ಜಾತಿ ಗಣತಿ ವರದಿ: ಆತಂಕ ಪಡುವ ಅಗತ್ಯವಿದೆಯೇ?
ಅಧಿಕೃತ ದತ್ತಾಂಶಗಳಿಲ್ಲದೆ ಮೀಸಲಾತಿಯನ್ನು ನ್ಯಾಯಯುತಗೊಳಿಸಲು ಸಾಧ್ಯವಿಲ್ಲ ಎನ್ನುವ ಸುಪ್ರೀಂಕೋರ್ಟ್ನ ಸೂಚನೆಯ ಮೇರೆಗೆ, ದೇಶದಲ್ಲಿ ಮೊದಲ ಬಾರಿಗೆ ಜಾತಿ ಗಣತಿ ನಡೆಸುವ ಹೊಣೆಗಾರಿಕೆಯನ್ನು ಹೊತ್ತುಕೊಂಡಿದ್ದೇ ಕರ್ನಾಟಕ. ಅದರ ನಂತರ ಜಾತಿ ಗಣತಿ ನಡೆಸಿದ ಬಿಹಾರದಲ್ಲಿ ಅದರ ವರದಿ ಮಂಡನೆಯಾಗಿರುವಾಗ, ಕರ್ನಾಟಕದಲ್ಲಿ ಮಾತ್ರ ವರದಿ ಜಾರಿಗೆ ಕೆಲವು ಹಿತಾಸಕ್ತಿಗಳು ಅಡ್ಡಗಾಲು ಹಾಕುತ್ತಲೇ ಇವೆ.;

ಜಾತಿ ಗಣತಿ ವರದಿ ಕುರಿತು ಚರ್ಚಿಸಲು ಎಪ್ರಿಲ್ 17ರಂದು ನಡೆದ ಸಚಿವ ಸಂಪುಟ ಸಭೆ ಅಪೂರ್ಣಗೊಂಡಿದೆ.
ಹಾಗಾಗಿ, ಯಾವುದೇ ತೀರ್ಮಾನ ಆಗಿಲ್ಲ. ಸಭೆಯಲ್ಲಿ ಸಚಿವರು ಅಭಿಪ್ರಾಯ ಹೇಳಿದ್ದಾರೆಯೇ ಹೊರತು ವರದಿಯನ್ನು ಯಾರೂ ವಿರೋಧಿಸಿಲ್ಲ ಮತ್ತು ವರದಿ ಒಪ್ಪಬಾರದು ಎಂಬ ಮಾತೂ ಬಂದಿಲ್ಲ ಎನ್ನಲಾಗಿದೆ. ಇನ್ನೂ ಹಲವು ಸಚಿವರು ಅಭಿಪ್ರಾಯ ಹೇಳಬೇಕಾಗಿದೆ. ಸಾಮಾಜಿಕ ನ್ಯಾಯದ ವಿಷಯದಲ್ಲಿ ಯಾರ ವಿರೋಧವೂ ಇಲ್ಲ ಮತ್ತು ಯಾವ ವರ್ಗಕ್ಕೂ ಅನ್ಯಾಯವಾಗುವುದಿಲ್ಲ ಎನ್ನಲಾಗಿದೆ.
ಸಾಮಾಜಿಕ ನ್ಯಾಯ ನೀಡುವ ನಿಟ್ಟಿನಲ್ಲಿ, ಜಾತಿ ಸಮೀಕ್ಷೆ ನಡೆಸಲು 2014ರಲ್ಲಿ ನಿವೃತ್ತ ನ್ಯಾಯಮೂರ್ತಿ ಎಚ್. ಕಾಂತರಾಜು ಅಧ್ಯಕ್ಷತೆಯಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರಕಾರ ಆಯೋಗ ರಚನೆ ಮಾಡಿತು. ಕಾಂತರಾಜು ನೇತೃತ್ವದ ಆಯೋಗ 2015ನೇ ಸಾಲಿನಲ್ಲಿ ರಾಜ್ಯಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿತು. 2015ರ ಎಪ್ರಿಲ್ 11ರಿಂದ ಶುರುವಾದ ಸಮೀಕ್ಷೆ 2015ರ ಮೇ 30ಕ್ಕೆ ಮುಕ್ತಾಯಗೊಂಡಿತ್ತು.
