ಸೌಜನ್ಯಾ ಪ್ರಕರಣ : ಡಾ.ಆದಂ, ಡಾ.ರಶ್ಮಿ ವಿರುದ್ಧ ಕಠಿಣ ಕ್ರಮಕ್ಕೆ ಶಿಫಾರಸು ಮಾಡಿದ್ದ ಸಿಬಿಐ

ಬೆಂಗಳೂರು : ಬೆಳ್ತಂಗಡಿ ತಾಲೂಕಿನ ಸೌಜನ್ಯಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ವೈದ್ಯರಾದ ಡಾ.ಆದಂ ಉಸ್ಮಾನ್ ಮತ್ತು ಡಾ.ಎನ್.ರಶ್ಮಿ ಅವರ ವಿರುದ್ಧ ಕಠಿಣ ದಂಡನೆ ವಿಧಿಸಬೇಕು ಎಂದು ಸಿಬಿಐ ಸಂಸ್ಥೆಯು 2017ರಲ್ಲೇ ಶಿಫಾರಸು ಮಾಡಿತ್ತು ಎಂಬುದು ಇದೀಗ ಬಹಿರಂಗವಾಗಿದೆ.
ಸೌಜನ್ಯಾ ಕೊಲೆ ಪ್ರಕರಣವನ್ನು ಮರು ತನಿಖೆ ನಡೆಸುವ ಸಂಬಂಧ ಒಳಾಡಳಿತ ಇಲಾಖೆಯು ಕೈಗೊಂಡಿರುವ ನಿರ್ಣಯದ ಕುರಿತು "the-file.in" ಆರ್‌ಟಿಐ ಮೂಲಕ ಪಡೆದುಕೊಂಡಿರುವ 325 ಪುಟಗಳಲ್ಲಿ ಸಿಬಿಐ ಸಂಸ್ಥೆಯು ಪ್ರಸ್ತಾವಿಸಿರುವ ಟಿಪ್ಪಣಿ ಹಾಳೆಯೂ ಇದೆ.
ಸಿಬಿಐ ಸಂಸ್ಥೆಯು ಸಲ್ಲಿಸಿದ್ದ ಮೂಲ ತನಿಖಾ ವರದಿಯನ್ನು ಒದಗಿಸದ ಕಾರಣ ಸಿಬಿಐನ ಶಿಫಾರಸಿನ ಅನ್ವಯ ಕ್ರಮ ವಹಿಸಲು ವಿಳಂಬವಾಗಿತ್ತು ಎಂಬ ಅಂಶವನ್ನೂ ಟಿಪ್ಪಣಿ ಹಾಳೆಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.
ಮತ್ತೊಂದು ವಿಶೇಷವೆಂದರೆ ಸಿಬಿಐ ಸಂಸ್ಥೆಯು ರಾಜ್ಯ ಸರಕಾರಕ್ಕೆ ಬರೆದಿದ್ದ ಪತ್ರವನ್ನು ಒಳಾಡಳಿತ ಇಲಾಖೆಯು ಆರ್‌ಟಿಐನಲ್ಲಿ ಒದಗಿಸಿರುವ ಕಡತದಲ್ಲಿ ಒದಗಿಸಿಲ್ಲ. ಸಿಬಿಐ ಸಂಸ್ಥೆಯಿಂದ ಪತ್ರವನ್ನು ಸ್ವೀಕರಿಸಿರುವ ಬಗ್ಗೆ ಕಡತದ ಟಿಪ್ಪಣಿ ಹಾಳೆಯಲ್ಲಿ ಒಳಾಡಳಿತ ಇಲಾಖೆಯು ಉಲ್ಲೇಖಿಸಿದೆ. ಸಹಜವಾಗಿ ಈ ಪತ್ರವನ್ನೂ ಕಡತದಲ್ಲಿರಿಸಬೇಕಿತ್ತು.
ಸಿಬಿಐ ಪತ್ರ ಮುಚ್ಚಿಟ್ಟಿತೇ? :
ಒಳಾಡಳಿತ ಇಲಾಖೆಯು ಆರ್‌ಟಿಐ ಅಡಿಯಲ್ಲಿ ಒದಗಿಸಿರುವ 325 ಪುಟಗಳ ಕಡತದಲ್ಲಿ ಎಲ್ಲಿಯೂ ಡಾ.ಆದಂ ಉಸ್ಮಾನ್ ಮತ್ತು ಡಾ.ಎನ್.ರಶ್ಮಿ ಅವರ ವಿರುದ್ಧ ಕಠಿಣ ದಂಡನೆ ವಿಧಿಸಲು ಸಿಬಿಐ ಪ್ರಸ್ತಾವಿಸಿದ್ದ ಪತ್ರವು ಒಳಾಡಳಿತ ಇಲಾಖೆಯ ಕಡತದಲ್ಲಿ ಕಂಡು ಬಂದಿಲ್ಲ.
