ಸದನದಲ್ಲಿ ಅಸಂಸದೀಯ ಶಬ್ದ ಬಳಕೆ ಆರೋಪ: ಕಾಂಗ್ರೆಸ್‍ನ ಪುಟ್ಟಣ್ಣ ವಿರುದ್ಧ ವಿಪಕ್ಷ ಆಕ್ರೋಶ

ಬೆಂಗಳೂರು: ಸದನದಲ್ಲಿ ಅಸಂಸದೀಯ ಶಬ್ದ ಬಳಸಿದ್ದಾರೆಂದು ಆರೋಪಿಸಿ ಕಾಂಗ್ರೆಸ್ ಸದಸ್ಯ ಪುಟ್ಟಣ್ಣ ಅವರನ್ನು ಸದನದಿಂದ ಹೊರಹಾಕುವಂತೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಸದಸ್ಯರು ವಿಧಾನಪರಿಷತ್ತಿನ ಕಲಾಪದಲ್ಲಿ ಶುಕ್ರವಾರ ಸದನದಲ್ಲಿ ಧರಣಿ ನಡೆಸಿ ಆಕ್ರೋಶವನ್ನು ವ್ಯಕ್ತಪಡಿಸಿದ ಘಟನೆ ಜರುಗಿತು.
ಬಜೆಟ್ ಮೇಲಿನ ಚರ್ಚೆ ವೇಳೆಯಲ್ಲಿ ಗದ್ದಲ ಉಂಟಾದಾಗ ಕಾಂಗ್ರೆಸ್ ಸದಸ್ಯ ಪುಟ್ಟಣ ಅವರು ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ವಿರುದ್ಧ ಅಸಂಸದೀಯ ಶಬ್ದ ಬಳಸಿದ್ದಾರೆ ಎಂದು ಆರೋಪಿಸಿ ವಿಪಕ್ಷಗಳ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದಾಗ ಸಭಾಪತಿ ಬಸವರಾಜ ಹೊರಟ್ಟಿ ಅವರು ಕಲಾಪವನ್ನು ಕೆಲ ಕಾಲ ಮುಂದೂಡಿದರು.
ಮತ್ತೆ ಸದನ ಆರಂಭಗೊಂಡಾಗ ಪ್ರತಿಪಕ್ಷಗಳ ಸದಸ್ಯರು ಪಟ್ಟುಬಿಡದೆ ಧರಣಿ ಮುಂದುವರೆಸಿ ಪುಟ್ಟಣ್ಣ ಅವರನ್ನು ಸದನದಿಂದ ಹೊರ ಹಾಕುವಂತೆ ಆಗ್ರಹಿಸಿದರು.
ಇದೇ ವೇಳೆಯಲ್ಲಿ ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಂ ಅಹ್ಮದ್ ಮಾತನಾಡಿ, ಪುಟ್ಟಣ್ಣ ಅವರು ಬಳಸಿದ್ದಾರೆ ಎನ್ನಲಾದ ಶಬ್ದವನ್ನು ಸಭಾಪತಿ ಕಡತದಿಂದ ತೆಗೆಸಿದ್ದಾರೆ. ಪುಟ್ಟಣ್ಣ ಅವರು ಆ ಶಬ್ದ ಬಳಸಿಲ್ಲ ಎಂದು ಹೇಳಿದ್ದಾರೆ. ಬಜೆಟ್ ಮೇಲಿನ ಚರ್ಚೆ ಮುಂದುವರೆಯಬೇಕು. ಧರಣಿ ಕೈಬಿಟ್ಟು ಕಲಾಪಕ್ಕೆ ಸಹಕರಿಸಿ ಎಂದು ಕೋರಿದರು.