ಪ್ರತಿಯೊಂದು ಸಮುದಾಯದ ಸ್ಥಿತಿಗತಿ ಏನು ಎಂಬುದನ್ನು ಕಂಡುಕೊಳ್ಳುವುದು ಸಮೀಕ್ಷೆಯ ಉದ್ದೇಶವಾಗಿತ್ತು.
ಮುಖ್ಯ ಉದ್ದೇಶಗಳೆಂದರೆ, ಜನರ ಜೀವನ ಮಟ್ಟ ಮತ್ತು ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ತಿಳಿಯುವುದು; ಈ ಹಿಂದುಳಿದಿರುವಿಕೆಯ ಕಾರಣಗಳನ್ನು ಗುರುತಿಸಿ ಇದರ ಆಧಾರದ ಮೇಲೆ ಹೊಸ ಜಾತಿಗಳನ್ನು ಪ್ರವರ್ಗವಾರು ಸೇರ್ಪಡೆಗೊಳಿಸುವುದು; ಜನರ ಪ್ರಸ್ತುತ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿ ಹಾಗೂ ಹಿಂದುಳಿದಿರುವಿಕೆ ಆಧಾರದ ಮೇಲೆ ಮೀಸಲಾತಿ ಮತ್ತಿತರ ಕಲ್ಯಾಣ ಕಾರ್ಯಕ್ರಮಗಳ ಜಾರಿಗೆ ಪೂರಕವಾಗುವಂತೆ ಸರಕಾರಕ್ಕೆ ನಿಖರ ಅಂಕಿಅಂಶಗಳನ್ನು ಒದಗಿಸುವುದು.
ಹಿಂದುಳಿದ ಸಮುದಾಯಗಳನ್ನು ಗುರುತಿಸಿ, ಅವರಿಗೆ ಸೌಲಭ್ಯ ನೀಡಲು ಇದರಿಂದ ಸರಕಾರಕ್ಕೆ ಸಹಾಯವಾಗುತ್ತದೆ. 2015ರಲ್ಲಿ ಸಿದ್ಧವಾದ ಕಾಂತರಾಜು ಆಯೋಗದ ಈ ವರದಿಯ ಹೆಸರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015 ಎಂದಿದೆ. ಉದ್ದೇಶಕ್ಕೆ ಅನುಗುಣವಾಗಿ, ಜಾತಿವಾರು ಸಮೀಕ್ಷೆಯಲ್ಲಿ ರಾಜ್ಯದ ಪ್ರತಿಯೊಂದು ಸಮುದಾಯದ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯ ಹಿನ್ನೆಲೆಯ ಮಾಹಿತಿಯಿದೆ. ಪ್ರತಿಯೊಂದು ಕುಟುಂಬದ ಸಾಮಾಜಿಕ, ಶೈಕ್ಷಣಿಕ ಆರ್ಥಿಕ, ರಾಜಕೀಯ ಪ್ರಾತಿನಿಧ್ಯ ಮತ್ತು ಔದ್ಯೋಗಿಕ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಇತರ ಹಿಂದುಳಿದ ಜಾತಿಗಳ ಪಟ್ಟಿಯಲ್ಲಿರುವ ಮೀಸಲಾತಿಯನ್ನು ಮರು ವರ್ಗೀಕರಣ ಮಾಡಬೇಕು ಮತ್ತು ಆಯಾ ಜಾತಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳ ಮಾಡಬೇಕು ಎಂದು ಜಾತಿಗಣತಿ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.
ಆಯೋಗದ ಅಧ್ಯಕ್ಷರಾಗಿದ್ದ ಎಚ್. ಕಾಂತರಾಜು ಮತ್ತು ಸದಸ್ಯರುಗಳ ಅವಧಿ 2019ರಲ್ಲಿ ಮುಕ್ತಾಯಗೊಂಡಿತ್ತು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಸರಕಾರಕ್ಕೆ ಸಲ್ಲಿಸಲು ಆಗಿರಲಿಲ್ಲ. ನಂತರ ಕೆ. ಜಯಪ್ರಕಾಶ್ ಹೆಗ್ಡೆ ನೇತೃತ್ವದ ಆಯೋಗ ಸಿದ್ಧಪಡಿಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ -2015ರ ದತ್ತಾಂಶ ಅಧ್ಯಯನ ವರದಿ-2024 ಅನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗಿತ್ತು. ಈ ವರದಿ ಗುರುತಿಸಿರುವಂತೆ, ಕಾಂತರಾಜು ಆಯೋಗ ನಡೆಸಿದ ಸಮೀಕ್ಷೆಯಲ್ಲಿ ರಾಜ್ಯದ ಒಟ್ಟು 6.50 ಕೋಟಿ ಜನಸಂಖ್ಯೆಯ ಶೇ.90ಕ್ಕೂ ಹೆಚ್ಚು ಜನಸಂಖ್ಯೆಗೆ ಸಂಬಂಧಿಸಿ ದತ್ತಾಂಶ ಸಂಗ್ರಹಿಸಲಾಗಿದೆ.
