು ಹೆಚ್ಚು ಕೈದಿಗಳಿದ್ದಾರೆ.
ಎಲ್ಲ ಕಾರಾಗೃಹಗಳಲ್ಲೂ ವರ್ಷದಿಂದ ವರ್ಷಕ್ಕೆ ಕೈದಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇವರ ಮೇಲೆ ನಿಗಾ ವಹಿಸಲು ಒಂದು ಪಾಳಿಗೆ 1:6ರ ಆಧಾರದಲ್ಲಿ ರಾಜ್ಯದಲ್ಲಿ 7 ಸಾವಿರ ಸಿಬ್ಬಂದಿ ಕಾರಾಗೃಹ ಇಲಾಖೆಯಲ್ಲಿ ಇರಬೇಕಿತ್ತು. ಆದರೆ, ಸುಮಾರು 2,848 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಸಿಬ್ಬಂದಿಯ ಕೊರತೆ ಎದ್ದು ಕಾಣುತ್ತಿದೆ ಎಂದು ಕಾರಾಗೃಹ ಇಲಾಖಾ ಮೂಲಗಳು ತಿಳಿಸಿವೆ.
ಕೈದಿಗಳಲ್ಲಿ ಅಪರಾಧಿ ಮನಃಸ್ಥಿತಿ ಮತ್ತು ಮಾನಸಿಕ ಒತ್ತಡಗಳು ಹೆಚ್ಚಾಗಿ ಅವರು ಜೈಲಿನಲ್ಲೂ ದುರ್ವರ್ತನೆಗಳನ್ನು ಪ್ರದರ್ಶಿಸುತ್ತಾರೆ. ಸಿಬ್ಬಂದಿಯ ಮೇಲೆ ದಾಳಿ ಮಾಡುತ್ತಾರೆ, ಹೊರ ಹೋಗಲು ಪ್ರಯತ್ನಿಸುತ್ತಾರೆ. ಬೇಕಿದ್ದನ್ನು ಪಡೆಯಲು ಅಕ್ರಮಗಳ ದಾರಿ ಹುಡುಕುತ್ತಾರೆ. ಈ ಸವಾಲುಗಳನ್ನು ಎದುರಿಸಲು ಸಿಬ್ಬಂದಿ ಕೊರತೆ ಕಾಡಲಾರಂಭಿಸಿದೆ ಎನ್ನುತ್ತಾರೆ ಕಾರಾಗೃಹ ಇಲಾಖೆಯ ಅಧಿಕಾರಿಗಳು.
ಕೈದಿಗಳನ್ನು ಸಮಾಜಮುಖಿಯನ್ನಾಗಿ ಪರಿವರ್ತಿಸಲು ಮನೋವೈದ್ಯರು ಬೇಕಾಗುತ್ತದೆ. ಆಪ್ತ ಸಮಾಲೋಚನೆ, ಸಲಹೆಗಳ ಅಗತ್ಯವಿರುತ್ತದೆ. ಆದರೆ, ರಾಜ್ಯದ ಬಹುತೇಕ ಜೈಲುಗಳಲ್ಲಿ ಆಪ್ತ ಸಮಾಲೋಚಕರ ಕೊರತೆಯಿದೆ. ಆದ್ದರಿಂದ ಜೈಲಿನ ನಿಯಮಾವಳಿಗಳಲ್ಲಿ ಬದಲಾವಣೆಯಾಗಬೇಕು. ಕೈದಿಗಳಿಗೆ ಕುಟುಂಬದ ಸಂಪರ್ಕವನ್ನು ಹೆಚ್ಚಿಸಬೇಕು ಎಂಬುದು ಇಲಾಖೆಯಲ್ಲಿ ಆಂತರಿಕವಾಗಿ ಕೇಳಿಬರುತ್ತಿರುವ ಪ್ರಮುಖ ಅಂಶವಾಗಿದೆ.
