‘ಸ್ಪೀಕರ್ ಪೀಠಕ್ಕೆ ಅಗೌರವ: ಆರ್.ಅಶೋಕ್ ಪ್ರಚೋದನೆ’

Update: 2025-03-22 23:25 IST
‘ಸ್ಪೀಕರ್ ಪೀಠಕ್ಕೆ ಅಗೌರವ: ಆರ್.ಅಶೋಕ್ ಪ್ರಚೋದನೆ’

ರಮೇಶ್ ಬಾಬು

  • whatsapp icon

ಬೆಂಗಳೂರು : ‘ಪ್ರತಿಪಕ್ಷ ನಾಯಕ ಆರ್.ಅಶೋಕ್ ಸ್ಪೀಕರ್ ಪೀಠಕ್ಕೆ ನುಗ್ಗುವಂತೆ ಪ್ರಚೋದಿಸುವ ಅವರ ಹೇಳಿಕೆ ಮಾಧ್ಯಮಗಳಲ್ಲಿ ದಾಖಲಾಗಿರುತ್ತದೆ. ಸ್ಪೀಕರ್ ಪೀಠದ ಘನತೆ ಎತ್ತಿ ಹಿಡಿಯಬೇಕಾಗಿದ್ದ ಅಶೋಕ್ ಅವರೇ ನಿಯಮಗಳನ್ನು ಮೀರಿದ್ದು, ಅವರನ್ನು ಕೂಡಲೇ ಅಮಾನತ್ತು ಮಾಡಬೇಕು’ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ಹಾಗೂ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು, ಸ್ಪೀಕರ್ ಖಾದರ್ ಅವರಿಗೆ ಮನವಿ ಮಾಡಿದ್ದಾರೆ.

ಶನಿವಾರ ಈ ಸಂಬಂಧ ಸ್ಪೀಕರ್ ಗೆ ಪತ್ರ ಬರೆದಿರುವ ರಮೇಶ್ ಬಾಬು, ‘ಸದನದಲ್ಲಿ ಅಶಿಸ್ತು ಪ್ರದರ್ಶಿಸಿದ ಬಿಜೆಪಿಯ 18 ಮಂದಿ ಸದಸ್ಯರನ್ನು ಸದನದಿಂದ 6 ತಿಂಗಳ ಕಾಲ ಅಮಾನತ್ತುಗೊಳಿಸಿರುವುದು ಸರಿಯಾದ ಕ್ರಮ. ಆದರೆ ಸದರಿ ಪ್ರಸ್ತಾವನೆಯನ್ನು ಅಂಗೀಕರಿಸುವ ಸಂದರ್ಭದಲ್ಲಿ ಸದನದಲ್ಲಿ ನಡೆದ ಬಿಜೆಪಿಯ ನಿಯೋಜಿತ ಗಲಭೆ ಮತ್ತು ಸದನಕ್ಕೆ ಅಗೌರವ ತೋರಲು ಪ್ರಚೋದನೆ ಮಾಡಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮೇಲೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಲೋಪವಾಗಿರುತ್ತದೆ’ ಎಂದು ಉಲ್ಲೇಖಿಸಿದ್ದಾರೆ.

‘ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಮತ್ತು ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಾವಳಿಗಳಿಗೆ ಅನುಗುಣವಾಗಿ ಯಾವುದೇ ಸದಸ್ಯರು ಸದನಕ್ಕೆ ಮತ್ತು ಸ್ಪೀಕರ್ ಗೆ  ಅಗೌರವ ನೀಡುವ ರೀತಿಯಲ್ಲಿ ಅಥವಾ ಅಶಿಸ್ತಿನಿಂದ ನಡೆದುಕೊಳ್ಳಲು, ಕಾರ್ಯ ಕಲಾಪಗಳಿಗೆ ದುರುದ್ದೇಶದಿಂದ ಅಡ್ಡಿಪಡಿಸಲು ಅವಕಾಶ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಮಾ.21ರಂದು ಸ್ಪೀಕರ್ ಪೀಠವನ್ನು ಸುತ್ತುವರೆದು  ಸ್ಪೀಕರ್ ವಿರುದ್ಧ ಅಶಿಸ್ತಿನಿಂದ ನಡೆದುಕೊಂಡ ಮತ್ತು ಸದನದ ಘನತೆ ಗೌರವಕ್ಕೆ ಚ್ಯುತಿಯನ್ನು ತಂದಿರುವ ಬಿಜೆಪಿ ಸದಸ್ಯರಿಗೆ ವಿಪಕ್ಷ ನಾಯಕ ಅಶೋಕ್ ಅವರೇ ಪ್ರಚೋದನೆ ನೀಡಿರುತ್ತಾರೆ. ಇಡೀ ಘಟನಾವಳಿಗೆ ಅವರೇ ಕಾರಣಕರ್ತರಾಗಿದ್ದಾರೆ. ಹೀಗಾಗಿ ಅಶೋಕ್ ಸೇರಿದಂತೆ ಅಶಿಸ್ತಿನಲ್ಲಿ ಭಾಗಿಯಾಗಿರುವ ಎಲ್ಲರ ಮೇಲೂ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ರಮೇಶ್ ಬಾಬು ಕೋರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News