ವಕ್ಫ್‌ ಕಾಯ್ದೆ ತಿದ್ದುಪಡಿಗಳನ್ನು ವಿರೋಧಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ

Update: 2025-04-26 10:43 IST
ವಕ್ಫ್‌ ಕಾಯ್ದೆ ತಿದ್ದುಪಡಿಗಳನ್ನು ವಿರೋಧಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ
  • whatsapp icon

ಭಾರತವನ್ನು ಸುಸ್ಥಿರ ಪ್ರಜಾಪ್ರಭುತ್ವವಾಗಿಸುವ ರೀತಿಯಲ್ಲಿ ಅದರ ತಳಹದಿಯನ್ನು ರೂಪಿಸಲಾಗಿದೆ. ಪ್ರಜಾಪ್ರಭುತ್ವವನ್ನು ಸರಳವಾಗಿ ವಿವರಿಸುವುದಾದರೆ, ಈ ವ್ಯವಸ್ಥೆಯಲ್ಲಿ ತಮ್ಮ ನಾಯಕನನ್ನು ಆರಿಸುವ ಮತ್ತು ಸರಕಾರ ತೆಗೆದುಕೊಳ್ಳುವ ನಿರ್ಧಾರದಲ್ಲಿ ಪಾಲ್ಗೊಳ್ಳುವ ಅಧಿಕಾರ ಜನರಿಗಿದೆ.

ಪ್ರಜಾಪ್ರಭುತ್ವದ ಸ್ಥಿರತೆ ಎಂದರೆ, ವ್ಯವಸ್ಥೆಯು ಕಾಲ ಸರಿದಂತೆ ಅರಾಜಕತೆಯತ್ತ ಅಥವಾ ಸರ್ವಾಧಿಕಾರದತ್ತ ಸರಿಯದೆ ತನ್ನನ್ನು ತಾನು ಸಂಭಾಳಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವುದು.

ಹಾಗಾಗಿ, ಸ್ಥಿರ ಪ್ರಜಾಸತ್ತಾತ್ಮಕ ಭಾರತವು ಪ್ರಜಾಪ್ರಭುತ್ವವನ್ನು ನಡೆಸುವ ಮೂಲ ಸಿದ್ಧಾಂತಗಳಿಗೆ ಅಂಟಿಕೊಳ್ಳಬೇಕಾಗುತ್ತದೆ.

ಅವುಗಳೆಂದರೆ:

1) ಕಾನೂನಿನ ಆಡಳಿತ

ಸುವ್ಯವಸ್ಥೆಯನ್ನು ಖಾತರಿಪಡಿಸುವುದಕ್ಕಾಗಿ ಸರಕಾರ ಸೇರಿದಂತೆ ಪ್ರತಿಯೊಬ್ಬರೂ ಕಾನೂನನ್ನು ಅನುಸರಿಸಬೇಕಾಗಿದೆ.

2) ಸಾಂವಿಧಾನಿಕ ತತ್ವಗಳ ಪಾಲನೆ

ಭಾರತೀಯ ಸಂವಿಧಾನವು ಆಡಳಿತ ಸೂತ್ರಗಳು ಮತ್ತು ನಾಗರಿಕರ ಹಕ್ಕುಗಳನ್ನು ರೂಪಿಸುವಾಗ ಸ್ವಾತಂತ್ರ್ಯಗಳು

ಮತ್ತು ದುರ್ಬಲರಿಗೆ ವಿಶೇಷ ರಕ್ಷಣೆಗಳನ್ನು ನೀಡಿದೆ.

3) ನಾಗರಿಕ ಹಕ್ಕುಗಳು ಮತ್ತು ಮಾನವ ಹಕ್ಕುಗಳ ರಕ್ಷಣೆ

ವಾಕ್ ಸ್ವಾತಂತ್ರ್ಯ ಮತ್ತು ಶಾಂತಿಯುತವಾಗಿ ಒಂದೆಡೆ ಸೇರುವ ಸ್ವಾತಂತ್ರ್ಯವು ಜನರಿಗೆ ತಮ್ಮ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸುವ ಮತ್ತು ಸರಕಾರವನ್ನು ಉತ್ತರದಾಯಿಯಾಗಿಸುವ ಅಧಿಕಾರವನ್ನು ನೀಡುತ್ತದೆ.

4) ಮಾಹಿತಿಯುಕ್ತ ಹಾಗೂ ಸಕ್ರಿಯ ಪೌರತ್ವ

ಮಾಹಿತಿಯುಕ್ತ ಹಾಗೂ ಸಕ್ರಿಯ ಪೌರರಿಗೆ ಬೇಕಾದ ಮಾಹಿತಿ ಲಭಿಸುತ್ತದೆ. ಇದರ ಆಧಾರದಲ್ಲಿ ಅವರು ಮಾಹಿತಿಯುಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಬಹುದಾಗಿದೆ ಮತ್ತು ಪ್ರಜಾಪ್ರಭುತ್ವದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬಹುದಾಗಿದೆ.

5) ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ

ಪ್ರಜಾಪ್ರಭುತ್ವದಲ್ಲಿ ಅಲ್ಪಸಂಖ್ಯಾತ ಗುಂಪುಗಳು ಮೂಲೆಗುಂಪಾಗದಂತೆ ರಕ್ಷಿಸುವುದು ಮುಖ್ಯವಾಗಿದೆ. ಇಲ್ಲದಿದ್ದರೆ, ನಿರಂತರ ಅಸಮಾನತೆ ಮತ್ತು ತಾರತಮ್ಯವು ಸಂಘರ್ಷ ಮತ್ತು ಅಸ್ಥಿರತೆಗೆ ಕಾರಣವಾಗಬಹುದು. ಜನಾಂಗೀಯ, ಧಾರ್ಮಿಕ ಅಥವಾ ವರ್ಗದ ಆಧಾರದಲ್ಲಿ ವಿಭಜನೆಗೊಂಡ ಸಮಾಜವೊಂದು ಸ್ಥಿರ ಪ್ರಜಾಪ್ರಭುತ್ವವನ್ನು ಖಾತರಿಪಡಿಸಲಾರದು. ಸರ್ವರ ಭಾಗೀದಾರಿಕೆಯನ್ನು ಉತ್ತೇಜಿಸುವ ಮತ್ತು ಅಸಮಾನತೆಗಳನ್ನು ತಗ್ಗಿಸುವ ನೀತಿಗಳು ಸ್ಥಿರ ಪ್ರಜಾಪ್ರಭುತ್ವವನ್ನು ಖಾತರಿಪಡಿಸಬಹುದು.

ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧದ ಪ್ರತಿಭಟನೆ ನಿರ್ಣಾಯಕವಾದದ್ದಾಗಿದೆ. ವಕ್ಫ್ ಕಾಯ್ದೆಯಲ್ಲಿ ತಿದ್ದುಪಡಿಗಳು ಮತ್ತು ಅದನ್ನು ಕಾಯ್ದೆಯಾಗಿ ಅನುಮೋದಿಸಿದ ರೀತಿಯು ಸ್ಥಿರ ಪ್ರಜಾಸತ್ತಾತ್ಮಕ ಭಾರತದ ಬುಡಕ್ಕೆ ನೀಡಿದ ಪೆಟ್ಟಾಗಿದೆ.

ಇಡೀ ಮಸೂದೆ ಮತ್ತು ತಿದ್ದುಪಡಿಗಳು ಪ್ರಧಾನವಾಗಿ ಬಹುಸಂಖ್ಯಾತ ಪ್ರಾಬಲ್ಯದ, ಸಾರಾಸಗಟು ತಾರತಮ್ಯದ ಮತ್ತು ವಕ್ಫ್ ಜಮೀನುಗಳನ್ನು ಕಾನೂನುಬಾಹಿರವಾಗಿ ಕಿತ್ತುಕೊಳ್ಳುವ ಉದ್ದೇಶಗಳನ್ನು ಹೊಂದಿವೆ. ಸಮಾನತೆ, ತಾರತಮ್ಯರಾಹಿತ್ಯತೆ, ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ಒಕ್ಕೂಟ ವ್ಯವಸ್ಥೆಯ ಸಾಂವಿಧಾನಿಕ ತತ್ವಗಳನ್ನು ಸಾರಾಸಗಟಾಗಿ ಉಲ್ಲಂಘಿಸಿ, ತಮ್ಮ ಸಂಸ್ಥೆಗಳನ್ನು ನಡೆಸುವ ಅಲ್ಪಸಂಖ್ಯಾತರ ಹಕ್ಕುಗಳಲ್ಲಿ ಹಸ್ತಕ್ಷೇಪ ನಡೆಸುವ ಉದ್ದೇಶವನ್ನು ಹೊಂದಿದೆ.

ಬಹುಸಂಖ್ಯಾತ ಪ್ರಾಬಲ್ಯ ಸಿದ್ಧಾಂತ

ಬುದ್ಧನಿಗೆ ಬೋಧ್ ಗಯದಲ್ಲಿ ಜ್ಞಾನೋದಯವಾಯಿತು. ಬೋಧ್ಗಯ ಒಂದು ಬೌದ್ಧ ಧಾರ್ಮಿಕ ಸಂಸ್ಥೆ. 1590 ರಲ್ಲಿ, ಶೈವ ಪಂಥದ ಮಹಂತ್ ಘಮಂಡಿ ಗಿರಿ ಬಂದು ದೇವಾಲಯದ ಆವರಣದಲ್ಲಿ ಮಠವೊಂದನ್ನು ಸ್ಥಾಪಿಸಿದರು. ಬೋಧ್ ಗಯ ದೇವಸ್ಥಾನ ಮತ್ತು ಅದಕ್ಕೆ ಸಂಬಂಧಿಸಿದ ಆಸ್ತಿಗಳನ್ನು ಉತ್ತಮವಾಗಿ ನಿರ್ವಹಿಸಲು 1949ರಲ್ಲಿ ಬೋಧ್ ಗಯ ದೇವಸ್ಥಾನ ಕಾಯ್ದೆಯನ್ನು ಜಾರಿಗೆ ತರಲಾಯಿತು.

