990 ಕ್ಲಸ್ಟರ್ ಗಳಲ್ಲಿ ಪ್ರಾಯೋಗಿಕ ನೈಸರ್ಗಿಕ ಕೃಷಿ: ಎನ್.ಚಲುವರಾಯಸ್ವಾಮಿ

Update: 2025-03-25 19:32 IST
990 ಕ್ಲಸ್ಟರ್ ಗಳಲ್ಲಿ ಪ್ರಾಯೋಗಿಕ ನೈಸರ್ಗಿಕ ಕೃಷಿ: ಎನ್.ಚಲುವರಾಯಸ್ವಾಮಿ
  • whatsapp icon

ಬೆಂಗಳೂರು : ರಾಷ್ಟ್ರೀಯ ನೈಸರ್ಗಿಕ ಕೃಷಿ ಯೋಜನೆಯಡಿ ಈ ವರ್ಷ ರಾಜ್ಯದ ಎಲ್ಲ ಜಿಲ್ಲೆಗಳ ಒಟ್ಟಾರೆ 990 ಕ್ಲಸ್ಟರ್‍ಗಳಲ್ಲಿ ಪ್ರಾಯೋಗಿಕ ನೈಸರ್ಗಿಕ ಕೃಷಿ ಪ್ರಾತ್ಯಕ್ಷಿಕೆ ನಡೆಸಲಾಗುವುದು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಮಂಗಳವಾರ ವಿಕಾಸಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಡಾ.ಸುಭಾಷ್ ಪಾಲ್ಕರ್ ನೈಸರ್ಗಿಕ ಕೃಷಿ ಮಾದರಿಯ ಸಾಧಕ ಬಾಧಕಗಳ ಕುರಿತು ಸಹಜ ಕೃಷಿ ಜಾಗೃತಿ, ಸಂಘಟನೆಯಲ್ಲಿ ತೊಡಗಿರುವ ರೈತ ಪ್ರಮುಖರು ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಅವರು ಮಾತನಾಡಿದರು.

ನೈಸರ್ಗಿಕ ಕೃಷಿ ದೃಢೀಕರಣದ ವ್ಯವಸ್ಥೆ ಕೂಡ ಜಾರಿ ಮಾಡಲಾಗುವುದು ರೈತರ ಉತ್ಪನ್ನಗಳ ಮೌಲ್ಯವರ್ಧನೆಗೆ ಅಗತ್ಯವಿರುವ ಎಲ್ಲಾ ಪೂರಕ ನೆರವುಗಳನ್ನು ಒದಗಿಸಲು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ರೈತರ ಅಭ್ಯುದಯ ಹಾಗೂ ಪ್ರಕೃತಿಗೆ ವರವಾಗುವ ನೈಸರ್ಗಿಕ ಕೃಷಿಯನ್ನು ಪ್ರೇರೇಪಿಸಲು ಕೃಷಿ ಇಲಾಖೆಯಿಂದ ಪೂರಕ ಯೋಜನೆಗಳನ್ನು ಅನು‌ಷ್ಠಾನ ಮಾಡಲಾಗುವುದು ಎಂದು ಚಲುವರಾಯಸ್ವಾಮಿ ತಿಳಿಸಿದರು.

ಕೃಷಿಕರ ಏಳಿಗೆಗೆ ಅನುಕೂಲವಾಗುವ ಎಲ್ಲ ಪ್ರಯತ್ನಗಳಿಗೆ ನಮ್ಮ ಸಹಕಾರ ಇರಲಿದೆ. ರೈತ ಸಬಲನಾಗಬೇಕು, ಆರ್ಥಿಕವಾಗಿ ಶಕ್ತಿವಂತನಾಗಬೇಕು. ಹಾಗೆಯೇ ಮಣ್ಣಿನ ಫಲವತ್ತತೆ ಉಳಿಯಬೇಕು. ಅದಕ್ಕಾಗಿ ಇಲಾಖೆಯಿಂದ ಅನೇಕ ಯೋಜನೆಗಳನ್ನು ಜಾರಿಗೊಳಿಸ ಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಸಾವಯವ ಕೃಷಿ ಪ್ರೋತ್ಸಾಹಕ್ಕೆ ಸರಕಾರ ಆದ್ಯತೆ ನೀಡುತ್ತಿದೆ, ಅದೇ ರೀತಿ ಮಳೆಯಾಶ್ರಿತ ಪ್ರದೇಶಗಳಲ್ಲಿ ಸಹಜ ಕೃಷಿ ಪದ್ಧತಿಯನ್ನು ಪ್ರೋತ್ಸಾಹಿಸುವುದರ ಮೂಲಕ ರಾಸಾಯನಿಕ ಮುಕ್ತ ವ್ಯವಸಾಯಕ್ಕೂ ಆದ್ಯತೆ ನೀಡಲಾಗುವುದು ಎಂದು ಚಲುವರಾಯಸ್ವಾಮಿ ಹೇಳಿದರು.

ಕೃಷಿ ಇಲಾಖೆ ವತಿಯಿಂದ ವಿಶ್ವವಿದ್ಯಾನಿಲಯಗಳ ಮೂಲಕ ಹೊಸ ಹೊಸ ಸಂಶೋಧನೆಗಳನ್ನು ಮಾಡಿ ರೈತರಿಗೆ ಪರಿಚಯಿಸುವ ಕಾರ್ಯವನ್ನು ನಿರಂತರವಾಗಿ ಮಾಡಲಾಗುತ್ತಿದೆ ಹಾಗೂ ಯಾಂತ್ರೀಕರಣದ ಮೂಲಕ ಶ್ರಮ ತಗ್ಗಿಸಿ ಆದಾಯ ಹೆಚ್ಚಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು ಚಲುವರಾಯಸ್ವಾಮಿ ಹೇಳಿದರು.

ಸಭೆಯಲ್ಲಿ ಮಾಜಿ ಶಾಸಕ ಡಿ.ಆರ್.ಪಾಟೀಲ್, ಸಹಜ ಕೃಷಿ ಪರಿಣಿತರಾದ ಪಿ.ಎನ್.ನಾಗರಾಜ್, ಜಿ.ಎಸ್.ನಾಡಗೌಡ, ರಾಜಶೇಖರ ನಿಂಬರಗಿ, ನಾಗೇಂದ್ರ, ಪ್ರಸನ್ನ ಮೂರ್ತಿ, ಸುಧಾಕರ್, ಕೃಷಿ ಇಲಾಖೆ ಕಾರ್ಯದರ್ಶಿ ಡಾ.ರವಿಶಂಕರ್, ಆಹಾರ ಸಂಸ್ಕರಣೆ ಮತ್ತು ಕಟಾವು ತಂತ್ರಜ್ಞಾನದ ವಿಶೇಷ ಕಾರ್ಯದರ್ಶಿ ರೋಹಿಣಿ ಸಿಂಧೂರಿ, ಕೃಷಿ ಆಯುಕ್ತ ವೈ.ಎಸ್.ಪಾಟೀಲ್, ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತ ಮಹೇಶ್ ಶಿರೂರು, ನಿರ್ದೇಶಕ ಡಾ.ಪುತ್ರ ಮತ್ತಿತರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News