ಒಟ್ಟು 5.98 ಕೋಟಿ ಜನರು ಒಳಗೊಂಡು ಅಂದಾಜು 1.35 ಕೋಟಿ ಕುಟುಂಬಗಳ ಸಮೀಕ್ಷೆ ನಡೆಸಲಾಗಿದೆ. ಖಚಿತವಾಗಿ, 5,98,14,942 ವ್ಯಕ್ತಿಗಳನ್ನು ಒಳಗೊಂಡ 1,35,35,772 ಕುಟುಂಬಗಳ ದತ್ತಾಂಶ ಸಂಗ್ರಹ. ಇದರಲ್ಲಿ 180 ಪರಿಶಿಷ್ಟ ಜಾತಿಗಳು, 105 ಪರಿಶಿಷ್ಟ ಪಂಗಡಗಳು ಸೇರಿದಂತೆ 1,351 ಜಾತಿ, ಸಮುದಾಯಗಳ ಮತ್ತು ಗುರುತಿಸದೇ ಇರುವ 398 ಜಾತಿಗಳು ಸೇರಿವೆ. ಇವರಲ್ಲಿ ಜಾತಿ ತಿಳಿದಿಲ್ಲ ಎಂದವರ ಸಂಖ್ಯೆ 1,94,003; ಯಾವುದೇ ಜಾತಿಗೆ ಸೇರಿಲ್ಲ ಎಂದವರು 1,34,319; ಜಾತಿಯನ್ನು ಬಹಿರಂಗಪಡಿಸಲು ನಿರಾಕರಿಸಿದವರು 2,53,954.
ಒಟ್ಟು 51 ಮಾನದಂಡಗಳನ್ನು ಮುಂದಿಟ್ಟುಕೊಂಡು ನಡೆಸಲಾದ ಸಮೀಕ್ಷೆ ಇದು. ರಾಜ್ಯದ ಪ್ರತಿಯೊಂದು ಕುಟುಂಬದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಪ್ರಾತಿನಿಧ್ಯ ಮತ್ತು ಔದ್ಯೋಗಿಕ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ.
ವರದಿ ಪ್ರಕಾರ ವಿವಿಧ ಜಾತಿ, ಸಮುದಾಯಗಳ ಜನಸಂಖ್ಯೆ ವಿವರ
ಪರಿಶಿಷ್ಟ ಜಾತಿ 1.09ಕೋಟಿ, ಪರಿಶಿಷ್ಟ ಪಂಗಡ 42 ಲಕ್ಷ, ಮುಸ್ಲಿಮ್ 74 ಲಕ್ಷ, ಲಿಂಗಾಯತ 73 ಲಕ್ಷ, ಒಕ್ಕಲಿಗ 70 ಲಕ್ಷ, ಕುರುಬ 45 ಲಕ್ಷ, ಮರಾಠಾ 16 ಲಕ್ಷ, ಬ್ರಾಹ್ಮಣ 15ಲಕ್ಷ, ವಿಶ್ವಕರ್ಮ 15 ಲಕ್ಷ, ಈಡಿಗ 14 ಲಕ್ಷ, ಬೆಸ್ತ 14.50 ಲಕ್ಷ, ಕ್ರೈಸ್ತ 12ಲಕ್ಷ, ಗೊಲ್ಲ (ಯಾದವ) 10.50 ಲಕ್ಷ, ಉಪ್ಪಾರ, ಮಡಿವಾಳ, ಅರೆ ಅಲೆಮಾರಿ ತಲಾ 7 ಲಕ್ಷ, ಕುಂಬಾರ, ತಿಗಳರು ತಲಾ 5 ಲಕ್ಷ, ಜೈನ 3 ಲಕ್ಷ
ಮೀಸಲಾತಿಗಾಗಿ ಪಟ್ಟಿಯಲ್ಲಿ ಹೊಸದಾಗಿ
