ಆನೇಕಲ್ | ಉರುಳಿಬಿದ್ದ ಮದ್ದೂರಮ್ಮ ಜಾತ್ರೆಯ ತೇರು : ಇಬ್ಬರು ಮೃತ್ಯು, ಮತ್ತಿಬ್ಬರಿಗೆ ಗಂಭೀರ ಗಾಯ
Update: 2025-03-22 23:36 IST

ಆನೇಕಲ್ : ತಾಲೂಕಿನ ಪ್ರತಿಷ್ಠಿತ ಹುಸ್ಕೂರು ಮದ್ದೂರಮ್ಮ ಜಾತ್ರೆಯ ವಿಶೇಷ ಆಕರ್ಷಣೆಯ ಎರಡು ಕುರುಜು(ತೇರು)ಗಳು ಉರುಳಿ ಬಿದ್ದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಮತ್ತಿಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ವರದಿಯಾಗಿದೆ.
ಮೃತರನ್ನು ತಮಿಳುನಾಡಿನ ಹೊಸೂರು ಮೂಲದ ರೋಹಿತ್(26) ಹಾಗೂ ಬೆಂಗಳೂರಿನ ಕೆಂಗೇರಿ ಮೂಲದ ಜ್ಯೋತಿ(14)ಎಂದು ಗುರುತಿಸಲಾಗಿದೆ. ಲಕ್ಕಸಂದ್ರದ ರಾಕೇಶ್ ಹಾಗೂ ಓರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ದೊಡ್ಡನಾಗಮಂಗಲದ ಕುರುಜು ಚಿಕ್ಕನಾಗಮಂಗಲದ ಬಳಿ ಮರಗಳ ಮೇಲೆ ಉರುಳಿದರೆ, ದೇವಾಲಯದ ಬಳಿಯ ರಾಯಸಂದ್ರ ಕುರುಜು ಜನರ ಮೇಲೆ ಉರುಳಿದೆ ಎನ್ನಲಾಗಿದೆ. ಕುರುಜಿನ ಕೆಳಗೆ ಭಕ್ತರು ಸಿಲುಕಿ ಆಟೊ ಚಾಲಕ ರೋಹಿತ್ ಮತ್ತು ಬಾಲಕಿ ಜ್ಯೋತಿ ಸಾವನ್ನಪ್ಪಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.