ಬೆಂಗಳೂರು | ಭಾರೀ ಮಳೆಗೆ ವಿಮಾನ ಮಾರ್ಗ ಬದಲು

ಸಾಂದರ್ಭಿಕ ಚಿತ್ರ
ಬೆಂಗಳೂರು : ಭಾರಿ ಮಳೆಯಿಂದಾಗಿ ಬೆಂಗಳೂರಿನಲ್ಲಿ ವಿಮಾನ ಸಂಚಾರಕ್ಕೆ ಅಡೆತಡೆ ಉಂಟಾಗಿದ್ದು, ಕನಿಷ್ಠ 10 ವಿಮಾನಗಳನ್ನು ಚೆನ್ನೈ ಮಾರ್ಗಕ್ಕೆ ತಿರುಗಿಸಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.
ಶನಿವಾರ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಇಂಡಿಗೊ ಮತ್ತು ಏರ್ ಇಂಡಿಯಾ ಸೇರಿದಂತೆ ಪ್ರಮುಖ ವಿಮಾನಯಾನ ಸಂಸ್ಥೆಗಳು, ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ ವಿಮಾನಗಳ ವಿಳಂಬ ಮತ್ತು ವಿಮಾನ ಮಾರ್ಗ ಬದಲಾವಣೆಯಾಗಿದ್ದು, ಪ್ರಯಾಣಿಕರು ಮತ್ತು ವಿಮಾನ ವೇಳಾಪಟ್ಟಿಯ ಮೇಲೆ ಪರಿಣಾಮ ಬೀರಿದೆ. ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ತೆರಳುವ ಮೊದಲು ತಮ್ಮ ವಿಮಾನದ ಸ್ಥಿತಿಯನ್ನು ಪರಿಶೀಲಿಸುವಂತೆ ಮನವಿ ಮಾಡಿವೆ.
ಇಂಡಿಗೋ ಸಂಸ್ಥೆ ಪ್ರತಿಕ್ರಿಯಿಸಿ, ನಾವು ಹವಾಮಾನವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಪರಿಸ್ಥಿತಿಗೆ ತಕ್ಕಂತೆ ಬದಲಾವಣೆಗಳನ್ನೂ ಮಾಡಿಕೊಳ್ಳುತ್ತೇವೆ. ಹಾಗಾಗಿ, ರಿಯಲ್ ಟೈಮ್ ಇನ್ಫಾರ್ಮೇಷನ್‍ನಲ್ಲಿ ವಿಮಾನದ ಮಾಹಿತಿಯನ್ನು ತಿಳಿದುಕೊಳ್ಳುತ್ತಿರಿ. ನಮ್ಮ ವೆಬ್‍ಸೈಟ್ ಮೂಲಕ ಗ್ರಾಹಕರಿಗೆ ಅನುಕೂಲವಾಗುವಂತೆ ಮರುಬುಕಿಂಗ್ ಮತ್ತು ಮರುಪಾವತಿ ಆಯ್ಕೆಗಳು ಲಭ್ಯವಿದೆ ಎಂದು ಹೇಳಿದೆ.
ಭಾರೀ ಮಳೆಯಿಂದಾಗಿ ಉಂಟಾದ ವಾಯು ಸಂಚಾರ ದಟ್ಟಣೆಯಿಂದಾಗಿ ವಿಮಾನ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರಿದೆ ಎಂದು ಏರ್ ಇಂಡಿಯಾ ದೃಢಪಡಿಸಿದೆ. ವಿಮಾನ ನಿಲ್ದಾಣಕ್ಕೆ ಹೋಗುವ ಮೊದಲು ಎಲ್ಲಾ ಪ್ರಯಾಣಿಕರು ತಮ್ಮ ವಿಮಾನದ ಸ್ಥಿತಿಯನ್ನು ಪರಿಶೀಲಿಸಬೇಕು' ಎಂದು ಏರ್ ಇಂಡಿಯಾ ಸಹ ಮನವಿ ಮಾಡಿದೆ.