ಸೇರಿಸಲಾದ ಜಾತಿಗಳ ವಿವರ
1. ಪದಾರ್ಥಿ ಉಪ್ಪಾರ ಜಾತಿಯಡಿ ಪಡಿತಿ ಎಂದು ದಾಖಲಾಗಿದ್ದ ಈ ಸಮುದಾಯವನ್ನು ಅಲ್ಲಿಂದ ತೆಗೆದು, ಪ್ರವರ್ಗ 1ರಿಂದ ಪ್ರವರ್ಗ 2ಕ್ಕೆ ಸೇರಿಸಲು ಶಿಫಾರಸು
2. ಕಾಡುಗೊಲ್ಲ, ಹಟ್ಟಿಗೊಲ್ಲ, ಅಡವಿಗೊಲ್ಲ, ಖಂಜಿರ್ ಭಾಟ್, ಕಂಜರ್, ಖಂಜಾರ್ ಭಾಟ್, ಚಪ್ಪರ್ ಬಂದ್, ಕುಡುಬಿ ಮತ್ತು ಗೌಳಿ ಜಾತಿಗಳನ್ನು ಅಲೆಮಾರಿ, ಅರೆ ಅಲೆಮಾರಿ ಜಾತಿಗಳ ಪಟ್ಟಿಗೆ ಸೇರಿಸಲು ಸಲಹೆ
3. ಪೊಮ್ಮಲ, ಮರುತ್ತುವರ್ ಜಾತಿಗಳನ್ನು ಪ್ರವರ್ಗ 1ಬಿಗೆ ಸೇರ್ಪಡೆ
4. ದೇವಗಾಣಿಗ, ಒಂಟೆತ್ತು ಗಾಣಿಗ, ವಾಣಿಯನ್, ಜ್ಯೋತಿಪಣ, ಶಿವಜ್ಯೋತಿಪಣ ಗಾಣಿಗ, ಪಾಟಾಳಿ, ಆರೇರ ಜಾತಿಗಳು ಪ್ರವರ್ಗ 2ಎಗೆ ಸೇರ್ಪಡೆ
5. ಗುಡಿಗಾರರನ್ನು ವಿಶ್ವಕರ್ಮ ಜಾತಿಯ ಉಪಜಾತಿಯಾಗಿ ಸೇರಿಸಲಾಗಿದೆ
6. ಮಡಿ ಒಕ್ಕಲಿಗರನ್ನು ಒಕ್ಕಲಿಗ ಉಪಜಾತಿಯಾಗಿ ಸೇರಿಸಲಾಗಿದೆ.
7. ಮಲ್ಲವ/ಮಲೆಗೌಡ ಜಾತಿಯನ್ನು ಲಿಂಗಾಯತ ಉಪಜಾತಿಯಾಗಿ ಸೇರಿಸಲಾಗಿದೆ.
8. ಹರೆಯ ಜಾತಿಯನ್ನು ಬಂಟ್ ಜಾತಿಯ ಉಪಜಾತಿಯಾಗಿ ಸೇರಿಸಲಾಗಿದೆ.
9. ಹಾವುಗೊಲ್ಲ ಜಾತಿಯನ್ನು ಹಾವಾಡಿಗ ಉಪಜಾತಿಯಾಗಿ ಸೇರಿಸಲಾಗಿದೆ.
10. ಅನಾಥ ಮಕ್ಕಳಿಗೆ ಪ್ರವರ್ಗ 1ರ ಅಡಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ. 1ರಷ್ಟು ಮೀಸಲಾತಿಗಾಗಿ ಸಲಹೆ.
ಶೇಕಡಾವಾರು ಮಿಸಲಾತಿ ಪ್ರಮಾಣದ ಹಂಚಿಕೆ
ಪ್ರವರ್ಗ 1ಎ ಜನಸಂಖ್ಯೆ 34,96,638 ಮೀಸಲಾತಿ ಶೇ. 8.40 ಶೇ.32 ರ ಲೆಕ್ಕದಲ್ಲಿ 3
ಪ್ರವರ್ಗ 1ಬಿ ಜನಸಂಖ್ಯೆ 73,92,313 ಮೀಸಲಾತಿ ಶೇ. 17.74 - ಶೇ.32ರ ಲೆಕ್ಕದಲ್ಲಿ 5.
