ಹಳೆ ವಿದ್ಯಾರ್ಥಿಗಳಿಂದ ‘ನನ್ನ ಶಾಲೆಗೆ ನನ್ನ ಸೇವೆ’

Update: 2025-04-21 16:22 IST
Editor : Ashik | Byline : ಸತ್ಯಾ ಕೆ.
ಹಳೆ ವಿದ್ಯಾರ್ಥಿಗಳಿಂದ ‘ನನ್ನ ಶಾಲೆಗೆ ನನ್ನ ಸೇವೆ’
  • whatsapp icon

ಮಂಗಳೂರು : ಖಾಸಗಿ ಶಾಲೆಗಳ ಪೈಪೋಟಿಯ ನಡುವೆ ಸರಕಾರಿ ಶಾಲೆಯೊಂದನ್ನು ಉಳಿಸಿ ಅಭಿವೃದ್ಧಿಪಡಿಸುವುದು ಸಾಹಸದ ಕೆಲಸ. ಆದರಲ್ಲೂ ನಗರ ಪ್ರದೇಶದಲ್ಲಿ ಖಾಸಗಿ ಶಾಲೆಗಳಿಗೆ ಸರಿಸಾಟಿಯಾಗಿ ಆಧುನಿಕತೆಯೊಂದಿಗೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಒದಗಿಸುವುದು ಬಹುದೊಡ್ಡ ಸಾಹಸ. ಆ ನಿಟ್ಟಿನಲ್ಲಿ ಮಂಗಳೂರು ನಗರದಲ್ಲಿ ರಾಷ್ಟ್ರ ಮಟ್ಟದಲ್ಲಿ ಮಾದರಿ ಶಾಲೆಯಾಗಿ ಗುರುತಿಸಿಕೊಂಡಿರುವ ಶಕ್ತಿನಗರದ ನಾಲ್ಯಪದವು ಪಿಎಂಶ್ರೀ ಕುವೆಂಪು ಶತಮಾನೋತ್ಸವ ಉನ್ನತೀಕರಿಸಿದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹೊಸ ಅಭಿಯಾನದ ಮೂಲಕ ಗಮನಸೆಳೆದಿದೆ.

ಹಲವು ವಿಶೇಷತೆಗಳನ್ನು ಹೊಂದಿರುವ ಈ ಶಾಲೆಯಲ್ಲಿ ಈ ವರ್ಷದಿಂದ ಹಳೆ ವಿದ್ಯಾರ್ಥಿ ಗಳಿಂದ ‘ನನ್ನ ಶಾಲೆಗೆ ನನ್ನ ಸೇವೆ’ ಎಂಬ ವಿನೂತನ ಅಭಿಯಾನ ಆರಂಭಿಸಲಾಗಿದೆ.

ಶಾಲೆಯ ಹಳೆ ವಿದ್ಯಾರ್ಥಿಗಳು, ಹಿತೈಷಿ ಗಳು, ಪೋಷಕರು ಸೇರಿದಂತೆ ಶಾಲೆಯ ಸ್ಥಳೀಯ ಆಸಕ್ತ ಅಭಿಮಾನಿಗಳು ಪಿಗ್ಗಿ ಬ್ಯಾಂಕ್ ಮಾದರಿಯ ಹಣ ಉಳಿತಾಯದ ಡಬ್ಬಿ ಗಳಲ್ಲಿ ವರ್ಷಪೂರ್ತಿ ಹಣ ಸಂಗ್ರಹಿಸುವುದು. ವರ್ಷ ವೊಂದರಲ್ಲಿ ಸಂಗ್ರಹವಾಗುವ ಹಣವನ್ನು ಶಾಲೆಗೆ ನೀಡುವುದು. ಅದನ್ನು ಶಾಲೆಯ ಟ್ರಸ್ಟ್ ಮೂಲಕ ಶಾಲೆಯ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸುವ ಅಭಿಯಾನವೇ ‘ನನ್ನ ಶಾಲೆಗೆ ನನ್ನ ಸೇವೆ’. 2025ರ ಜನವರಿ 12ರಂದು ಶಾಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಳೆ ವಿದ್ಯಾರ್ಥಿಗಳಿಗೆ ಹಣ ಉಳಿತಾಯದ ಡಬ್ಬಿಗಳನ್ನು ನೀಡುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.