ನಿಯಮಗಳ ಅನುಸಾರವಾಗಿ ವಿಚಾರಣಾಧೀನ ಕೈದಿಗಳಿಗೆ ವಾರದಲ್ಲಿ ಎರಡು ಬಾರಿ ಫೋನ್ ಕರೆ, ವೀಡಿಯೊ ಕರೆ ಮಾಡಲು ಅವಕಾಶವಿದೆ. ಶಿಕ್ಷಾಬಂದಿಗೆ ಇವೆಲ್ಲವೂ 15 ದಿನಕ್ಕೆ ಎರಡು ಬಾರಿ ಮಾತ್ರ. ಈ ನಿಯಮಗಳನ್ನು ಸರಳಗೊಳಿಸಬೇಕು. ಕುಟುಂಬದೊಂದಿಗೆ ಮಾತನಾಡಲು ಹೆಚ್ಚು ಅವಕಾಶ ಸಿಕ್ಕಂತೆಲ್ಲ ಕೈದಿಗಳ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಜೈಲಿನಲ್ಲಿರುವ ಬಹುತೇಕ ಕೈದಿಗಳಿಗೆ ಹೊಟ್ಟೆ ನೋವು, ಕಿಡ್ನಿ ಸಮಸ್ಯೆ, ಹರ್ನಿಯಾ ಸೇರಿದಂತೆ ಮತ್ತಿತರ ರೋಗಗಳಿದ್ದು, ಅವರಿಗೆ ಸುವ್ಯವಸ್ಥಿತ ಚಿಕಿತ್ಸೆಯ ಅಗತ್ಯವಿದೆ. ವಯೋವೃದ್ಧ ಕೈದಿಗಳಿಗೆ ಸರಿಯಾದ ಊಟ, ವೈದ್ಯಕೀಯ ಉಪಚಾರ ಸಿಗುತ್ತಿಲ್ಲ. ಎನ್ನುತ್ತಾರೆ ಜೈಲು ವ್ಯವಸ್ಥೆಯನ್ನು ಬಲ್ಲವರು.
ಹೀಗೆ ರಾಜ್ಯದಲ್ಲಿ ಕಾರಾಗೃಹಗಳ ಸುಧಾರಣೆ ಅನಿವಾರ್ಯವಾಗಿದ್ದು, ಕಾಲ ಕಾಲಕ್ಕೆ ಅವುಗಳ ಪರಿಶೀಲನೆಯೂ ಆಗಬೇಕಿದೆ. ಇದಕ್ಕಾಗಿ ಪ್ರತೀ ಜಿಲ್ಲಾ ಕಾರಾಗೃಹ ಹಂತದಲ್ಲಿ ‘ಬೋರ್ಡ್ ಆಫ್ ವಿಸಿಟರ್ಸ್’ ಎಂಬ ಸಮಿತಿಯಿದ್ದು, ಇದು ಮೂರು ತಿಂಗಳಿಗೊಮ್ಮೆ ತಮ್ಮ ವ್ಯಾಪ್ತಿಯ ಜೈಲುಗಳಿಗೆ ಭೇಟಿ ನೀಡಿ ಸರಕಾರಕ್ಕೆ ವರದಿ ನೀಡಬೇಕಿದೆ. ಈ ವ್ಯವಸ್ಥೆ ಬದಲಾಗಬೇಕಾದರೆ ಸರಕಾರ, ಇಲಾಖೆ ಹಾಗೂ ಸಮಿತಿಯು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕಾಗಿದೆ.
