ಉಪಸಭಾಪತಿ ವಿರುದ್ದ ಅವಿಶ್ವಾಸ ನಿರ್ಣಯಕ್ಕೆ ಹರಿಪ್ರಸಾದ್ ಪಟ್ಟು

ಬಿ.ಕೆ.ಹರಿಪ್ರಸಾದ್
ಬೆಂಗಳೂರು : ವಿಧಾನ ಪರಿಷತ್‌ನಲ್ಲಿ ಬಜೆಟ್ ಮೇಲೆ ಚರ್ಚೆ ನಡೆಯುತ್ತಿರುವಾಗ ಸಭಾಪತಿ ಸ್ಥಾನದಲ್ಲಿದ್ದ ಉಪಸಭಾಪತಿ ಪ್ರಾಣೇಶ್ ತಮ್ಮ ಪಕ್ಷದ ಸದಸ್ಯರ ಪರ ವಹಿಸಿದ್ದಾರೆ. ಹೀಗಾಗಿ ಪ್ರಾಣೇಶ್ ಅವರ ವಿರುದ್ದ ಅವಿಶ್ವಾಸ ನಿರ್ಣಯ ಮಂಡನೆಗೆ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವಕಾಶ ಕೋರಿದ್ದಾರೆ.
ಸಭಾಪತಿ ಬಸವರಾಜ ಹೊರಟ್ಟಿ ಗುರುವಾರ ಮಧ್ಯಾಹ್ನ ಅವಕಾಶ ನೀಡಿದರು. ಉಪಸಭಾಪತಿ ಪ್ರಾಣೇಶ್ ಮಾತನಾಡಿ, ಉಪಸಭಾಪತಿಯಾಗಿ ಸಭೆಯಲ್ಲಿ ನಾನೂ ಭಾಗವಹಿಸಬಹುದು ಎಂದು ನಿಯಮಗಳಲ್ಲಿದೆ. ಆದರೂ, ನಾನು ಹಲವು ಬಾರಿ ಭಾಗವಹಿಸಿಲ್ಲ. ನಾನು ಭಾಗವಹಿಸಿದ ನಂತರ ಸಭಾಪತಿ ಸ್ಥಾನದಲ್ಲಿ ಕುಳಿತಾಗ ನನ್ನ ಆತ್ಮಸಾಕ್ಷಿ ಒಪ್ಪುತ್ತಿರಲಿಲ್ಲ. ಅಲ್ಲದೆ, ನಾನು ಸಭಾಧ್ಯಕ್ಷ ಕುರ್ಚಿಯಲ್ಲಿ ಕುಳಿತಿದ್ದಾಗ ನಿಷ್ಪಕ್ಷವಾಗಿ ನಡೆದು ಕೊಂಡಿದ್ದೇನೆ ಎಂದರು.
‘ಕಳ್ಳ ಮತಗಳನ್ನು ಪಡೆದು ಬಿಜೆಪಿಯವರು ಬಂದಿದ್ದಾರೆ’ ಎಂಬ ಕಾಂಗ್ರೆಸ್ ಸದಸ್ಯ ಹರಿಪ್ರಸಾದ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಪ್ರಾಣೇಶ್, ಚುನಾವಣೆಯ ಅವ್ಯವಹಾರಗಳ ಬಗ್ಗೆ ಪರಿಶೀಲಿಸಲು ಕೋರ್ಟ್ ಮತ್ತು ಆಯೋಗ ಇದೆ. ಹೀಗಾಗಿ ಇಲ್ಲಿ ಬೇರೆ ಪ್ರಸ್ತಾವ ಸರಿಯಲ್ಲ ಎಂದರು.
ಬಳಿಕ ಪ್ರತಿಕ್ರಿಸಿದ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್, ಹನುಮೇಗೌಡ ಎಂಬವರು ತಮ್ಮ ಪುಸ್ತಕದಲ್ಲಿ ಆರೆಸ್ಸೆಸ್‌ನವರು ಹೇಗೆ ಚುನಾಯಿತರಾಗಿ ಬಂದಿದ್ದಾರೆ ಎಂದು ಬರೆದಿದ್ದಾರೆ. ಬೇಕಾದರೆ ಆ ಪುಸ್ತಕ ತರಿಸಿ ಕೊಡುತ್ತೇನೆ, ಓದಿ ಎಂದು ಹೇಳಿದರು.
ಇದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಆ ಪುಸ್ತಕ ಅಪ್ರಸ್ತುತವಾಗಿದೆ. ಎಲ್ಲೆಲ್ಲೊ ಬರೆದಿದ್ದಾರೆ ಎಂದು ಇಲ್ಲಿ ಚರ್ಚೆ ಮಾಡಲು ಆಗುವುದಿಲ್ಲ ಎಂದು ತಿರುಗೇಟು ನೀಡಿದರು.