‘‘ಶಾಲೆಯ ಹಳೆ ವಿದ್ಯಾರ್ಥಿಗಳ ನೇತೃತ್ವ ಹಾಗೂ ಸಹಕಾರದಲ್ಲಿ ಶಾಲೆಯು ಮುನ್ನಡೆಯುತ್ತಿದೆ. ಶಕ್ತಿನಗರದ ಪ್ರಮುಖ ಶಾಲೆಯಾಗಿ ಗುರುತಿಸಿಕೊಂಡಿರುವ ಇಲ್ಲಿನ ಮಕ್ಕಳ ಶಿಕ್ಷಣದ ಗುಣಮಟ್ಟವನ್ನು ಇನ್ನಷ್ಟು ಉತ್ತಮ ಪಡಿಸುವ ನಿಟ್ಟಿನಲ್ಲಿ ಜನವರಿಯಲ್ಲಿ ‘ನನ್ನ ಶಾಲೆಗೆ ನನ್ನ ಸೇವೆ’ಯನ್ನು ಚಳವಳಿಯ ರೂಪದಲ್ಲಿ ಆರಂಭಿಸಿದ್ದೇವೆ’’ ಎನ್ನುತ್ತಾರೆ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯಿನಿ ದಾಕ್ಷಾಯಿಣಿಯಮ್ಮ ಎಸ್.

ಹೈಟೆಕ್ ಶಿಕ್ಷಣ :

ಈ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಇಲ್ಲಿನ ಶಿಕ್ಷಕರು, ಹಳೆ ವಿದ್ಯಾರ್ಥಿಗಳ ಟ್ರಸ್ಟ್, ಶಾಲಾಭಿವೃದ್ಧಿ ಸಮಿತಿ, ಪದವು ಫ್ರೆಂಡ್ಸ್ ಕ್ಲಬ್‌ಗಳ ಸಹಕಾರದಲ್ಲಿ ನಡೆಸಲ್ಪಡುವ ಆಂಗ್ಲ ಮಾಧ್ಯಮ ತರಗತಿಗಳಲ್ಲಿ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಂತೆಯೇ ಹೈಟೆಕ್ ಮಾದರಿಯ ಶಿಕ್ಷಣ ಒದಗಿಸಲಾಗುತ್ತದೆ. ಶಿಸ್ತು, ಸ್ವಚ್ಛತೆಯ ಜತೆಗೆ ಮಕ್ಕಳಿಗೆ ವಿಶೇಷವಾದ ಸಮವಸ್ತ್ರ, ಅತ್ಯುತ್ತಮ ಆಸನದ ವ್ಯವಸ್ಥೆ, ಎರಡು ಡಿಜಿಟಲ್ ಬೋರ್ಡ್, ಐದು ಟಿವಿಗಳು, ಕಂಪ್ಯೂಟರ್ ಲ್ಯಾಬ್ ವ್ಯವಸ್ಥೆಯೂ ಶಾಲೆಯಲ್ಲಿದೆ. ಶಾಲಾ ಕೊಠಡಿಗಳ ಹೊರಗಡೆ ಪುಟ್ಟ ಮಕ್ಕಳಿಗೆ ಆಕರ್ಷಣೀಯವಾದ ಕಸದ ಬುಟ್ಟಿಗಳು, ಶಾಲೆಯ ಹಿತ್ತಲಲ್ಲಿ ಕೈತೋಟ, ಔಷಧೀಯ ವನವೂ ಇದೆ.

ಇಲ್ಲಿನ ಕಂಪ್ಯೂಟರ್ ಶಿಕ್ಷಕಿ ಸ್ನೇಹಾ ನೇತೃತ್ವದಲ್ಲಿ ಇಲ್ಲಿನ ಪುಟಾಣಿ ಮಕ್ಕಳು ಕೂಡಾ ಟಿವಿ ಕಾರ್ಯಕ್ರಮ ನಿರೂಪಕರಂತೆ, ಸುದ್ದಿ ವಾಚಕ ರಂತೆ ಕಾರ್ಯ ನಿರ್ವಹಿಸಬಲ್ಲರು.