ಮಹಂತರು ಬೋಧ್ ಗಯದಲ್ಲಿರುವ ಶೈವ ಮಠದ ಪ್ರಧಾನ ಅರ್ಚಕರಾಗಿರುತ್ತಾರೆ ಎಂದು ಕಾಯ್ದೆ ಹೇಳುತ್ತದೆ. ಮಠದ ನಿರ್ವಹಣೆಯನ್ನು ನೋಡಿಕೊಳ್ಳಲು ಓರ್ವ ಅಧ್ಯಕ್ಷರು ಮತ್ತು ಎಂಟು ಸದಸ್ಯರನ್ನು ಹೊಂದಿದ ಸಮಿತಿಯೊಂದನ್ನೂ ಕಾಯ್ದೆ ರಚಿಸುತ್ತದೆ. ಈ ಸಮಿತಿಯ ಪದಾಧಿಕಾರಿಗಳನ್ನು ಸರಕಾರ ನೇಮಿಸುತ್ತದೆ. ಈ ಪದಾಧಿಕಾರಿಗಳು ಭಾರತೀಯರಾಗಿರಬೇಕು. ಈ ಪೈಕಿ ನಾಲ್ವರು ಬೌದ್ಧರಾಗಿರಬೇಕು ಮತ್ತು ನಾಲ್ವರು ಮಹಂತರು ಸೇರಿದಂತೆ ಹಿಂದೂಗಳಾಗಿರಬೇಕು.

ಗಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಮಿತಿಯ ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ.

ತಮ್ಮ ದೇವಾಲಯವನ್ನು ವಶಪಡಿಸಿಕೊಂಡಿರುವುದರ ವಿರುದ್ಧ ಬೌದ್ಧರು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರು 2012ರಲ್ಲಿ ಸುಪ್ರೀಂ ಕೋರ್ಟಿಗೂ ಹೋಗಿದ್ದಾರೆ. ಈ ಪ್ರಕರಣವು 13 ವರ್ಷಗಳ ಬಳಿಕವೂ ನ್ಯಾಯಾಲಯದಲ್ಲಿ ಬಾಕಿಯಾಗಿದೆ.

ಅದೇ ರೀತಿ, ಪಂಜಾಬ್ ಸರಕಾರವು 1925ರ ಸಿಖ್ ಗುರುದ್ವಾರ ಕಾಯ್ದೆಯ ಮೂಲಕ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ ಕಾಯ್ದೆ (ಎಸ್ಜಿಪಿಸಿಎ)ಯ ವ್ಯವಹಾರಗಳಲ್ಲಿ ಹಸ್ತಕ್ಷೇಪ ನಡೆಸಲು ಪ್ರಯತ್ನಿಸಿದೆ. ಅದನ್ನು ಸಿಖ್ ಸಮುದಾಯವು ವಿರೋಧಿಸುತ್ತಿದೆ.

ಸಂವಿಧಾನದ 26ನೇ ವಿಧಿ ಹೀಗೆ ಹೇಳುತ್ತದೆ

ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸುವ ಸ್ವಾತಂತ್ರ್ಯ:

ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಮತ್ತು ಆರೋಗ್ಯಕ್ಕೆ ಹೊಂದಿಕೊಂಡು, ಪ್ರತಿಯೊಂದು ಧಾರ್ಮಿಕ ಗುಂಪುಗಳು ಅಥವಾ

ಅದರೊಳಗಿನ ಯಾವುದೇ ಉಪ ಗುಂಪುಗಳಿಗೆ ಈ ಕೆಳಗಿನ ಹಕ್ಕುಗಳಿವೆ:

ಎ) ಧಾರ್ಮಿಕ ಮತ್ತು ದತ್ತಿ ಉದ್ದೇಶಗಳಿಗಾಗಿ ಸಂಸ್ಥೆಗಳನ್ನು ಸ್ಥಾಪಿಸಿ ನಡೆಸಿಕೊಂಡು ಬರುವ ಹಕ್ಕು

ಬಿ) ಧರ್ಮಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ತನ್ನ ವ್ಯವಹಾರಗಳನ್ನು ಸ್ವತಃ ನಿಭಾಯಿಸುವ ಹಕ್ಕು

ಸಿ) ಚರ ಮತ್ತು ಸ್ಥಿರ ಆಸ್ತಿಗಳನ್ನು ಹೊಂದುವ ಹಕ್ಕು; ಮತ್ತು

ಡಿ) ಇಂಥ ಆಸ್ತಿಗಳ ಆಡಳಿತವನ್ನು ಕಾನೂನಿಗೆ ಅನುಗುಣವಾಗಿ ನಡೆಸುವ ಹಕ್ಕು

ಧಾರ್ಮಿಕ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಹಕ್ಕನ್ನು ಎಲ್ಲ ಧರ್ಮಗಳು ಹೊಂದಿವೆ. ಟಿಎಂಎ ಪೈ ಪ್ರತಿಷ್ಠಾನ ವಿರುದ್ಧ ಕರ್ನಾಟಕ ಸರಕಾರ ಪ್ರಕರಣದ ತನ್ನ ತೀರ್ಪಿನಲ್ಲಿ ಸರ್ವೋಚ್ಚ ನ್ಯಾಯಾಲಯವು ಸಂವಿಧಾನದ 26ನೇ ವಿಧಿಯು ಅದರಲ್ಲಿರುವ ಹಕ್ಕುಗಳನ್ನು ಚಲಾಯಿಸುವ ಅಧಿಕಾರವನ್ನು ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ಧಾರ್ಮಿಕ ಪಂಗಡಗಳಿಗೆ ನೀಡುತ್ತದೆ ಎಂದು ಹೇಳಿದೆ.(ಪ್ಯಾರಾ 84)