ಸವಲತ್ತುಗಳಿಲ್ಲದೇ ಸೊರಗುತ್ತಿವೆ :
‘ರಾಜ್ಯದ ಬಹುತೇಕ ಜೈಲುಗಳು ಬ್ರಿಟಿಷ್ ಕಾಲದವು. ಕೈದಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಎಲ್ಲರನ್ನೂ ಇರಿಸಲು ಸಾಧ್ಯವಾಗುತ್ತಿಲ್ಲ. ಸದ್ಯಕ್ಕಂತೂ ರಾಜ್ಯದ ಜೈಲುಗಳಲ್ಲಿ ಕೈದಿಗಳಿಗೆ ಮಲಗಲು ಸಾಧ್ಯವಾಗದ ಸ್ಥಿತಿ ಇದೆ. ನೆಮ್ಮದಿ ಇಲ್ಲದ ವಾತಾವರಣದಲ್ಲಿ ವ್ಯಕ್ತಿಯ ಮನಃಪರಿವರ್ತನೆ ಹೇಗೆ ಸಾಧ್ಯ? ಭದ್ರತೆಗಾಗಿ ಹೆಚ್ಚಿನ ಸಿಸಿಟಿವಿ, ಬಾಡಿವೋರ್ನ್ ಕ್ಯಾಮರಾಗಳು ಬೇಕು. ಕನಿಷ್ಠ ಕೇಂದ್ರ ಕಾರಾಗೃಹಗಳಲ್ಲಾದರೂ, ಅತ್ಯಾಧುನಿಕ ಜಾಮರ್ ವ್ಯವಸ್ಥೆ ಇರಬೇಕು. ಇವುಗಳತ್ತ ಸರಕಾರ ಗಮನ ಕೊಡಬೇಕು. ಬಜೆಟ್‌ನಲ್ಲಿ ಹೆಚ್ಚಿನ ಅನುದಾನಗಳನ್ನು ಒದಗಿಸಬೇಕು. ಜೈಲುಗಳು ಸವಲತ್ತುಗಳಿಲ್ಲದೇ ಸೊರಗುತ್ತಿವೆ’ ಎಂದು ಹೇಳುತ್ತಾರೆ ಅಧಿಕಾರಿಗಳು.
‘ಹಣವಿದ್ದವರಿಗೆ ಐಶಾರಾಮಿ ಜೀವನ, ಇಲ್ಲದವರಿಗೆ ಬರೀ ಅನ್ನ, ಗಂಜಿ’ :
ಹಣವಿದ್ದವರಿಗೆ ಜೈಲಿನಲ್ಲಿ ಐಶಾರಾಮಿ ಜೀವನ, ಹಣವಿಲ್ಲದವರಿಗೆ ಬರೀ ಅನ್ನ, ಗಂಜಿ ಹಾಗೂ ವಾರಕ್ಕೊಮ್ಮೆ ಮಾತ್ರ ಮಾಂಸಾಹಾರದ ಊಟ ಸಿಗುತ್ತದೆ. ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಅವ್ಯವಸ್ಥೆ ತುಂಬಿಕೊಂಡಿದೆ. ಊಟದಲ್ಲಿ ಹುಳಗಳು, ಬೆಳಗ್ಗಿನ ಉಪಾಹಾರದಲ್ಲಿ ಕಲ್ಲುಗಳಿರುತ್ತವೆ. ಅದನ್ನು ತಿನ್ನಲೂ ಆಗದ, ಬಿಸಾಡಲೂ ಆಗದ ಸ್ಥಿತಿ ಕೈದಿಗಳದ್ದು. ಇನ್ನು ಮಲಗುವ ಬೆಡ್‌ಶೀಟ್‌ಗಳಂತೂ ದುರ್ವಾಸನೆ ಬರುತ್ತವೆ. ಇದರಿಂದ ನಿದ್ರೆಯೂ ಬರುವುದಿಲ್ಲ. ಸಾಮಾನ್ಯ ಕೈದಿಗಳ ಸ್ಥಿತಿಯಂತೂ ಹೇಳತೀರದು. ಜೈಲಧಿಕಾರಿಗಳು ಲಂಚ ಕೊಟ್ಟವರಿಗೆ ಒಳ್ಳೆಯ ಸವಲತ್ತು ಕೊಡುತ್ತಾರೆ. ಡ್ರಗ್ಸ್ ದಂಧೆಯೂ ನಡೆಯುತ್ತದೆ ಎನ್ನುತ್ತಾ ತಮ್ಮ ಜೈಲುವಾಸದ ಅನುಭವಗಳನ್ನು ಹಂಚಿಕೊಳ್ಳುತ್ತಾರೆ ಬೆಂಗಳೂರಿನ ಮುದ್ದುರಾಜು.