ಆಗ ಜೆಡಿಎಸ್ ಸದಸ್ಯ ಎಸ್.ಎಲ್.ಬೋಜೇಗೌಡ ಮಾತನಾಡಿ, ಸಭಾಪತಿಗಳು ಈಗಾಗಲೇ ಸದಸ್ಯರು ಬಳಸಿದ ಶಬ್ದವನ್ನು ಕಡತದಿಂದ ತೆಗೆಸಿರುವುದಾಗಿ ರೂಲಿಂಗ್ ನೀಡಿದ್ದಾರೆ. ಈ ಹಿಂದೆಯೂ ಅದೇ ಸದಸ್ಯರು ಅಸಂಸದೀಯ ಶಬ್ದ ಬಳಸಿದ್ದರು. ಅದನ್ನೂ ಕಡತದಿಂದ ತೆಗೆಸಲಾಗಿದೆ. ಈ ರೀತಿ ಪದೇ ಪದೇ ಮಾತನಾಡಿದರೆ ಹೇಗೆ? ಅವರು ಆ ಶಬ್ದ ಬಳಸಿಲ್ಲ ಎಂದ ಮೇಲೆ ಹೇಗೆ ಕಡತದಲ್ಲಿ ಸೇರಲು ಸಾಧ್ಯ? ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಮನವಿ ಮಾಡಿದರು.
ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಸದನ ನಡೆಯಬಾರದು ಎಂಬ ಉದ್ದೇಶ ನಮ್ಮದಲ್ಲ. ಕಡತದಿಂತ ಅಸಂವಿಧಾನಿಕ ಶಬ್ದ ತೆಗೆಸಿದ ಮೇಲೂ ಪುಟ್ಟಣ್ಣ ಅವರು ಸಚಿವಾಲಯದ ಸಿಬ್ಬಂದಿಗೆ ಧಮ್ಮಿ ಹಾಕಿದ್ದಾರೆ. ಆ ರೀತಿ ಶಬ್ದ ಬಳಸಿಲ್ಲ ಎಂದು ಸಮರ್ಥಿಸಿಕೊಳ್ಳುತ್ತಾರೆ. ಗೂಂಡಾ ವರ್ತನೆ ಸಹಿಸುವುದಿಲ್ಲ. ಅವರನ್ನು ಸದನದಿಂದ ಹೊರ ಹಾಕಬೇಕು ಎಂದು ಪುನರುಚ್ಚರಿಸಿದರು.
ಈ ವೇಳೆ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಈಗಾಗಲೇ ಪುಟ್ಟಣ್ಣ ಅವರು ಮಾತನಾಡಿರುವ ಮಾತನ್ನು ಕಡತದಿಂದ ತೆಗೆಸಲಾಗಿದೆ. ಮತ್ತೊಮ್ಮೆ ದೃಶ್ಯಾವಳಿ ನೋಡಿ ನಿರ್ಧಾರ ಕೈಗೊಳ್ಳಲಾಗುವುದು. ಇನ್ನು ಮುಂದೆ ಯಾರೇ ಅಸಂಸದೀಯ ಪದ ಬಳಸಿದರೆ ನಿಯಮಾವಳಿ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅದೇ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯ ಪುಟ್ಟಣ್ಣ ಮಾತನಾಡಿ, ಯಾವುದೇ ಅಸಂವಿಧಾನಿಕ ಪದಬಳಕೆ ಮಾಡಿಲ್ಲ. ವಿಡಿಯೋ ರೆಕಾರ್ಡ್ ಪರಿಶೀಲಿಸಿ ನೀಡುವ ರೂಲಿಂಗ್‍ಗೆ ನಾನು ಬದ್ಧನಾಗಿರುತ್ತೇನೆ ಎಂದು ಹೇಳಿದರು.
ಕೃಷಿ ಸಚಿವ ಚಲುವರಾಯಸ್ವಾಮಿ ಮಾತನಾಡಿ, ಸಭಾಪತಿಗಳು ರೂಲಿಂಗ್ ನೀಡಿದ ಮೇಲೂ ಧರಣಿ ನಡೆಸುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಪಕ್ಷ ಸದಸ್ಯರು ಧರಣಿ ಕೈಬಿಡದೇ ಘೋಷಣೆ ಮುಂದುವರೆಸಿದಾಗ, ಆಡಳಿತ ಪಕ್ಷದಿಂದ ಅಷ್ಟೇ ತೀವ್ರವಾದ ಆಕ್ಷೇಪಗಳು ಕೇಳಿಬಂದವು. ಸದನದಲ್ಲಿ ಗದ್ದಲ ಉಂಟಾದ್ದರಿಂದ ಸಭಾಪತಿ ಹೊರಟ್ಟಿ ಸದನದ ಕಲಾಪವನ್ನು ಮತ್ತೆ ಮುಂದೂಡಿದರು.