ತಾರತಮ್ಯ

ಉತ್ತರ ಪ್ರದೇಶ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ ಕಾಯ್ದೆಯ ಕಲಂ 3ರ ಪ್ರಕಾರ, ಯಾವುದೇ ವ್ಯಕ್ತಿಯು ಧರ್ಮದಿಂದ ಹಿಂದೂ ಅಲ್ಲದಿದ್ದರೆ ಮಂಡಳಿ ಅಥವಾ ಕಾರ್ಯಕಾರಿ ಸಮಿತಿಯ ಸದಸ್ಯನಾಗಿ ಅಥವಾ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಅಥವಾ ದೇವಸ್ಥಾನದ ಉದ್ಯೋಗಿಯಾಗಿ ಮುಂದುವರಿಯಲು ಅರ್ಹನಾಗಿರುವುದಿಲ್ಲ. ಆದ್ದರಿಂದ ಕಾರ್ಯಕಾರಿ ಸದಸ್ಯರು ಮಾತ್ರವಲ್ಲ, ಯಾವುದೇ ಉದ್ಯೋಗಿಯೂ ಹಿಂದೂಯೇತರರಾಗಿರಲು ಸಾಧ್ಯವಿಲ್ಲ.

ಜಮ್ಮು ಮತ್ತು ಕಾಶ್ಮೀರ ಶ್ರೀ ಮಾತಾ ವೈಷ್ಣೋದೇವಿ ಮಂದಿರ ಕಾಯ್ದೆ, 1988ರ ಕಲಂ 5 ಅಧ್ಯಕ್ಷರಾಗಿ ಲೆಫ್ಟಿನಂಟ್ ಗವರ್ನರ್ ಮತ್ತು 10 ನ್ನು ಮೀರದ ಸದಸ್ಯರನ್ನೊಳಗೊಂಡಿರುವ ಮಂಡಳಿಯು ಶ್ರೀಮಾತಾ ವೈಷ್ಣೋದೇವಿ ಮಂದಿರ ಮತ್ತು ಮಂದಿರದ ನಿಧಿಯ ಆಡಳಿತ ಮತ್ತು ನಿರ್ವಹಣೆಯ ಅಧಿಕಾರವನ್ನು ಹೊಂದಿರುತ್ತದೆ ಎಂದು ಹೇಳುತ್ತದೆ ಮತ್ತು ಕಲಂ 8 ರಡಿ ಅವರೆಲ್ಲರೂ ಹಿಂದೂಗಳಾಗಿರುವುದು ಅಗತ್ಯವಾಗಿದೆ.

ಆದರೆ ವಕ್ಫ್ ಕಾಯ್ದೆಗೆ ತರಲಾಗಿರುವ ತಿದ್ದುಪಡಿಗಳಂತೆ ವಕ್ಫ್ ಮಂಡಳಿಯಲ್ಲಿ ಇಬ್ಬರು ಮುಸ್ಲಿಮೇತರ ಸದಸ್ಯರು ಇರುತ್ತಾರೆ. ಇದು ತಾರತಮ್ಯದಿಂದ ಕೂಡಿದ್ದು ಸರ್ವೋಚ್ಚ ನ್ಯಾಯಾಲಯವು ಸರಕಾರವು ದೇವಸ್ಥಾನಗಳು ಮತ್ತು ದತ್ತಿಗಳ ಆಡಳಿತ ಮಂಡಳಿಯಲ್ಲಿ ಮುಸ್ಲಿಮರಿಗೆ ಅವಕಾಶ ನೀಡುತ್ತದೆಯೇ ಎಂದು ಸರಿಯಾಗಿಯೇ ಪ್ರಶ್ನಿಸಿದೆ.

ವಿಶೇಷವಾಗಿ ಎಲ್ಲ ಹಿಂದೂ ದೇವಸ್ಥಾನಗಳು ಮತ್ತು ದತ್ತಿಗಳ ಕಾಯ್ದೆಗಳು ಹಿಂದೂಯೇತರರಿಗೆ ಅವಕಾಶವನ್ನು ನಿರಾಕರಿಸಿರುವಾಗ, ವಕ್ಫ್ ತಿದ್ದುಪಡಿ ಕಾಯ್ದೆಯ ತಿದ್ದುಪಡಿಗಳು, ವಕ್ಫ್‌ಗಳ ಆಡಳಿತದಲ್ಲಿ ಮುಸ್ಲಿಮೇತರರ ಸೇರ್ಪಡೆಗೆ ಅವಕಾಶವನ್ನು ಒದಗಿಸಿರುವ ಕಲಂ 9 ರ ನಿಬಂಧನೆಗಳು ಸಂವಿಧಾನದ ವಿಧಿ 14 ಮತ್ತು 26ರ ಮೇಲೆ ನೇರ ದಾಳಿಯನ್ನು ಮಾಡುತ್ತವೆ. ವಿಧಿ 14 ಸಮಾನತೆಯ ಹಕ್ಕು ಖಾತರಿಪಡಿಸಿದರೆ ವಿಧಿ 26 ಭಾರತೀಯ ಸಂವಿಧಾನದಲ್ಲಿ ಹೇಳಿರುವಂತೆ ಧಾರ್ಮಿಕ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆ.