ಪ್ರವರ್ಗ 2ಎ ಜನಸಂಖ್ಯೆ 77,78,209 ಮೀಸಲಾತಿ ಶೇ. 18.70-ಶೇ.32ರ ಲೆಕ್ಕದಲ್ಲಿ 6.
ಪ್ರವರ್ಗ 2ಬಿ ಜನಸಂಖ್ಯೆ 75,25,880 ಮೀಸಲಾತಿ ಶೇ. 18.08 - ಶೇ.32ರ ಲೆಕ್ಕದಲ್ಲಿ 6
ಪ್ರವರ್ಗ 3ಎ ಜನಸಂಖ್ಯೆ 72,99,577 ಮೀಸಲಾತಿ ಶೇ. 17.53 - ಶೇ. 32ರ ಲೆಕ್ಕದಲ್ಲಿ 6
ಪ್ರವರ್ಗ 3 ಬಿ ಜನಸಂಖ್ಯೆ 81,37,536 ಮೀಸಲಾತಿ ಶೇ. 19.55 -ಶೇ.32ರ ಲೆಕ್ಕದಲ್ಲಿ 6
ವರದಿಯ ಶಿಫಾರಸುಗಳು
1. ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿ ಗುರುತಿಸಲ್ಪಟ್ಟ ಪ್ರವರ್ಗ 1 ಎ, 1 ಬಿ, 2 ಎ, 2 ಬಿ, 3 ಎ, 3 ಬಿ ಗಳಿಗೆ ಕೆನೆಪದರ ನೀತಿ ಅಳವಡಿಸಬೇಕು
2. ರಾಜ್ಯದಲ್ಲಿ ಜಾರಿಯಿರುವ ಮಿಸಲಾತಿ ಪ್ರಮಾಣವನ್ನು ಶೇ. 32ರಿಂದ ಶೇ. 51ಕ್ಕೆ ಹೆಚ್ಚಿಸಬೇಕು.
ಶಿಫಾರಸು ಮಾಡಲಾದ ಶೇ. 51ರ ಮೀಸಲಾತಿಯನ್ನು ಆಯೋಗ ಪ್ರವರ್ಗವಾರು ಹಂಚಿಕೆ ಮಾಡಿರುವುದು ಹೀಗಿದೆ:
ಪ್ರವರ್ಗ 1 ಎ ಶೇ. 6, ಪ್ರವರ್ಗ 1 ಬಿ ಶೇ. 12, ಪ್ರವರ್ಗ 2 ಎ ಶೇ. 10, ಪ್ರವರ್ಗ 2 ಬಿ ಶೇ. 8, ಪ್ರವರ್ಗ 3 ಎ ಶೇ. 7, ಪ್ರವರ್ಗ 3 ಬಿ ಶೇ. 8.
ಗುರುವಾರ ನಡೆದ ಸಂಪುಟ ಸಭೆಯಲ್ಲಿ, ವರದಿ ಕುರಿತು ವಿವಿಧ ಸಮುದಾಯಗಳಿಗೆ ಇರಬಹುದಾದ ಆತಂಕ ನಿವಾರಿಸಿ, ಪಕ್ಷಕ್ಕೂ ಹಾನಿಯಾಗದ ಹಾಗೆ ಶಿಫಾರಸುಗಳನ್ನು ಅನುಷ್ಠಾನಗೊಳಿಸುವ ಒಮ್ಮತದ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಹೇಳಲಾಗುದೆ. ಎಪ್ರಿಲ್ 11ರಂದು ಸಚಿವ ಸಂಪುಟ ಸಭೆಯಲ್ಲಿ ವರದಿಯನ್ನು ಮಂಡಿಸಿದ ಬಳಿಕ ಎಪ್ರಿಲ್ 17ರ ಸಚಿವ ಸಂಪುಟ ಸಭೆ ಮಹತ್ವ ಪಡೆದಿತ್ತು. ಸಭೆಯಲ್ಲಿ ಪ್ರಸ್ತಾಪವಾದ ಅಂಶಗಳು:
1. ಕೆಲ ಜಾತಿ ಸಮುದಾಯಗಳಿಗೆ ವರದಿಯಲ್ಲಿ ತಮ್ಮ ಜಾತಿ, ಸಮುದಾಯದ ಜನಸಂಖ್ಯೆ ಕಡಿಮೆ ತೋರಿಸಲಾಗಿದೆ ಎಂಬ ಆತಂಕವಿದೆ.