ಆಂಗ್ಲ ಮಾಧ್ಯಮ ಸೇರಿದಂತೆ ಎಲ್‌ಕೆಜಿಯಿಂದ 8ನೆ ತರಗತಿವರೆಗೆ ಒಟ್ಟು 16 ತರಗತಿಗಳಲ್ಲಿ 24 ಶಿಕ್ಷಕರೊಂದಿಗೆ 626 ಮಕ್ಕಳು ಶಿಕ್ಷಣ ಪಡೆಯು ತ್ತಿದ್ದಾರೆ. ಇಲ್ಲಿ ಕನ್ನಡ ಮಾಧ್ಯಮದಲ್ಲಿ 130 ಮಕ್ಕಳು ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದಾರೆ.

ಶಾಲೆ ಉಳಿಸಲು 1 ರೂ. ಅಭಿಯಾನ ನಡೆಸಿದ್ದ ಶಿಕ್ಷಕರು! :

1962ರಲ್ಲಿ ಆರಂಭಗೊಂಡ ಈ ಶಾಲೆ ಒಂದು ಕಾಲದಲ್ಲಿ ಶಕ್ತಿನಗರ ದಲ್ಲಿ ಅತ್ಯುತ್ತಮ ಶಾಲೆಯಾಗಿಯೇ ಲಕ್ಷಾಂತರ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿತ್ತು. ವರ್ಷವೊಂದಕ್ಕೆ 900ಕ್ಕೂ ಅಧಿಕ ಮಕ್ಕಳೊಂದಿಗೆ ಪ್ರಾಥಮಿಕ ಶಿಕ್ಷಣ ಒದಗಿಸುತ್ತಿದ್ದ ಶಾಲೆಯಲ್ಲಿ ಬರಬರುತ್ತಾ ಮಕ್ಕಳ ಸಂಖ್ಯೆ ಕಡಿಮೆಯಾಗತೊಡಗಿತ್ತು. ಪೋಷಕರು ಆಂಗ್ಲ ಮಾಧ್ಯಮ ಶಾಲೆಗಳತ್ತ ಹೆಚ್ಚಿನ ಆಸಕ್ತಿ ತೋರಿಸಿದ ಕಾರಣ 2014-15ನೇ ಸಾಲಿಗೆ ಇಲ್ಲಿ ಮಕ್ಕಳ ಸಂಖ್ಯೆ 170ಕ್ಕೆ ಕುಸಿದಿತ್ತು. ಇದಕ್ಕಾಗಿ ಶಿಕ್ಷಕರು ಶಕ್ತಿನಗರ ವ್ಯಾಪ್ತಿಯಲ್ಲಿ ಮನೆಗಳಿಗೆ ತೆರಳಿ ಒಂದು ರೂ. ಅಭಿಯಾನ ಆರಂಭಿಸಿದರು. ಆ ಸಂದರ್ಭ ಮುಖ್ಯೋಪಾಧ್ಯಾಯಿನಿಯಾಗಿದ್ದ ಉದಯರವರ ಸಹಕಾರದಲ್ಲಿ ಶಿಕ್ಷಕಿಯಾಗಿದ್ದ ದಾಕ್ಷಾಯಿಣಿಯಮ್ಮ ನೇತೃತ್ವದಲ್ಲಿ ಶಾಲಾ ಶಿಕ್ಷಕರ ಅಭಿಯಾನ ಆರಂಭಿಸಿದ್ದರು. ಆ ಮೂಲಕ ದೇಣಿಗೆ ಸಂಗ್ರಹಿಸಿ ಶಾಲೆಯ ಹಳೆಯ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಶಾಲಾಭಿಮಾನಿಗಳಿಗೆ ಪ್ರೇರಣೆಯಾದರು. ಬಳಿಕ ಹಳೆ ವಿದ್ಯಾರ್ಥಿಗಳು ಟ್ರಸ್ಟ್ ಆರಂಭಿಸಿ ಆ ಮೂಲಕ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣವನ್ನು ಆರಂಭಿಸಿ ಇದೀಗ ಆ ಪ್ರಥಮ ಬ್ಯಾಚ್‌ನ ಆಂಗ್ಲ ಮಾಧ್ಯಮ ಮಕ್ಕಳು 6ನೇ ತರಗತಿಯಲ್ಲಿದ್ದಾರೆ.