ಜೀವನ ಮತ್ತು ಆಸ್ತಿಯ ಹಕ್ಕು

ಮುಸ್ಲಿಮ್ ಆಗಿರುವ ವ್ಯಕ್ತಿಯು ಐದು ವರ್ಷಗಳಿಂದ ಧರ್ಮವನ್ನು ಆಚರಿಸಿರದಿದ್ದರೆ ವಕ್ಫ್‌ಗೆ ದೇಣಿಗೆಯನ್ನು ನೀಡುವಂತಿಲ್ಲ ಎಂದು ಸೂಚಿಸುವ ತಿದ್ದುಪಡಿಯು ಜೀವನ ಮತ್ತು ಆಸ್ತಿ ಹಕ್ಕಿನ ಗಂಭೀರ ಉಲ್ಲಂಘನೆಯಾಗುತ್ತದೆ. ಓರ್ವ ವ್ಯಕ್ತಿಯು ತನ್ನ ಆಸ್ತಿಗಳನ್ನು ತನಗೆ ಸೂಕ್ತವೆನಿಸಿದ ರೀತಿಯಲ್ಲಿ ನಿರ್ವಹಿಸುವುದನ್ನು ನಿಷೇಧಿಸುವ ಯಾವುದೇ ಕಾನೂನು ಇಲ್ಲ. ಜೊತೆಗೆ ಐದು ವರ್ಷಗಳ ಕಾಲ ಇಸ್ಲಾಮನ್ನು ಆಚರಿಸಬೇಕೆಂಬ ನಿಬಂಧನೆಯು ದುರ್ಬಳಕೆಯಾಗುವ ಸಾಧ್ಯತೆಯಿದೆ. ವ್ಯಕ್ತಿಯೋರ್ವ ಐದು ವರ್ಷಗಳಿಂದ ಇಸ್ಲಾಮನ್ನು ಆಚರಿಸುತ್ತಿದ್ದಾನೆ ಎಂದು ಸಾಬೀತುಪಡಿಸುವುದು ಅಸಾಧ್ಯ. ಇತರ ಯಾವುದೇ ದತ್ತಿ ಕಾಯ್ದೆಯಲ್ಲಿ ಇಂತಹ ಷರತ್ತು ಇಲ್ಲ.

ವಕ್ಫ್ ಆಸ್ತಿಗಳನ್ನು ವಶಪಡಿಸಿಕೊಳ್ಳುವುದು

ವಕ್ಫ್‌ಗಳು ತುಂಬ ಹಳೆಯದಾಗಿರುವುದರಿಂದ ಆಸ್ತಿ ದಾಖಲೆಗಳು ಲಭ್ಯವಿಲ್ಲದ ಖಬರಸ್ತಾನ್, ಈದ್ಗಾ, ಮಕ್ಬರಾ ಮತ್ತು ದರ್ಗಾದಂತಹ ಹಲವಾರು ಆಸ್ತಿಗಳು ಅನಾದಿ ಕಾಲದಿಂದಲೂ ವಕ್ಫ್ ಬೈ ಯೂಸರ್ ಆಗಿವೆ. ಸರ್ವೋಚ್ಚ ನ್ಯಾಯಾಲಯವು ಅಯೋಧ್ಯಾ ಪ್ರಕರಣದಲ್ಲಿ (ಪ್ಯಾರಾ 733) ಈ ಪರಿಕಲ್ಪನೆಯನ್ನು ಎತ್ತಿ ಹಿಡಿದಿದೆ.

ಜನರು ತಮ್ಮ ಖಾಸಗಿ ಆಸ್ತಿಗಳಲ್ಲಿ ಮಸೀದಿಗಳನ್ನು ಸ್ಥಾಪಿಸಿ ನಂತರ ಯಾವುದೇ ಲಿಖಿತ ದಾಖಲೆಯಿಲ್ಲದೆ ಅವುಗಳನ್ನು ಸಮುದಾಯಕ್ಕೆ ಅರ್ಪಿಸುತ್ತಾರೆ ಮತ್ತು ಈ ಮಸೀದಿಗಳು ವಕ್ಫ್ ಬೈ ಯೂಸರ್ ಆಗುತ್ತವೆ. ಹೀಗಾಗಿ ತಿದ್ದುಪಡಿ ಕಾಯ್ದೆಯಿಂದ ವಕ್ಫ್ ಬೈ ಯೂಸರ್ ನಿಬಂಧನೆಯನ್ನು ತೆಗೆದುಹಾಕುವುದು ಅನ್ಯಾಯವಾಗಿದೆ ಮತ್ತು ತಾರತಮ್ಯ ಆಗಿದೆ. ಕರ್ನಾಟಕದ ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಕಾಯ್ದೆ 1997 ಕಲಂ 2(5) ಎಂಡೋಮೆಂಟ್ ಬೈ ಯೂಸರ್‌ಗೆ ಅವಕಾಶವನ್ನು ಕಲ್ಪಿಸಿದೆ.