2. ವೀರಶೈವ-ಲಿಂಗಾಯತರ ಜನಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ. ಹಿಂದೆಲ್ಲ ಶೇ. 14-16ರಷ್ಟಿದ್ದ ಜನಸಂಖ್ಯೆ ಈಗ ಶೇ. 12ಕ್ಕೆ ಇಳಿದಿರುವುದು ಹೇಗೆ ಎಂಬ ಅನುಮಾನ ವ್ಯಕ್ತವಾಗಿದೆ.
3. ಆದರೆ ಮೀಸಲಾತಿ ಸೌಲಭ್ಯ ಪಡೆಯುವುದಕ್ಕಾಗಿ ಕೆಲವರು ಹಿಂದೂ ಸಾದರ (2 ಎ) ಎಂದು ಸೇರಿಸಿದ್ದರಿಂದಾಗಿ ಸಾದರ ಲಿಂಗಾಯತರ ಸಂಖ್ಯೆ ಕಡಿಮೆಯಾಗಿರಬಹುದು ಎಂಬ ಸ್ಪಷ್ಟನೆಯೂ ಆ ಸಮುದಾಯದ ನಾಯಕರಿಂದಲೇ ಬಂದಿದೆ.
4. ಬೇಡುವ ಜಂಗಮರು ಎಂಬುದು ವೀರಶೈವ-ಲಿಂಗಾಯತರಲ್ಲಿದೆ. ಆದರೆ ಬೇಡ ಜಂಗಮ ಎಂಬುದು ಪರಿಶಿಷ್ಟ ಜಾತಿಯಲ್ಲಿ ಬರುತ್ತದೆ. ಬೇಡುವ ಜಂಗಮರು ಸಮೀಕ್ಷೆ ವೇಳೆ ಬೇಡ ಜಂಗಮ ಎಂದು ಹೇಳಿಕೊಂಡಿರುವುದರಿಂದ ಲಿಂಗಾಯತ ಸಮುದಾಯದ ಸಂಖ್ಯೆ ಇಳಿಕೆಯಾಗಿರಬಹುದು ಎಂದು ಹೇಳಲಾಗಿದೆ.
5. ವರದಿಗಳು ಹೇಳುವ ಪ್ರಕಾರ, ಒಕ್ಕಲಿಗ ಸಮುದಾಯದ ಸಚಿವರಲ್ಲಿ ಡಿ.ಕೆ. ಶಿವಕುಮಾರ್ ಹೊರತುಪಡಿಸಿ ಇನ್ನಾರೂ ಮಾತನಾಡಿಲ್ಲ.
6. ಪಕ್ಷಕ್ಕೆ ಹಾನಿಯಾಗದಂತೆ, ವಿರೋಧ ಪಕ್ಷಗಳ ಕೈಗೆ ಅಸ್ತ್ರವಾಗದಂತೆ ಯಾವುದೇ ತೀರ್ಮಾನ ತೆಗೆದುಕೊಂಡರೂ ತಮ್ಮ ಸಮ್ಮತಿ ಇದೆ ಎಂದು ಶಿವಕುಮಾರ್ ಹೇಳಿದ್ದಾರೆ ಎನ್ನಲಾಗಿದೆ.
7. ವಿಸ್ತೃತ ಚರ್ಚೆಗೆ ಹೆಚ್ಚಿನ ಮಾಹಿತಿ ಮತ್ತು ತಾಂತ್ರಿಕ ವಿವರಗಳು ಅಗತ್ಯವಿದೆ ಎಂದು ಭಾವಿಸಲಾಗಿದ್ದು, ಅದನ್ನು ಒದಗಿಸಲು ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.
8. ಸಮೀಕ್ಷೆ ನಡೆಸಿದ ಬಗ್ಗೆ ಡಿಜಿಟಲ್ ದಾಖಲೆಗಳು ಸರಕಾರದ ಬಳಿ ಇದ್ದು, ತಾಲೂಕು ಕೇಂದ್ರಗಳಲ್ಲಿ ಅವು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಬಹುದು. ತಮ್ಮ ವಿವರ ಸೇರಿಸಿಲ್ಲ ಎಂಬ ಆತಂಕವಿರುವ ಸಮುದಾಯಗಳು ಅನುಮಾನ ಬಗೆಹರಿಸಿಕೊಳ್ಳಲು ಅವಕಾಶ ನೀಡಬಹುದು ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ ಎನ್ನಲಾಗಿದೆ.
