ಅತಿಥಿ ಶಿಕ್ಷಕರನ್ನು ಎ.30ರವರೆಗೆ ಮುಂದುವರಿಸಿ : ನಿರಂಜನಾರಾಧ್ಯ ವಿ.ಪಿ. ಆಗ್ರಹ

ಬೆಂಗಳೂರು: ರಾಜ್ಯದ ಸರಕಾರಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರನ್ನು ಎ.30ರವರೆಗೆ ಮುಂದುವರಿಸಬೇಕು ಎಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ. ಆಗ್ರಹಿಸಿದ್ದಾರೆ.
ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿರುವ ಅವರು, ರಾಜ್ಯದಲ್ಲಿ ಪ್ರಾಥಮಿಕ ಶಾಲೆಗಳಲ್ಲಿ 49,338 ಹಾಗು ಪ್ರೌಢ ಶಾಲೆಗಳಲ್ಲಿ 11,796 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಈ ಖಾಲಿ ಇರುವ ಹುದ್ದೆಗಳ ಜಾಗದಲ್ಲಿ ಒಟ್ಟು 43, 553 ಶಿಕ್ಷಕರು ಅತಿಥಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದಿದ್ದಾರೆ.
ತಾವು ಇತ್ತೀಚೆಗೆ ಮಂಡಿಸಿದ ಆಯವ್ಯಯದಲ್ಲಿ ಅವರ ಮಾಸಿಕ ಗೌರವ ಧನವನ್ನು ತಲಾ 2 ಸಾವಿರೂ.ಗೆ ಹೆಚ್ಚಿಸಿರುವುದು ಶ್ಲಾಘನೀಯ. ಇದು ಬೆಳಿಗಿನಿಂದ ಸಂಜೆಯವರೆಗೆ ಕಷ್ಟಪಟ್ಟು ದುಡಿಯುವ ಅವರಿಗೆ ಪೂರ್ಣ ಪ್ರಮಾಣದಲ್ಲಲ್ಲದಿದ್ದರೂ ಸ್ವಲ್ಪಮಟ್ಟಿಗಾದರು ಸಹಾಯವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಅತಿಥಿ ಶಿಕ್ಷಕರು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಾಮಾನ್ಯವಾಗಿ ಶಾಲೆಗಳಲ್ಲಿ ಮಾ.30ರವರೆಗೆ ಕಲಿಕೆಯ ಶಾಲಾ ಹಂತದ ಪರೀಕ್ಷೆಗಳು ನಡೆಯುತ್ತಿರುತ್ತವೆ. ಇದಾದ ನಂತರ, ಎಪ್ರಿಲ್‍ನಲ್ಲಿ ದಾಖಲೆಗಳ ನಿರ್ವಹಣೆ ಮತ್ತು ವಿದ್ಯಾರ್ಥಿವಾರು ಪ್ರಗತಿ ಪತ್ರಗಳನ್ನು ಸಿದ್ಧಪಡಿಸುವ ಕೆಲಸ ನಡೆಯುತ್ತದೆ. ಎಂದು ಅವರು ಹೇಳಿದ್ದಾರೆ.
ಶಾಲೆಗಳಿಗೆ ಬೇಸಿಗೆ ರಜೆ ನೀಡುವ ಮುನ್ನ, ಸಮುದಾಯದತ್ತ ಶಾಲಾ ಕಾರ್ಯಕ್ರಮದ ಮೂಲಕ ಪ್ರಗತಿ ಪತ್ರವನ್ನು ಪಾಲಕರಿಗೆ ತಲುಪಿಸಿ ಮಕ್ಕಳ ಕಲಿಕೆ, ಮುಂದಿನ ಶೈಕ್ಷಣಿಕ ವರ್ಷದ ಸಿದ್ಧತೆ ಇತ್ಯಾದಿಗಳ ಬಗ್ಗೆ ಪಾಲಕರೊಂದಿಗೆ ಚರ್ಚಿಸಿ ಕಾರ್ಯಕ್ರಮ ರೂಪಿಸಬೇಕಾದ ಕೆಲಸಗಳು ನಡೆಯಬೇಕಿದೆ ಎಂದು ನಿರಂಜನಾರಾಧ್ಯ ವಿ.ಪಿ. ಹೇಳಿದ್ದಾರೆ.
ಈ ಎಲ್ಲ ಕಾರಣಗಳಿಂದ ಅತಿಥಿ ಶಿಕ್ಷಕರನ್ನು ಕನಿಷ್ಠ ಎಪ್ರಿಲ್ ಅಂತ್ಯದವರೆಗೆ ಮುಂದುವರಿಸಲು ಸಂಬಂಧಿಸಿದ ಶಿಕ್ಷಣ ಇಲಾಖೆಗೆ ತಾವು ಸೂಚನೆ ನೀಡಬೇಕು ಎಂದು ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.