ಈ ಕಲಂ ಹೀಗೆ ಹೇಳುತ್ತದೆ

ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿಗಳ ಕಾಯ್ದೆ-1997ರ ಕಲಂ 2(5)ರ ಪ್ರಕಾರ ‘ಧರ್ಮಾದಾಯ ದತ್ತಿ’ಯು ದತ್ತಿ ಸಂಸ್ಥೆಗೆ ಸೇರಿದ ಎಲ್ಲ ಆಸ್ತಿಗಳು ಅಥವಾ ದಾನದ ಉದ್ದೇಶದಿಂದ ನೀಡಲಾದ ಆಸ್ತಿಗಳು ಮತ್ತು ದತ್ತಿ ಸಂಸ್ಥೆಯನ್ನು ಒಳಗೊಂಡಿರುತ್ತದೆ. ಅಂದರೆ, ಯಾವುದೇ ಆಸ್ತಿ, ಒಂದು ಸೇವಾ ಸಂಸ್ಥೆಯನ್ನು ಬೆಂಬಲಿಸಲು ಅಥವಾ ಅದರ ನಿರ್ವಹಣೆಯನ್ನು ನೋಡಿಕೊಳ್ಳಲು ತನ್ನ ಸ್ವಾಧೀನದಲ್ಲಿದ್ದರೆ ಅಥವಾ ಸಿಕ್ಕಿದ್ದರೆ ಅಥವಾ ದತ್ತಿಯಾಗಿ ನೀಡಲ್ಪಟ್ಟಿದ್ದರೆ ಅಥವಾ ಸೇವಾ ಉದ್ದೇಶಕ್ಕಾಗಿ ನೀಡಲ್ಪಟ್ಟಿದ್ದರೆ ಅದು ಸೇವಾ ದತ್ತಿ ಎಂದು ಕರೆಸಿಕೊಳ್ಳುತ್ತದೆ. ಈ ಕಾಯ್ದೆ ಆರಂಭವಾಗುವ ಮೊದಲು ಅಥವಾ ನಂತರ ಆ ಸೇವಾ ಸಂಸ್ಥೆ ನಿಂತು ಹೋಗಿದ್ದರೂ ಅಥವಾ ಆ ಆಸ್ತಿ ಆ ಸೇವಾ ಚಟುವಟಿಕೆಗೆ ಬಳಕೆಯಾಗುವುದು ನಿಂತು ಹೋಗಿದ್ದರೂ ಅಥವಾ ಆ ದತ್ತಿಯ ಉದ್ದೇಶಗಳನ್ನು ಈಡೇರಿಸುವುದು ನಿಂತು ಹೋಗಿದ್ದರೂ ಇದು ಅನ್ವಯವಾಗುತ್ತದೆ.

ಲಿಮಿಟೇಷನ್ ಕಾಯ್ದೆಯ ಅನ್ವಯವನ್ನು ತೆಗೆದುಹಾಕುವುದು

ಲಿಮಿಟೇಷನ್ ಕಾಯ್ದೆಯನ್ನು ಅನ್ವಯಿಸದಿರಲು ಅವಕಾಶ ಕಲ್ಪಿಸಿದ್ದ 1995ರ ವಕ್ಫ್ ಕಾಯ್ದೆಯ ಕಲಂ 107 ನ್ನು ಈಗ ತಿದ್ದುಪಡಿಯ ಮೂಲಕ ಕೈಬಿಡಲಾಗಿದೆ. ಆದರೂ 1959 ರ ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆಯು 1963ರ ಲಿಮಿಟೇಷನ್ ಕಾಯ್ದೆಯು ಹಿಂದೂ ದೇವಸ್ಥಾನ ಅಥವಾ ಸಂಸ್ಥೆಗೆ ಸೇರಿದ ಸ್ಥಿರಾಸ್ತಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಯಾವುದೇ ವ್ಯಾಜ್ಯಕ್ಕೆ ಅನ್ವಯಿಸುವುದಿಲ್ಲ ಎಂದು ಹೇಳುತ್ತದೆ

ಯಾವುದೇ ಆಸ್ತಿಯನ್ನು ವಕ್ಫ್ ಎಂದು ಘೋಷಿಸಲು ವಕ್ಫ್ ಮಂಡಳಿಗಳಿಗೆ ಅನಿಯಂತ್ರಿತ ಅಧಿಕಾರವಿದೆ ಎಂಬ ಸುಳ್ಳು