ಗುರು ಕಾಣಿಕೆಯ ವಿಶಿಷ್ಟ ಪರಿಕಲ್ಪನೆ :

ಶಾಲೆಯಲ್ಲಿ ಪ್ರತೀ ವಾರ ಶಿಸ್ತುಬದ್ಧ ತರಗತಿ, ಸ್ವಚ್ಛ ತರಗತಿ, ಸಂಪೂರ್ಣ ಹಾಜರಾತಿಗಾಗಿ ತರಗತಿಗಳನ್ನು ಗುರುತಿಸಿ ಬ್ಯಾಜ್ ನೀಡುವ ಜತೆಗೆ ಸ್ಮಾರ್ಟ್ ಟೀಚರ್‌ಗೆ ಗೌರವ ಕೊಡುವ ಕಾರ್ಯವೂ ಇದೆ. ಇದಲ್ಲದೆ, ಇಲ್ಲಿಯ ಶಿಕ್ಷಕರೂ ಸಮವಸ್ತ್ರ ಧರಿಸಿ ತರಗತಿಗಳಲ್ಲಿ ಪಾಠ ಮಾಡುತ್ತಾರೆ. ಇವೆಲ್ಲದರ ಜತೆಗೆ ‘ಗುರು ಕಾಣಿಕೆ’ ಎಂಬ ಪರಿಕಲ್ಪನೆಯನ್ನೂ ಹುಟ್ಟು ಹಾಕಲಿದೆ.

ಶಾಲೆಯ ಕಚೇರಿ ಕೊಠಡಿಯಲ್ಲಿ ‘ಗುರು ಕಾಣಿಕೆ’ ಎಂಬ ಡಬ್ಬಿಯನ್ನು ಇರಿಸಲಾಗಿದ್ದು, ಪ್ರತಿದಿನ ಶಿಕ್ಷಕರು ವೈಯಕ್ತಿಕವಾಗಿ ತಮ್ಮ ಕೊಡುಗೆಯನ್ನು ಈ ಡಬ್ಬಿಗೆ ಹಾಕುತ್ತಾರೆ. ಪ್ರತೀ ತಿಂಗಳ ಮೊದಲ ವಾರ ಕಾಣಿಕೆ ಡಬ್ಬಿ ತೆರೆಯಲಾಗುತ್ತದೆ. 16 ತರಗತಿಗಳ ಹೆಸರಿನ ಚೀಟಿಯಲ್ಲಿ ಲಕ್ಕಿ ಕ್ಲಾಸ್ ಆಯ್ಕೆ ಮಾಡಿ ಆ ತರಗತಿಗೆ ತಿಂಗಳ ಗುರು ಕಾಣಿಕೆ ಡಬ್ಬಿ ಮೊತ್ತವನ್ನು ವಿನಿಯೋಗಿಸಲಾಗುತ್ತದೆ. ತರಗತಿಯ ಶಿಕ್ಷಕಿ ಅಗತ್ಯ ಪರಿಕರಗಳನ್ನು ಈ ಹಣದಲ್ಲಿ ಖರೀದಿಸುವ ಅವಕಾಶ ಹೊಂದಿರುತ್ತಾರೆ.