9. ಮೇ 2ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯವನ್ನು ಮತ್ತೊಮ್ಮೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಸಮಸ್ಯೆ ಇರುವುದು ಮೇಲ್ಜಾತಿಗಳ ನಾಯಕರ ಗ್ರಹಿಕೆಯಲ್ಲಿ ಮತ್ತು ಬಿಜೆಪಿ, ಜೆಡಿಎಸ್ ಮಂದಿ ಅನವಶ್ಯಕವಾಗಿ ಹರಡುತ್ತಿರುವ ಸುಳ್ಳುಗಳಲ್ಲಿ. ದಲಿತರ ಜನಸಂಖ್ಯೆ ಮತ್ತು ಮುಸ್ಲಿಮರ ಜನಸಂಖ್ಯೆ ಹೆಚ್ಚಿದೆ ಎಂಬುದು ಮೇಲ್ಜಾತಿಗಳ ನಾಯಕರು ಆತಂಕಗೊಳ್ಳಲು ಕಾರಣವಾಗಿರಬಹುದು. ಹಾಗಾಗಿಯೇ ತಮ್ಮ ಸಮುದಾಯದ ಜನಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ ಎಂಬ ತಕರಾರುಗಳನ್ನು ಅವರು ಎತ್ತತೊಡಗಿದ್ದಾರೆ. ಈ ವರದಿ ಜಾರಿಯಾದರೆ ತಮ್ಮ ರಾಜಕೀಯ ಪ್ರಾತಿನಿಧ್ಯ ಕುಗ್ಗುತ್ತದೆ ಎಂಬುದು ಲಿಂಗಾಯತರು ಮತ್ತು ಒಕ್ಕಲಿಗರ ಆತಂಕ. ಸಮೀಕ್ಷೆ ಅವೈಜ್ಞಾನಿಕವಾಗಿದೆ ಎಂದೆಲ್ಲ ವಾದಿಸುತ್ತಿರುವ ಅವರು, ಬಿಜೆಪಿ ಹಬ್ಬಿಸಿದ ಸುಳ್ಳುಗಳನ್ನು ನಂಬಿಕೊಂಡು ಮಾತಾಡುತ್ತಿದ್ದಾರೆಯೇ ಹೊರತು, ತಾವೇಕೆ ವಿರೋಧಿಸುತ್ತಿದ್ದೇವೆ ಎನ್ನುವುದರ ಬಗ್ಗೆ ಸ್ಪಷ್ಟತೆ ಹೊಂದಿಲ್ಲ.
ಇಲ್ಲಿ ಇನ್ನೊಂದು ಗಮನಿಸಬೇಕಾದ ವಿಚಾರವೆಂದರೆ, ಜಾತಿ ಗಣತಿಯನ್ನು ಸಿದ್ದರಾಮಯ್ಯನವರು ತಮ್ಮ ರಾಜಕೀಯಕ್ಕೋಸ್ಕರ ಮಾಡಿಸಿದ್ದಾರೆ ಎಂಬಂತೆ ವಿಪಕ್ಷಗಳು ಕಟ್ಟುಕಥೆ ಹಬ್ಬಿಸುತ್ತಿರುವುದು. ಜಾತಿ ಗಣತಿಯ ಮೂಲಕ ಸಿದ್ದರಾಮಯ್ಯನವರು ಸಮಾಜವನ್ನು ಒಡೆಯಲು ನೋಡುತ್ತಿದ್ಧಾರೆ ಎಂದು ಕುಮಾರಸ್ವಾಮಿ ಹೇಳುತ್ತಿರುವುದಂತೂ, ಜಾತಿ ಗಣತಿಯ ಹಿನ್ನೆಲೆ ಬಗೆಗಿನ ಅವರ ಪರಮ ಅಜ್ಞಾನವನ್ನೇ ಬಯಲು ಮಾಡುತ್ತಿದೆ. ಜಾತಿ ಗಣತಿಯನ್ನು ನಿರ್ದೇಶಿಸಿರುವುದು ಸಿದ್ದರಾಮಯ್ಯನವರಲ್ಲ, ಬದಲಾಗಿ ಸುಪ್ರೀಂ ಕೋರ್ಟ್ ಎಂಬ ಕನಿಷ್ಠ ತಿಳುವಳಿಕೆಯೂ ಇಲ್ಲದೆ ಅವರು ಇಂಥದೊಂದು ದೊಡ್ಡ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ಇಂದಿಗೂ ಬ್ರಿಟಿಷರ ಕಾಲದ ದತ್ತಾಂಶಗಳ ಆಧಾರದಲ್ಲೇ ಮೀಸಲಾತಿ ನಿರ್ಧರಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಸುಪ್ರೀಂ ಕೋರ್ಟ್, ಮೀಸಲಾತಿಯ ಅನುಷ್ಠಾನಕ್ಕೆ ಮೊದಲು ಅಧಿಕೃತ ದತ್ತಾಂಶಗಳನ್ನು ಇಡುವಂತೆ ಹೇಳಿರುವುದರಿಂದ ಜಾತಿ ಗಣತಿ ನಡೆಸಲೇಬೇಕಾದ ಅನಿವಾರ್ಯತೆ ದೇಶಕ್ಕೆ ಎದುರಾಗಿದೆ. ಅಧಿಕೃತ ದತ್ತಾಂಶಗಳಿಲ್ಲದೆ ಮೀಸಲಾತಿಯನ್ನು ನ್ಯಾಯಯುತಗೊಳಿಸಲು ಸಾಧ್ಯವಿಲ್ಲ ಎನ್ನುವ ಸುಪ್ರೀಂಕೋರ್ಟ್ನ ಸೂಚನೆಯ ಮೇರೆಗೆ, ದೇಶದಲ್ಲಿ ಮೊದಲ ಬಾರಿಗೆ ಜಾತಿ ಗಣತಿ ನಡೆಸುವ ಹೊಣೆಗಾರಿಕೆಯನ್ನು ಹೊತ್ತುಕೊಂಡಿದ್ದೇ ಕರ್ನಾಟಕ. ಅದರ ನಂತರ ಜಾತಿ ಗಣತಿ ನಡೆಸಿದ ಬಿಹಾರದಲ್ಲಿ ಅದರ ವರದಿ ಮಂಡನೆಯಾಗಿರುವಾಗ, ಕರ್ನಾಟಕದಲ್ಲಿ ಮಾತ್ರ ವರದಿ ಜಾರಿಗೆ ಕೆಲವು ಹಿತಾಸಕ್ತಿಗಳು ಅಡ್ಡಗಾಲು ಹಾಕುತ್ತಲೇ ಇವೆ.
ಜಾತಿ ಗಣತಿ ಸಮಾಜದ ಮುಖ್ಯವಾಹಿನಿಗೆ ಅಪರಿಚಿತವಾಗಿಯೇ ಇರುವ ನೂರಾರು ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿ ಏನೆಂಬುದನ್ನು ತೋರಿಸುತ್ತದೆ. ಸರಕಾರದ ಸವಲತ್ತುಗಳಿಂದ ಅವರು ವಂಚಿತರಾಗುತ್ತಲೇ ಬಂದಿರುವ ಕಟು ವಾಸ್ತವಕ್ಕೆ ಅದು ಕನ್ನಡಿಯಾಗುತ್ತದೆ. ಕಾಂತರಾಜು ಆಯೋಗದ ವರದಿಯನ್ನು ವಿರೋಧಿಸುತ್ತ, ಹೊಸ ಸಮೀಕ್ಷೆಗೆ ಒತ್ತಾಯಿಸುತ್ತಿರುವವರು, ವರದಿ ಜಾರಿಯಾಗದಂತೆ ತಡೆಯಲು ಅದನ್ನೊಂದು ನೆಪ ಮಾಡುತ್ತಿದ್ದಾರೆ ಎಂದೇ ಅನುಮಾನ ಮೂಡುತ್ತದೆ. ಅವೈಜ್ಞಾನಿಕವಾಗಿದೆ ಎಂದು ಯಾರೋ ಹೇಳಿದ್ದನ್ನೇ ತಾವೂ ಹೇಳುತ್ತಿರುವ ಎಷ್ಟು ನಾಯಕರಿಗೆ ಅದರ ಬಗ್ಗೆ ಸ್ಪಷ್ಟತೆಯಿದೆ?