ವಕ್ಫ್ ಮಂಡಳಿಗಳು ವ್ಯಾಪಕ ಅಧಿಕಾರಗಳನ್ನು ಹೊಂದಿವೆ ಮತ್ತು ವಕ್ಫ್ ಆಸ್ತಿ ಎಂದು ತಾನು ನಂಬಲು ಕಾರಣವಿರುವ ಯಾವುದೇ ಆಸ್ತಿಯನ್ನು ವಕ್ಫ್ ಆಸ್ತಿಯೆಂದು ಘೋಷಿಸಬಹುದು ಎನ್ನುವುದು ಪ್ರಮುಖ ಅಪಪ್ರಚಾರವಾಗಿದೆ. ವಕ್ಫ್ ಕಾಯ್ದೆ 2013ರ ಕಲಂ 40 ಹೀಗೆ ಹೇಳುತ್ತದೆ:

40.ಆಸ್ತಿಯು ವಕ್ಫ್ ಆಸ್ತಿಯೇ ಎಂಬ ನಿರ್ಧಾರ

(1) ವಕ್ಫ್ ಆಸ್ತಿ ಎಂದು ತಾನು ನಂಬಲು ಕಾರಣವಿರುವ ಯಾವುದೇ ಆಸ್ತಿಯ ಬಗ್ಗೆ ಮಂಡಳಿಯು ಸ್ವತಃ ಮಾಹಿತಿಯನ್ನು ಸಂಗ್ರಹಿಸಬಹುದು ಹಾಗೂ ನಿರ್ದಿಷ್ಟ ಆಸ್ತಿಯು ವಕ್ಫ್ ಆಸ್ತಿಯೇ ಅಥವಾ ಅಲ್ಲವೇ ಅಥವಾ ವಕ್ಫ್ ಸುನ್ನಿ ವಕ್ಫ್ ಅಥವಾ ಶಿಯಾ ವಕ್ಫ್ ಆಗಿದೆಯೇ ಎಂಬ ಯಾವುದೇ ಪ್ರಶ್ನೆ ಉದ್ಭವಿಸಿದರೆ ಅದು ತಾನು ಸೂಕ್ತವೆಂದು ಭಾವಿಸಿದ ವಿಚಾರಣೆಯನ್ನು ನಡೆಸಿದ ಬಳಿಕ ಈ ಪ್ರಶ್ನೆಯನ್ನು ನಿರ್ಧರಿಸಬಹುದು.

(2) ಉಪವಿಭಾಗ (1) ರಡಿ ಪ್ರಶ್ನೆಯ ಕುರಿತು ಮಂಡಳಿಯ ನಿರ್ಧಾರವು,ನ್ಯಾಯಮಂಡಳಿಯಿಂದ ರದ್ದುಗೊಂಡಿರದಿದ್ದರೆ ಅಥವಾ ಪರಿಷ್ಕೃತಗೊಂಡಿರದಿದ್ದರೆ, ಅಂತಿಮವಾಗಿರುತ್ತದೆ.

ತಿದ್ದುಪಡಿ ಮಾಡದ ಕಾಯ್ದೆಯ ಕಲಂ 83ರಡಿ ರಾಜ್ಯ ಸರಕಾರವು ವಕ್ಫ್ ಅಥವಾ ವಕ್ಫ್ ಆಸ್ತಿ,ಬಾಡಿಗೆದಾರರ ತೆರವು ಅಥವಾ ಇಂತಹ ಆಸ್ತಿಯನ್ನು ಬಾಡಿಗೆಗೆ ಪಡೆದಿರುವವರ ಮತ್ತು ನೀಡಿರುವವರ ಹಕ್ಕುಬಾಧ್ಯತೆಗಳ ನಿರ್ಧಾರಕ್ಕೆ ಸಂಬಂಧಿಸಿದ ಯಾವುದೇ ವಿವಾದ,ಪ್ರಶ್ನೆ ಅಥವಾ ಇತರ ವಿಷಯಗಳ ನಿರ್ಣಯಕ್ಕಾಗಿ ನ್ಯಾಯಮಂಡಳಿಗಳನ್ನು ರಚಿಸುತ್ತದೆ.

ನ್ಯಾಯಮಂಡಳಿಯು ಜಿಲ್ಲಾ, ಸೆಷನ್ಸ್ ಅಥವಾ

ಕ್ಲಾಸ್ 1 ಸಿವಿಲ್ ನ್ಯಾಯಾಧೀಶರ ಶ್ರೇಣಿಗಿಂತ ಕಡಿಮೆಯಲ್ಲದ ಶ್ರೇಣಿಯನ್ನು ಹೊಂದಿರುವ ರಾಜ್ಯ ನ್ಯಾಯಾಂಗ ಸೇವೆಯ ಓರ್ವ ಸದಸ್ಯರನ್ನು ಅಧ್ಯಕ್ಷರನ್ನಾಗಿ, ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿಗಳ ಹುದ್ದೆಗೆ ಸಮಾನವಾದ ಶ್ರೇಣಿಯನ್ನು ಹೊಂದಿರುವ ರಾಜ್ಯ ನಾಗರಿಕ ಸೇವೆಗಳ ಓರ್ವ ಅಧಿಕಾರಿಯನ್ನು ಸದಸ್ಯರನ್ನಾಗಿ ಹಾಗೂ ಮುಸ್ಲಿಮ್ ಕಾನೂನು ಮತ್ತು ನ್ಯಾಯಶಾಸ್ತ್ರವನ್ನು ತಿಳಿದಿರುವ ಓರ್ವ ವ್ಯಕ್ತಿಯನ್ನು ಸದಸ್ಯರನ್ನಾಗಿ ಹೊಂದಿರುತ್ತದೆ. ಇಂತಹ ಪ್ರತಿಯೊಬ್ಬ ವ್ಯಕ್ತಿಯ ನೇಮಕಾತಿಯನ್ನು ಹೆಸರಿನಿಂದ ಅಥವಾ ಹುದ್ದೆಯ ಮೂಲಕ ಮಾಡಲಾಗುತ್ತದೆ.

