‘ಧರ್ಮಾಧಾರಿತ ಮೀಸಲಾತಿ’ ಕಾಂಗ್ರೆಸ್‍ನ ಮತಬ್ಯಾಂಕ್ ರಾಜಕಾರಣ: ಸಿ.ಟಿ.ರವಿ

ಬೆಂಗಳೂರು : ‘ಸಂವಿಧಾನದ ಬಗ್ಗೆ ಬಹಳ ಜ್ಞಾನವುಳ್ಳ ಮುಖ್ಯಮಂತ್ರಿ ಸಿದ್ದರಾಮಯ್ಯ ಓಟ್ ಬ್ಯಾಂಕ್ ರಾಜಕಾರಣಕ್ಕೆ ಸಂವಿಧಾನದ ವಿರುದ್ಧವಾದ ಧರ್ಮಾಧಾರಿತ ಮೀಸಲಾತಿ ಕಲ್ಪಿಸಿದ್ದು, ಮತಬ್ಯಾಂಕ್ ರಾಜಕಾರಣಕ್ಕೆ ಅವರು ಏನು ಮಾಡಲೂ ಹೇಸುವವರಲ್ಲ’ ಎಂದು ಪರಿಷತ್ ಸದಸ್ಯ ಸಿ.ಟಿ.ರವಿ ಇಂದಿಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ನಗರದಲ್ಲಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮ್ಮ ಭಾಷಣವೊಂದರಲ್ಲಿ ಈ ದೇಶದ ಸಂಪತ್ತನ್ನು ಬಡವರಿಗೆ ಹಂಚುತ್ತೇನೆ ಎನ್ನಲಿಲ್ಲ, ಬದಲಾಗಿ ಈ ದೇಶದ ಸಂಪತ್ತನ್ನು ಮುಸ್ಲಿಮರಿಗೆ ಹಂಚುತ್ತೇನೆ ಎಂದಿದ್ದರು. ಇದೀಗ ಮತಾಧಾರಿತ ಮೀಸಲಾತಿ ಕಲ್ಪಿಸಿರುವುದನ್ನು ಸಂವಿಧಾನ ಒಪ್ಪುವುದಿಲ್ಲ ಎಂದು ಗೊತ್ತಿದ್ದೆ 2 ಬಿ ಮೀಸಲಾತಿ ಕಲ್ಪಿಸಲಾಗಿದೆ ಎಂದು ಟೀಕಿಸಿದರು.
ಅಂಬೇಡ್ಕರ್ ಮತ್ತು ದೇಶದ ಸಂವಿಧಾನವನ್ನು ವಿರೋಧಿಸುವುದು ಕಾಂಗ್ರೆಸ್ಸಿನ ಡಿಎನ್‍ಎ. ಅದು ಸಂವಿಧಾನ ವಿರೋಧಿ ಮಾನಸಿಕತೆ ಹೊಂದಿದೆ. 370ನೆ ವಿಧಿಯನ್ನು ಅಂಬೇಡ್ಕರ್ ವಿರೋಧಿಸಿದ್ದರು. ನೆಹರೂ ಇದೇ ವಿಧಿಯನ್ನು ಜಾರಿಗೊಳಿಸಿದರು. ಸಂವಿಧಾನದಲ್ಲಿ ಅಂಬೇಡ್ಕರರು ಸೇರಿಸಿದ್ದ ಸಮಾನ ನಾಗರಿಕ ಸಂಹಿತೆಯನ್ನು ಇವತ್ತಿನವರೆಗೂ ಅವರು ಅನುಷ್ಠಾನಕ್ಕೆ ತಂದಿಲ್ಲ, ಬಿಜೆಪಿ ಅದನ್ನು ಅನುಷ್ಠಾನಕ್ಕೆ ತರುವುದಾಗಿ ಮುಂದಾದರೆ ವಿರೋಧಿಸುತ್ತಾರೆ ಎಂದು ಅವರು ಆಕ್ಷೇಪಿಸಿದರು.
ಕಾಂಗ್ರೆಸ್ಸನ್ನು ಕಿತ್ತೊಗೆದು ನಾವು ಸಂವಿಧಾನ ಉಳಿಸಿಕೊಳ್ಳುತ್ತೇವೆ. ಮತೀಯ ಆಧಾರಿತ ಶೇ.4ರಷ್ಟು ಮೀಸಲಾತಿಯೇ ಸಂವಿಧಾನಕ್ಕೆ ವಿರುದ್ಧವಾದುದು. ಆ ನಿಲುವನ್ನು ಯಾವಾಗ ಇವರ ಸಚಿವ ಸಂಪುಟ ಅನುಮೋದಿಸಿತೋ, ಕಾಂಗ್ರೆಸ್ಸಿಗೆ ಬಹುಮತ ಇದೆ ಎಂದು ಯಾವಾಗ ಅದನ್ನು ಬೆಂಬಲಿಸಿದರೋ ಆಗಲೇ ಇವರ ನಿಲುವೇನೆಂದು ಗೊತ್ತಾಗಿದೆ ಎಂದರು.
ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ: ‘ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ’ ಎಂಬಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಕೊಟ್ಟ ಹೇಳಿಕೆ ಸ್ಪಷ್ಟವಾಗಿದೆ. ಹೀಗಾಗಿ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ ಅವರು, ಹನಿಟ್ರ್ಯಾಪ್ ವಿಷಯದಲ್ಲಿ ಸಚಿವ ರಾಜಣ್ಣ ಹೇಳಿಕೆ ಆಧರಿಸಿ ಸರಕಾರ ತನಿಖೆಗೆ ಆದೇಶ ನೀಡಬೇಕಿತ್ತು. ಮತ್ತೆ ದೂರು ಕೊಡುವ ಅವಶ್ಯಕತೆ ಏನಿದೆ ಎಂದು ಪ್ರಶ್ನಿಸಿದರು.