ಕ್ಷಯ ರೋಗ ತಡೆಯಲು 16 ಜಿಲ್ಲೆಗಳಲ್ಲಿ ಬಿಸಿಜಿ ಲಸಿಕಾ ಕಾರ್ಯಕ್ರಮ : ದಿನೇಶ್ ಗುಂಡೂರಾವ್

ಬೆಂಗಳೂರು : ಈಗಾಗಲೇ ರಾಜ್ಯದಲ್ಲಿ 1,060 ಗ್ರಾಮ ಪಂಚಾಯತಿಗಳನ್ನು ಕ್ಷಯ ರೋಗ ಮುಕ್ತ ಪಂಚಾಯತಿಗಳನ್ನಾಗಿ ಘೋಷಿಸಲಾಗಿದ್ದು, ರಾಜ್ಯದ 16 ಜಿಲ್ಲೆಗಳಲ್ಲಿ ಬಿಸಿಜಿ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಮಂಗಳವಾರ ಇಲ್ಲಿನ ಇಂದಿರಾನಗರದ ಸರ್ ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ಕ್ಷಯ ರೋಗ ದಿನದ ಅಂಗವಾಗಿ ಆಯೋಜಿಸಿದ್ದ ‘ಬಿಸಿಜಿ ಲಸಿಕಾ ವಿತರಣೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ಷಯ ನಿರ್ಮೂಲನಾ ಕಾರ್ಯಕ್ರಮದ ಅಡಿಯಲ್ಲಿ ಕ್ಷಯ ರೋಗಿಗಳಿಗೆ ಪೌಷ್ಠಿಕ ಆಹಾರದ ಕಿಟ್‍ಗಳನ್ನು ವಿತರಿಸಲಾಗುತ್ತಿದೆ. ಹಾಗೆಯೇ ಕ್ಷಯ ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಬಿಸಿಜಿ ಲಸಿಕೆ ನೀಡಲಾಗುತ್ತಿದೆ. ಈ ಕಾರ್ಯಕ್ರಮಗಳ ಲಾಭವನ್ನು ಸಾರ್ವಜನಿಕರು ಪಡೆಯಬೇಕು ಎಂದು ಅವರು ಕರೆ ನೀಡಿದರು.
2024ರಲ್ಲಿ ರಾಜ್ಯದಲ್ಲಿ 20 ಲಕ್ಷಕ್ಕೂ ಹೆಚ್ಚು ಸಂಭಾವ್ಯ ಕ್ಷಯರೋಗಿಗಳ ಕಫ ಪರೀಕ್ಷೆಗಳನ್ನು ಮಾಡಲಾಗಿದೆ. ಖಾಸಗಿ ವಲಯದಿಂದ 28,122 ಮತ್ತು ಸಾರ್ವಜನಿಕ ವಲಯದಿಂದ 49,865 ಒಟ್ಟು 77,987 ಕ್ಷಯರೋಗಿಗಳನ್ನು ದೃಢಪಡಿಸಿ ಪತ್ತೆ ಹಚ್ಚಲಾಗಿದೆ. ಈ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಇಳಿಮುಖವಾಗಿದೆ. ಇವರಲ್ಲಿ ಶೇ.4.5ರಷ್ಟು ಔಷಧ ನಿರೋಧಕ ಕ್ಷಯರೋಗಿಗಳಾಗಿರುತ್ತಾರೆ ಎಂದು ಸಚಿವರು ಮಾಹಿತಿ ನೀಡಿದರು.
ದೃಢಪಟ್ಟ ಎಲ್ಲ ಕ್ಷಯರೋಗಿಗಳಿಗೆ ಕನಿಷ್ಠ 6 ತಿಂಗಳ ಅವಧಿಯ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಕ್ಷಯ ರೋಗದಿಂದ ಉಂಟಾಗುವ ಮರಣ ದರವನ್ನು ಶೇ.8 ರಿಂದ ಶೇ.6ಕ್ಕೆ ಇಳಿಸಲಾಗಿದೆ. ಇದುವರೆಗೂ 4,787 ನಿಕ್ಷಯ್ ಮಿತ್ರರಿಂದ 98,721 ಪೌಷ್ಠಿಕ ಆಹಾರದ ಕಿಟ್‍ಗಳನ್ನು ಕ್ಷಯರೋಗಿಗಳಿಗೆ ವಿತರಿಸಲಾಗಿದೆ ಎಂದು ಅವರು ತಿಳಿಸಿದರು.
ಆಡಳಿತಾತ್ಮಕ ಕಾರ್ಯಸಾಧ್ಯತೆಗಾಗಿ, ರಾಜ್ಯವನ್ನು 32 ಜಿಲ್ಲಾ ಟಿಬಿ ಕೇಂದ್ರಗಳಾಗಿ(ಡಿಟಿಸಿ) ವಿಂಗಡಿಸಲಾಗಿದೆ. 32 ಡಿಟಿಸಿಗಳನ್ನು 275 ಟಿಬಿ ಘಟಕಗಳಾಗಿ ವಿಂಗಡಿಸಲಾಗಿದೆ. ಪ್ರತಿ 2.5 ಲಕ್ಷ ಜನಸಂಖ್ಯೆಗೆ ಒಂದು ಕ್ಷಯ ಘಟಕ ಸ್ಥಾಪಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 1,450 ಮೈಕ್ರೋಸ್ಕೋಪಿಕ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಬಿಸಿಜಿ ಲಸಿಕೆ ಸುರಕ್ಷಿತ ಲಸಿಕೆಯಾಗಿದ್ದು, ಸಾರ್ವಜನಿಕರು ಅಪನಂಬಿಕೆ ಪಡುವ ಅಗತ್ಯವಿಲ್ಲ ಎಂಬ ಸಂದೇಶ ರವಾನಿಸುವ ನಿಟ್ಟಿನಲ್ಲಿ ಸ್ವತಃ ಆರೋಗ್ಯ ಇಲಾಖೆ ನಿರ್ದೇಶಕಿ ತ್ರಿವೇಣಿ ಸೇರಿದಂತೆ ಕ್ಷಯ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಕಾರ್ಯಕ್ರಮದಲ್ಲಿ ಬಿಸಿಜಿ ಲಸಿಕೆ ಪಡೆದರು.
ಯಾರು ಬಿಸಿಜಿ ಲಸಿಕೆ ಪಡೆಯಬಹುದು
* 5 ವರ್ಷಗಳಲ್ಲಿ ಕ್ಷಯರೋಗಕ್ಕೆ ಒಳಗಾಗಿ ಚಿಕಿತ್ಸೆ ಪಡೆದವರು.
* ಸಕ್ರಿಯ ಕ್ಷಯರೋಗಿಗಳ ನಿಕಟ ಸಂಪರ್ಕಿತರು.
* ದೇಹ ಗಾತ್ರದ ಸೂಚ್ಯಾಂಕ 18ಕ್ಕಿಂತ ಕಡಿಮೆ ಇರುವವರು.
* ಸ್ವಯಂ ವರದಿ ಮಾಡುವ ಮಧುಮೇಹಿಗಳು.
* ಸ್ವಯಂ ವರದಿ ಮಾಡುವ ಧೂಮಪಾನಿಗಳು.
* 60 ವರ್ಷಕ್ಕಿಂತ ಮೇಲ್ಪಟ್ಟವರು ಒಂದು ಬಾರಿ ಮಾತ್ರ ಬಿಸಿಜಿ ಲಸಿಕೆ ಪಡೆಯಬಹುದಾಗಿದೆ.