ಸಿಬಿಐನಿಂದ ಸ್ವೀಕರಿಸಿದ್ದ ಪತ್ರವನ್ನು ಕಡತದಲ್ಲಿ ಇರಿಸದಿರುವ ಕಾರಣ, ಡಾ.ಆದಂ ಉಸ್ಮಾನ್ ಮತ್ತು ಡಾ ಎನ್.ರಶ್ಮಿ ಅವರ ವಿರುದ್ಧ ಕಠಿಣ ದಂಡನೆ ವಿಧಿಸಲು ಸಿಬಿಐ ನೀಡಿದ್ದ ಸಮರ್ಥನೆ ಮತ್ತು ಪೂರಕ ಅಂಶಗಳ ಬಗ್ಗೆ ಯಾವ ಮಾಹಿತಿಯೂ ಇಲ್ಲವಾಗಿದೆ. ಇಲಾಖೆಯ ಈ ನಡೆಯು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.
ಟಿಪ್ಪಣಿ ಹಾಳೆಯಲ್ಲೇನಿದೆ? :
ಬೆಳ್ತಂಗಡಿ ತಾಲೂಕಿನ ಕುಮಾರಿ ಸೌಜನ್ಯಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಂಸ್ಥೆಯಿಂದ ಸ್ವೀಕೃತಗೊಂಡ ಪತ್ರದಲ್ಲಿ ಪ್ರಸ್ತಾವಿಸಿರುವಂತೆ ಡಾ.ಆದಂ ಉಸ್ಮಾನ್ ಮತ್ತು ಡಾ.ಎನ್.ರಶ್ಮಿ ಅವರ ವಿರುದ್ಧ ಕಠಿಣ ದಂಡನೆ ವಿಧಿಸಲು ಪ್ರಸ್ತಾವಿಸಿದ್ದು ಈ ಬಗ್ಗೆ ಕೈಗೊಂಡ ಕ್ರಮದ ಮಾಹಿತಿಯನ್ನು ಒದಗಿಸಬೇಕು ಎಂದು (ಕಡತ ಸಂಖ್ಯೆ; HD 06 CID 2013 ದಿ.21.02.2017) ಅಧಿಕೃತ ಜ್ಞಾಪನದಲ್ಲಿ ತಿಳಿಸಲಾಗಿರುತ್ತದೆ.
ಆದರೆ ಸಿಬಿಐ ಸಂಸ್ಥೆಯು ಸಲ್ಲಿಸಿರುವ ಮೂಲ ತನಿಖಾ ವರದಿಯನ್ನು ಒದಗಿಸಿರುವುದಿಲ್ಲ. ಇದರಿಂದಾಗಿ ಸಿಬಿಐ ಸಂಸ್ಥೆಯ ಶಿಫಾರಸಿನನ್ವಯ ಕ್ರಮವಹಿಸಲು ವಿಳಂಬವಾಗುತ್ತಿರುತ್ತದೆ. ಈ ಬಗ್ಗೆ ಪರಿಶೀಲಿಸಲು ಸಿಬಿಐ ವರದಿಯು ಹಾಗೂ ಎಫ್‌ಎಸ್‌ಎಲ್ ರಿಪೋ
ರ್ಟ್‌ನ ಅವಶ್ಯಕತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಂಸ್ಥೆಯು ಸಲ್ಲಿಸಿರುವ ತನಿಖಾ ವರದಿ ಮತ್ತು ಎಫ್‌ಎಸ್‌ಎಲ್ ರಿಪೋರ್ಟ್‌ಅನ್ನು ಈ ದಿನವೇ ಒದಗಿಸುವಂತೆ, ಇದನ್ನು ಅತ್ಯಂತ ಜರೂರು ಎಂದು ಪರಿಗಣಿಸುವಂತೆ ಕೋರಿರುತ್ತಾರೆ ಎಂದು ಟಿಪ್ಪಣಿ ಹಾಳೆಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಒಳಾಡಳಿತ ಇಲಾಖೆಯು ಈ ಅಂಶವನ್ನು ಪರಿಶೀಲಿಸಿದೆ. ಈ ಕೋರಿಕೆಯನ್ನೂ ಒಳಾಡಳಿತ ಇಲಾಖೆಯು ತೆರೆದಿದ್ದ HD 06 CID 2013ರಲ್ಲಿ ಇರಿಸಿತ್ತು. ಈ ದಾಖಲೆಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಒದಗಿಸಲು ಮೇಲಧಿಕಾರಿಗಳಿಗೆ ಮಂಡಿಸಿತ್ತು. ಇದನ್ನು ಒಳಾಡಳಿತ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಯಾಗಿದ್ದ ಐಪಿಎಸ್ ಶರತ್ ಚಂದ್ರ ಅವರು ಸಹ ಅನುಮೋದಿಸಿದ್ದರು. ಈ ಕುರಿತು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರೊಂದಿಗೆ ಒಳಾಡಳಿತ ಇಲಾಖೆಯ ಅಧಿಕಾರಿಗಳು ಚರ್ಚಿಸಿರುವುದು ತಿಳಿದು ಬಂದಿದೆ.
ಡಾ.ಆದಂ ಉಸ್ಮಾನ್ ಮತ್ತು ಡಾ.ಎನ್.ರಶ್ಮಿ ಅವರ ವಿರುದ್ಧ ಕಠಿಣ ದಂಡನೆ ವಿಧಿಸಬೇಕು ಎಂದು ಸಿಬಿಐ ಪತ್ರ ಬರೆದಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದರು ಎಂಬುದನ್ನು ಸ್ಮರಿಸಬಹುದು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್, ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ಸಹಿತ ಹಲವರು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದನ್ನು ಸ್ಮರಿಸಬಹುದು. ಶಾಸಕರಿಬ್ಬರ ಕೋರಿಕೆ ಸಂಬಂಧ ಒಳಾಡಳಿತ ಇಲಾಖೆಯಲ್ಲಿ ತೆರೆದಿದ್ದ ಕಡತವು 18 ತಿಂಗಳಿನಿಂದಲೂ ತೆವಳಿತ್ತು. 2023ರಲ್ಲಿ ತೆರೆದಿದ್ದ ಕಡತವನ್ನು 2025ರ ಜನವರಿಯಲ್ಲಿ ಮುಕ್ತಾಯಗೊಳಿಸಿತ್ತು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್ ಅವರು ಈ ಪ್ರಕರಣದ ಕುರಿತು ಮರು ತನಿಖೆ ನಡೆಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸರಕಾರಕ್ಕೆ ಮನವಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಮರು ತನಿಖೆ ನಡೆಸಲು ಸಿಬಿಐಗೆ ನಿರ್ದೇಶನ ನೀಡಲು ಹೈಕೋರ್ಟ್ ಕೂಡ ನಿರಾಕರಿಸಿತ್ತು.
ಹೀಗಾಗಿ ಪ್ರಕರಣದ ಕುರಿತು ಮರು ತನಿಖೆ ನಡೆಸಬೇಕು ಎಂದು ಸರಕಾರದ ಮೇಲೆ ಸಾರ್ವಜನಿಕ ಒತ್ತಡ ಹೆಚ್ಚಿದ್ದ ಸಂದರ್ಭದಲ್ಲೇ ಈ ಕುರಿತು ತೀರ್ಮಾನ ಕೈಗೊಳ್ಳಲು ಗೃಹ ಇಲಾಖೆಯು ಕಾನೂನು ಇಲಾಖೆಯ ಮೊರೆ ಹೊಕ್ಕಿತ್ತು. ನಾಗರಿಕರ ಭಾವನೆಗಳನ್ನು ಗಂಭೀರವಾಗಿ ಪರಿಗಣಿಸಿ ಸರಕಾರವುಸೌಜನ್ಯಾಳ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಿ ಸೌಜನ್ಯಾಳಿಗೆ ಮತ್ತು ಮೃತಳ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲು ಕೋರಿರುವುದರಿಂದ ಆಡಳಿತ ಇಲಾಖೆಯವರು ಈ ಕುರಿತ ಸಿಬಿಐನಲ್ಲಿ ಮುಕ್ತಾಯಗೊಂಡಿರುವ ಸೌಜನ್ಯಾ ಪ್ರಕರಣವನ್ನು ಮರು ತನಿಖೆಗೆ ವಹಿಸಲು ಅವಕಾಶವಿದೆಯೇ ಎಂಬ ಬಗ್ಗೆ ಅಭಿಪ್ರಾಯ ಕೋರಿ ಕಡತವನ್ನು