ಎರಡು ವರ್ಷಗಳ ನಂತರವೂ ತೆರಿಗೆ ಪಾವತಿಸದಿದ್ದರೆ, ಶೇ. 100 ದಂಡ: ಬಿಬಿಎಂಪಿ

ಬೆಂಗಳೂರು : ಎರಡು ವರ್ಷಗಳ ನಂತರವೂ ಆಸ್ತಿ ತೆರಿಗೆ ಪಾವತಿ ಮಾಡದಿದ್ದರೆ ಮಾತ್ರ ಶೇ.100ರಷ್ಟು ದಂಡ ವಿಧಿಸಲಾಗುತ್ತದೆ ಎಂದು ಬಿಬಿಎಂಪಿ ತಿಳಿಸಿದೆ.
ಶುಕ್ರವಾರ ಬಿಬಿಎಂಪಿ ಪ್ರಕಟನೆ ಹೊರಡಿಸಿದ್ದು, ನಿಗಧಿತ ದಿನದಂದು ತೆರಿಗೆ ಪಾವತಿ ಮಾಡದೆ, ಕೇವಲ ಒಂದು ದಿನ ಹೆಚ್ಚಾದರೂ ಬಿಬಿಎಂಪಿಯು ಶೇ.100 ರಷ್ಟು ದಂಡ ವಿಧಿಸುತ್ತದೆ ಎಂಬುದು ವಾಸ್ತವಿಕವಾಗಿ ತಪ್ಪು. ಎರಡು ವರ್ಷದ ಕಾಲಾವಧಿಯ ನಂತರವೂ ಆಸ್ತಿ ತೆರಿಗೆಯನ್ನು ಪಾವತಿಸದಿದ್ದರೆ ಮಾತ್ರ ಶೇ.100ರಷ್ಟು ದಂಡ ವಿಧಿಸಲಾಗುತ್ತದೆ. ಅಂತಹ ವ್ಯಕ್ತಿಯನ್ನು ಉದ್ದೇಶಪೂರ್ವಕವಾಗಿ ತೆರಿಗೆ ಪಾವತಿಸದ ನಾಗರಿಕ ಎಂದು ಪರಿಗಣಿಸಲಾಗುತ್ತದೆ ಎಂದಿದೆ.
ವಾಸ್ತವವಾಗಿ ಪಾಲಿಕೆ ವರ್ಷವಿಡಿ ನೋಟಿಸ್ ಕಳುಹಿಸುತ್ತೇವೆ. ಜೊತೆಗೆ ದೂರವಾಣಿ ಕರೆಗಳನ್ನು ಮಾಡುತ್ತೇವೆ. ಸಂದೇಶಗಳನ್ನು ಕಳುಹಿಸುತ್ತೇವೆ. ಕೆಲವು ದೀರ್ಘಕಾಲಿನ ತೆರಿಗೆ ಸುಸ್ತಿದಾರರು ಬಿಬಿಎಂಪಿಯ ಪ್ರತಿ ಸೂಚನೆಯನ್ನೂ ನಿರ್ಲಕ್ಷಿಸಿ ಆಸ್ತಿ ತೆರಿಗೆ ಪಾವತಿಸುವುದಿಲ್ಲ ಎಂದು ಹೇಳಿದೆ.
ಸುಮಾರು 2.5 ಲಕ್ಷ ನಾಗರಿಕರು ಇದುವರೆಗೂ ಆಸ್ತಿ ತೆರಿಗೆ ಪಾವತಿಸಿಲ್ಲ. ಕಾನೂನಿನ ಪ್ರಕಾರ ದೀರ್ಘಕಾಲಿನ ತೆರಿಗೆ ಸುಸ್ತಿದಾರರಿಂದ ಆಸ್ತಿ ತೆರಿಗೆಯನ್ನು ವಸೂಲಿ ಮಾಡುವುದು ಬಿಬಿಎಂಪಿಯ ನೈತಿಕ ಮತ್ತು ನಿಗದಿತ ಕರ್ತವ್ಯವಾಗಿದೆ ಎಂದು ಪ್ರಟಕನೆಯಲ್ಲಿ ಹೇಳಿದೆ.