ಮಹಿಳಾ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ :
‘ರಾಜ್ಯದ ಜೈಲುಗಳಲ್ಲಿ ಮಹಿಳಾ ಕೈದಿಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಸಿಬ್ಬಂದಿಯಿದ್ದಾರೆ. ಜೈಲು ವ್ಯವಸ್ಥೆಗೆ ಮಹಿಳಾ ಸಿಬ್ಬಂದಿ ಹೊಂದುವುದಿಲ್ಲ. ಬಹುತೇಕ ಸಮಯದಲ್ಲಿ ಕೈದಿಗಳನ್ನು ಮುಟ್ಟಿ ಪರೀಕ್ಷೆ ಮಾಡಬೇಕಾಗುತ್ತದೆ. ಕೊಠಡಿಗಳಿಗೆ ಒಬ್ಬೊಬ್ಬರೇ ಸಿಬ್ಬಂದಿ ಹೋಗಿ ಪರಿಶೀಲಿಸಬೇಕಾಗಿರುತ್ತದೆ. ಇದು ಮಹಿಳಾ ಸಿಬ್ಬಂದಿಯಿಂದ ಸಾಧ್ಯವಾಗುವುದಿಲ್ಲ. ಹಲವು ಸಂದರ್ಭಗಳಲ್ಲಿ ಪುರುಷ ಕೈದಿಗಳು, ಮಹಿಳಾ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಇವು ಹೊರಗೆ ಬರುತ್ತಿಲ್ಲ’ ಎಂದು ಹೇಳುತ್ತಾರೆ ವಿವಿಧ ಜೈಲಿನ ಅಧಿಕಾರಿಗಳು.
ದಿನದಲ್ಲಿ 14 ಗಂಟೆ ಹಸಿವಿನಿಂದಿರುವ ಕೈದಿಗಳು :
ರಾಜ್ಯದ ಜೈಲುಗಳಲ್ಲಿ ಪ್ರತೀ ಒಬ್ಬ ಕೈದಿಗೆ ದಿನದ ಮೂರು ಹೊತ್ತಿನ ಊಟಕ್ಕೆ ಕೇವಲ 85 ರೂ.ಗಳನ್ನು ಮಾತ್ರ ಖರ್ಚು ಮಾಡಲಾಗುತ್ತಿದೆ. ಈ ವಿವರ ಕುರಿತಂತೆ ಸಾಮಾಜಿಕ ಕಾರ್ಯಕರ್ತ ನರಸಿಂಹಮೂರ್ತಿ ಎಂಬವರು ಹಾಕಿರುವ ಆರ್‌ಟಿಐಗೆ ಕೇಂದ್ರ ಕಾರಾಗೃಹ ಇಲಾಖೆ ಮಾಹಿತಿ ನೀಡಿದೆ.
ಕೈದಿಗಳಿಗೆ ಪ್ರತಿದಿನ ಬೆಳಗ್ಗೆ 7:15ರಿಂದ 8:30ರ ವರೆಗೆ ಉಪಾಹಾರ. 11 ಗಂಟೆಯಿಂದ 11:30ರ ವರೆಗೆ ಮಧ್ಯಾಹ್ನ ಊಟ ಹಾಗೂ ಸಂಜೆ 5:15ರಿಂದ 5:45 ಗಂಟೆಯ ವರೆಗೆ ರಾತ್ರಿ ಊಟಕ್ಕೆ ಸಮಯ ನಿಗದಿ ಮಾಡಲಾಗಿದೆ. ಸಂಜೆ 5:45ರ ಬಳಿಕ ಯಾವುದೇ ಊಟೋಪಚಾರ ಇರುವುದಿಲ್ಲ. ಮರುದಿನ ಬೆಳಗ್ಗೆ ಮತ್ತೆ ಉಪಾಹಾರ ನೀಡಲಾಗುತ್ತದೆ. ಸುದೀರ್ಘ 14 ಗಂಟೆಗಳ ಕಾಲ ಊಟವಿಲ್ಲದಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ. ಈ ಬಗ್ಗೆ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿರುವ ಸಾಮಾಜಿಕ ಕಾರ್ಯಕರ್ತ ನರಸಿಂಹಮೂರ್ತಿ ಅವರು ಕೈದಿಗಳು ಎಲ್ಲರಂತೆ ಮನುಷ್ಯರೇ ಆಗಿರುವುದರಿಂದ ಅವರಿಗೂ ಉತ್ತಮ ಆಹಾರ ನೀಡುವಂತೆ ಕಾರಾಗೃಹ ಇಲಾಖೆಗೆ ಸೂಚಿಸುವಂತೆ ಮನವಿ ಮಾಡಿಕೊಂಡಿದ್ದಾರೆ.