ಯಾವುದೇ ವ್ಯಕ್ತಿಯು ಯಾವುದೇ ಆಕ್ಷೇಪವನ್ನು ವ್ಯಕ್ತಪಡಿಸಿದರೆ ಅದು ಕಾನೂನಿನ ಆಡಳಿತವನ್ನು ಗಂಭೀರವಾಗಿ ದುರ್ಬಲಗೊಳಿಸುತ್ತದೆ, ಏಕೆಂದರೆ ಹಾಗೆ ಮಾಡುವುದು ವಾಸ್ತವದಲ್ಲಿ ಸೇವೆಯಲ್ಲಿರುವ ಸೆಷನ್ಸ್ ನ್ಯಾಯಾಧೀಶರ ಪ್ರಾಮಾಣಿಕತೆಯನ್ನು ಅನುಮಾನಿಸುತ್ತದೆ ಮತ್ತು ಆಯಾ ರಾಜ್ಯಗಳ ಮುಖ್ಯ ನ್ಯಾಯಾಧೀಶರ ಅನುಮೋದನೆಯಿಲ್ಲದೆ ಸೆಷನ್ಸ್ ನ್ಯಾಯಾಧೀಶರ ನೇಮಕಾತಿಯನ್ನು ಮಾಡಲಾಗುವುದಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ.

ಆಸ್ತಿಯೊಂದನ್ನು ವಕ್ಫ್ ಆಸ್ತಿಯೆಂದು ಘೋಷಿಸುವ ವಕ್ಫ್ ಮಂಡಳಿಯ ಅಧಿಕಾರಗಳು ಕಠಿಣ ಪ್ರಕ್ರಿಯೆಗೆ ಒಳಗಾಗಬೇಕಾಗುತ್ತದೆ. ಅದು ವಕ್ಫ್ ಎಂದು ಘೋಷಿಸುವ ಮುನ್ನ ಸೂಕ್ತ ವಿಚಾರಣೆಯನ್ನು ಮಾಡಬೇಕಾಗುತ್ತದೆ ಮತ್ತು ಜಿಲ್ಲಾ ನ್ಯಾಯಾಧೀಶರ ಅಧ್ಯಕ್ಷತೆಯ ನ್ಯಾಯಮಂಡಳಿಯ ಮುಂದೆ ಅದನ್ನು ಸಮರ್ಥಿಸಿಕೊಳ್ಳಬೇಕಾಗುತ್ತದೆ.

ಇದು ನಂತರ ಉಚ್ಚ ನ್ಯಾಯಾಲಯದ ಪರಿಷ್ಕರಣೆಗೆ ಮತ್ತು ಸರ್ವೋಚ್ಚ ನ್ಯಾಯಾಲಯದ ಮುಂದೆ ಎಸ್‌ಎಲ್ಪಿ (ಸ್ಪೆಷಲ್ ಲೀವ್ ಪೆಟಿಷನ್)ಗೆ ಒಳಗಾಗಬೇಕಾಗುತ್ತದೆ.

ಇದು ಸದೃಢ ಕಾರ್ಯವಿಧಾನವಾಗಿದ್ದು,ಯಾವುದೇ ನಿಜವಾದ ಹಕ್ಕುಕೋರಿಕೆಗೆ ಅನ್ಯಾಯವಾಗುವ ಅವಕಾಶ ತೀರ ಕಡಿಮೆಯಿರುತ್ತದೆ.

ಆದ್ದರಿಂದ ವಕ್ಫ್ ಕಾಯ್ದೆಗೆ ತಿದ್ದುಪಡಿಗಳ ವಿರುದ್ಧದ ಹೋರಾಟವು ಭಾರತದ ಪ್ರತಿಷ್ಠೆಗಾಗಿ ಹಾಗೂ ಸುಸ್ಥಿರ ಪ್ರಜಾಸತ್ತಾತ್ಮಕ ದೇಶದ ಬುನಾದಿಗಳಾಗಿರುವ ಸಾಂವಿಧಾನಿಕ ತತ್ವಗಳು ಮತ್ತು ಕಾನೂನಿನ ಆಡಳಿತ, ನಿಷ್ಪಕ್ಷತನ ಮತ್ತು ಸಹಬಾಳ್ವೆಗೆ ಅದರ ಬದ್ಧತೆಗಾಗಿ ಹೋರಾಟವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಎಸ್.ಎ.ಎಚ್. ರಝ್ವಿ, ವಕೀಲರು, ಬೆಂಗಳೂರು

contributor

Similar News