ಖಾಸಗಿ ಆಂಗ್ಲ ಮಾಧ್ಯಮ ಶಾಲಾ ಮಕ್ಕಳಿಗೆ ಸರಿಸಮಾನವಾಗಿ ಶಿಕ್ಷಣ ಒದಗಿಸುವ ಉದ್ದೇಶದಿಂದ ಇಲ್ಲಿನ ಎಸ್‌ಡಿಎಂಸಿ, ಹಳೆ ವಿದ್ಯಾರ್ಥಿಗಳ ಟ್ರಸ್ಟ್, ಪದವು ಫ್ರೆಂಡ್ಸ್ ಕ್ಲಬ್ ಹಾಗೂ ಶಾಲಾಭಿಮಾನಿಗಳು ಸಂಪೂರ್ಣ ಸಹಕಾರ ನೀಡುತ್ತಿರುವುದರಿಂದ ಈ ಎಲ್ಲಾ ಹೊಸತನಗಳು ಸಾಧ್ಯವಾಗುತ್ತಿದೆ. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಇತರ ಪದಾಧಿಕಾರಿಗಳು ಪ್ರತಿನಿತ್ಯವೂ ಶಾಲೆಯ ಆಗುಹೋಗುಗಳ ಬಗ್ಗೆ ಗಮನವಿರಿಸಿ, ವಿಚಾರಿಸಿ ಸಹಕರಿಸುತ್ತಿದ್ದಾರೆ. ಶಾಲೆಯಲ್ಲಿ ಈಗಿರುವ ಮಕ್ಕಳಿಗೆ ಹೆಚ್ಚುವರಿ ಕನಿಷ್ಠ ಐದು ಕೊಠಡಿಗಳು, ಶಿಕ್ಷಕರು ಹಾಗೂ ಇತರ ಮೂಲಭೂತ ಸೌಕರ್ಯಗಳ ಅಗತ್ಯವಿದೆ. ಈ ಬಗ್ಗೆ ಸರಕಾರಕ್ಕೂ ಮನವಿ ಸಲ್ಲಿಕೆಯಾಗಿದೆ.

-ದಾಕ್ಷಾಯಿಣಿಯಮ್ಮ ಎಸ್., ಪ್ರಭಾರ ಮುಖ್ಯೋಪಾಧ್ಯಾಯಿನಿ

ಮಕ್ಕಳ ಶೈಕ್ಷಣಿಕ ದತ್ತು! :

ಈ ಶಾಲೆಯಲ್ಲಿ ಹತ್ತು ಹಲವು ವಿಶೇಷತೆಗಳ ನಡುವೆ ಮಕ್ಕಳ ಶಿಕ್ಷಣದ ದತ್ತು ಕೂಡಾ ವಿಶೇಷ ಅಭಿಯಾನವಾಗಿದೆ. ಶಾಲಾ ಮುಖ್ಯೋಪಾಧ್ಯಾಯಿನಿ ದಾಕ್ಷಾಯಿಣಿಯಮ್ಮ ಹಾಗೂ ಇತರ ಕೆಲ ಶಿಕ್ಷಕರು, ಅವರ ಸಂಬಂಧಿಕರು ಸೇರಿ ಈ ಅಭಿಯಾನ ನಡೆಸುತ್ತಿದ್ದಾರೆ. ಆರ್ಥಿಕವಾಗಿ ತೀರಾ ಹಿಂದುಳಿದಿರುವ ಮಗುವಿನ ವಾರ್ಷಿಕ ಖರ್ಚುವೆಚ್ಚವನ್ನು ಈ ದತ್ತು ಯೋಜನೆಯ ಮೂಲಕ ನಿರ್ವಹಿಸಲಾಗುತ್ತದೆ. ದಾಕ್ಷಾಯಿಣಿಯಮ್ಮ ವಾರ್ಷಿಕ ಮೂರು ಮಕ್ಕಳಿಗೆ ತಲಾ 7,000 ರೂ.ನಂತೆ 21 ಸಾವಿರ ರೂ. ವಿನಿಯೋಗಿಸುತ್ತಿದ್ದಾರೆ. ಕಳೆದ ವರ್ಷ ತನ್ನ ಸಹೋದರನೂ ಈ ಅಭಿಯಾನದಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹಿಸಿದ್ದರು ದಾಕ್ಷಾಯಿಣಿಯಮ್ಮ.




Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ಸತ್ಯಾ ಕೆ.

contributor

Similar News