ಸಲ್ಲಿಸಲಾಗಿದೆ ಎಂದು ಟಿಪ್ಪಣಿ ಹಾಳೆಯಲ್ಲಿ ಉಲ್ಲೇಖಿಸಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ ನೀಡುವ ಸಲುವಾಗಿ ಪ್ರಕರಣದಲ್ಲಿ ಸಾಕ್ಷಿಗಳು ನೀಡಿರುವ ಹೇಳಿಕೆಯ ಪ್ರತಿ ಮತ್ತು ಬೆಂಗಳೂರಿನಲ್ಲಿರುವ ಹೆಚ್ಚುವರಿ ಸಿಟಿ ಸಿವಿಲ್ ಸೆಷನ್ಸ್ ನ್ಯಾಯಾಲಯ (children's court (special bengaluru (cch-51) ದಲ್ಲಿ ದಾಖಲಾಗಿರುವ ಪ್ರಕರಣ (Spl. CC NO 203/2016) ದಲ್ಲಿ 2021ರ ಅಕ್ಟೊಬರ್ 4ರಂದು ನೀಡಿರುವ ಆದೇಶದ ಪ್ರತಿಗಳನ್ನು ಪರಿಶೀಲಿಸುವುದು ಅವಶ್ಯ ಎಂದು ಕಾನೂನು ಇಲಾಖೆಯು ಅಭಿಪ್ರಾಯಿಸಿತ್ತು.
ಈ ಪ್ರಕರಣದ ಕುರಿತು ಅಭಿಪ್ರಾಯ ನೀಡಲು ದಾಖಲೆಗಳನ್ನು ಒದಗಿಸಬೇಕು ಎಂದು ಗೃಹ ಇಲಾಖೆಗೆ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯು ಪತ್ರ ಬರೆದಿದೆ. ಪ್ರಕರಣದಲ್ಲಿ ಕಾನೂನು ಇಲಾಖೆ ಅಭಿಪ್ರಾಯ ಕೋರುವ ಸಂಬಂಧ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮತ್ತು ಕಾನೂನು ಸಚಿವ ಎಚ್.ಕೆ.ಪಾಟೀಲ್ ಚರ್ಚಿಸಿದ್ದರು.
ಮೃತ ವಿದ್ಯಾರ್ಥಿನಿ ತಂದೆ ಚಂದ್ರಪ್ಪಗೌಡ 2018ರಲ್ಲಿ ಪ್ರಕರಣದ ಮರು ತನಿಖೆಗೆ ಸಿಬಿಐಗೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ಕುರಿತು ಸುದೀರ್ಘ ವಾದ-ಪ್ರತಿವಾದ ಆಲಿಸಿದ್ದ ನ್ಯಾಯಮೂರ್ತಿ ಕೆ.ಸೋಮಶೇಖರ್ ಅವರಿದ್ದ ಏಕಸದಸ್ಯ ಪೀಠ ಅರ್ಜಿಯನ್ನು ಈಗಾಗಲೇ ವಜಾಗೊಳಿಸಿದೆ. ಪ್ರಕರಣವನ್ನು ಮೊದಲಿಗೆ ಸಿಐಡಿ, ಆನಂತರ ಸಿಬಿಐ ತನಿಖೆ ನಡೆಸಿತ್ತು.
ಪ್ರಕರಣದಲ್ಲಿ ಸಾಕ್ಷಿಗಳಾಗಿರುವ ಧೀರಜ್ ಜೈನ್, ಮಲ್ಲಿಕ್ ಜೈನ್ ಮತ್ತು ಉದಯ್ ಜೈನ್ ವಿರುದ್ಧ ಸಂಶಯ ವ್ಯಕ್ತಪಡಿಸಿ ಅರ್ಜಿದಾರರು ಮರು ತನಿಖೆಗೆ ಆದೇಶಿಸಲು ಕೋರಿದ್ದರು. ಆ ಶಂಕೆಯನ್ನು ಪುಷ್ಟೀಕರಿಸುವ ಯಾವುದೇ ಸಾಕ್ಷ್ಯಾಧಾರ ಒದಗಿಸಿಲ್ಲ. ಸಿಬಿಐ ಸರಿಯಾಗಿಯೇ ತನಿಖೆಗೆ ನಡೆಸಿದ್ದು, ಮತ್ತೆ ತನಿಖೆ ನಡೆಸುವ ಅಗತ್ಯವಿಲ್ಲವೆಂದು ನ್ಯಾಯಪೀಠ ಆದೇಶಿಸಿರುವುದನ್ನು ಸ್ಮರಿಸಬಹುದು.