ಭೂಮಿಯನ್ನು ಕೃಷಿಯೇತರ ಚಟುವಟಿಕೆಗೆ ಬಳಸಲಾಗುತ್ತಿದೆ : ಪ್ರೊ.ಎಸ್.ಜಿ.ಸಿದ್ದರಾಮಯ್ಯ

ಬೆಂಗಳೂರು : ಚನ್ನರಾಯಪಟ್ಟಣವೂ ಒಳಗೊಂಡಂತೆ ದೇವನಹಳ್ಳಿ ಸುತ್ತಲಿನ 13 ಹಳ್ಳಿಗಳಲ್ಲಿ ಒಕ್ಕಲೆಬ್ಬಿಸುವ ಸ್ಥಿತಿಯಲ್ಲಿವೆ. ಫಲವತ್ತಾದ ಭೂಮಿಯನ್ನು ಸರಕಾರಗಳು ಕೃಷಿಯೇತರ ಚಟುವಟಿಕೆಗೆ ಬಳಸಲಾಗುತ್ತಿದ್ದು, ನೀವೂ, ನಾವೂ ಏನನ್ನು ತಿನ್ನಬೇಕು ಎಂದು ಹಿರಿಯ ಸಾಹಿತಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಶುಕ್ರವಾರ ನಗರದ ಗಾಂಧಿ ಭವನದಲ್ಲಿ ದಲಿತ ಸಾಹಿತ್ಯ ಪರಿಷತ್, ದಸಂಸ, ಕೆ.ಎನ್.ಎಸ್ ಪಬ್ಲಿಕೇಶನ್ಸ್ ಸಹಯೋಗದೊಂದಿಗೆ ಆಯೋಜಿಸಿದ್ದ ಡಾ.ಹೆಬ್ಬಾಲೆ ಕೆ.ನಾಗೇಶ್ ಅವರ 5 ಕೃತಿಗಳ ಲೋಕಾಪರ್ಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗ ತುರ್ತಾಗಿ ನಡೆಯಬೇಕಿರುವುದು ಭೂಮಿ ಚಳವಳಿ. 70-80ರ ದಶಕದಲ್ಲಿ ರಾಜ್ಯಾದ್ಯಂತ ನೂರಾರು ಚಳವಳಿಗಳು ಹುಟ್ಟಿದವು. ಸರಕಾರಗಳನ್ನು ಸರಿದಾರಿಗೆ ತರುವ ಪ್ರಯತ್ನ ಮಾಡಿದ್ದವು. ಮಾದ್ಯಮಗಳು ಕೂಡ ಚಳವಳಿಗೆ ಸಹಕರಿಸುತ್ತಿದ್ದವು. ಸರಕಾರಗಳಿಗೂ ಕೂಡ ನೈತಿಕ ಭಯ ಕಾಡುತ್ತಿತ್ತು ಎಂದು ಅಭಿಪ್ರಾಯಪಟ್ಟರು.
ರಾಜಕೀಯ ಸ್ವಾತಂತ್ರ್ಯಕ್ಕಾಗಿ ಗಾಂಧೀಜಿ ಹೋರಾಟ ಮಾಡಿದರೆ, ಸಾಂಸ್ಕೃತಿಕ ಸ್ವಾತಂತ್ರ್ಯಕ್ಕಾಗಿ ಅಂಬೇಡ್ಕರ್ ಅವರು ಹೋರಾಟ ಮಾಡಿದ್ದಾರೆ. ಇಡೀ ದೇಶದ ತಳ ಸಮುದಾಯಗಳು ಸಾಂಸ್ಕೃತಿಕ ದಾಸ್ಯದಿಂದ ನರಳತಾ ಇದ್ದವು. ಯಾಕೆಂದರೆ ಚಿರಿತ್ರೆ ಪುರಾಣಗಳಿಂದ ಊಳಿಗಮಾನ್ಯ ಪದ್ಧತಿ ಜೀತದಾಳಿನಂತೆ ನಂಬಿಸಲಾಗಿದೆ ಎಂದರು.
ಶಿಕ್ಷಣ ವಂಚಿತ ಸಮುದಾಯಗಳೆಲ್ಲವೂ ಕರ್ಮ ಸಿದ್ಧಾಂತದ ದವಡೆಗೆ ಸಿಕ್ಕು ನಲುಗಿ ಹೋಗಿದ್ದವು. ಇಂದಿಗೂ ಚಾತುರ್ವರ್ಣ ವ್ಯವಸ್ಥೆಯ ಶ್ರೇಣಿಕೃತ ಸಮಾಜದ ಮನಸ್ಥಿತ ದೂರವಾಗಿಲ್ಲ. ಅಂಬೇಡ್ಕರ್ ಅವರು ಧ್ವನಿ ಎತ್ತಿದ್ದು, ಸಾಂಸ್ಕೃತಿಕ ಬಿಡುಗಡೆಗಾಗಿ ಮೂಲಭೂತವಾಗಿ ಸಿಗಬೇಕಿರುವ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು ಎಂದು ತಿಳಿಸಿದರು.
ಇದೇ ವೇಳೆ ಡಾ. ಹೆಬ್ಬಾಲೆ ಕೆ.ನಾಗೇಶ್ ಅವರ ಬದುಕು ಬರಹ, ಅಗ್ರಾರ-ನಾಟಕ, ಅಗ್ರಾರ-ಕಾದಂಬರಿ, ಅಂಬಲಿ, ದಲಿತರು ಮತ್ತು ಅನುಭಾವ ಕಥನ, ಅವರೊಳಗಿನ ಲೋಕ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ದಸಂಸ ಪ್ರದಾನ ಸಂಚಾಲಕ ಮಾವಳ್ಳಿ ಶಂಕರ್, ಹಿರಿಯ ಪತ್ರಕರ್ತ ಡಾ.ಸಿದ್ದನಗೌಡ ಪಾಟೀಲ್, ಕವಿ ಸುಬ್ಬು ಹೊಲೆಯಾರ್, ಸಾಹಿತಿ ಎಚ್.ಲಕ್ಷ್ಮೀ ನಾರಾಯಣ ಸ್ವಾಮಿ, ದಲಿತ ಸಾಹಿತ್ಯ ಪರಿಷತ್‍ನ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಗೌಡಗೆರೆ ಮಾಯುಶ್ರೀ ಮತ್ತಿತರರು ಹಾಜರಿದ್ದರು.