ರಕ್ತಚಂದನ ಮರಗಳ ಕಳ್ಳಸಾಗಣೆ ತಡೆಗೆ ಕ್ರಮ : ಡಾ.ಜಿ.ಪರಮೇಶ್ವರ್

ಬೆಂಗಳೂರು : ರಕ್ತ ಚಂದನ ಮರಗಳ ಕಳ್ಳ ಸಾಗಣೆ ತಡೆಗೆ ಪೊಲೀಸ್ ಇಲಾಖೆಯು ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಗುರುವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಎಂ.ಟಿ.ಬಿ.ನಾಗರಾಜು ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಹೊಸಕೋಟೆ ತಾಲೂಕಿನ ಕಟ್ಟಿಗೇನಹಳ್ಳಿ, ಬೈಲನರಸಾಪುರ, ಮೇಡಿಮಲ್ಲಸಂದ್ರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಕ್ರಮವಾಗಿ ರಕ್ತಚಂದನ ಸಾಗಾಣಿಕೆ ಮಾಡುತ್ತಿರುವ ಕುರಿತು ಪ್ರಕರಣಗಳು ದಾಖಲಾಗಿವೆ ಎಂದರು.
ಬೆಂಗಳೂರು ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಕಟ್ಟಿಗೇನಹಳ್ಳಿ ಬೈಲನರಸಾಪುರ, ಮೇಡಿಮಲ್ಲಸಂದ್ರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಅಕ್ರಮವಾಗಿ ರಕ್ತಚಂದನ ಮರಗಳ ಸಾಗಾಣಿಕೆ ಮಾಡುತ್ತಿರುವ ಕುರಿತಂತೆ 2021, 2022, 2023 ಮತ್ತು 2024ನೇ ಸಾಲಿನಲ್ಲಿ ಒಟ್ಟು 14 ಪ್ರಕರಣಗಳನ್ನು ದಾಖಲಿಸಿಕೊಂಡು, 34 ಜನ ಆರೋಪಿಗಳನ್ನು ಬಂಧಿಸಿ, ಆರೋಪಿಗಳಿಂದ ಒಟ್ಟು 5,650 ಕೆ.ಜಿ.ಗಳಷ್ಟು ರಕ್ತಚಂದನ ತುಂಡುಗಳನ್ನು ಜಪ್ತಿಪಡಿಸಿಕೊಳ್ಳಲಾಗಿದೆ. ಅಂದಾಜು ಮೌಲ್ಯ 1.47 ಕೋಟಿ ರೂ.ಗಳಾಗಿದೆ ಎಂದು ಡಾ.ಜಿ.ಪರಮೇಶ್ವರ್ ವಿವರಿಸಿದರು.
ಹೊಸಕೋಟೆ ತಾಲ್ಲೂಕಿನ ಕಟ್ಟಿಗೇನಹಳ್ಳಿ, ಬೈಲನರಸಾಪುರ, ಮೇಡಿಮಲ್ಲಸಂದ್ರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಕ್ರಮವಾಗಿ ರಕ್ತಚಂದನ ಮರಗಳ ಸಾಗಾಣಿಕೆ ಮಾಡುತ್ತಿರುವವರ ಮೇಲೆ ನಿಗಾವಹಿಸಿ, ಸಿಬ್ಬಂದಿಯವರನ್ನು ನೇಮಕ ಮಾಡಿ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಸ್ತು ಕರ್ತವ್ಯಕ್ಕೆ ಸಿಬ್ಬಂದಿಯವರನ್ನು ನೇಮಕ ಮಾಡಿ. ಅನುಮಾನಾಸ್ಪದ ವಾಹನಗಳನ್ನು ತಪಾಸಣೆ ಮಾಡಿಸಲಾಗಿರುತ್ತದೆ. ಠಾಣಾ ಗುಪ್ತ ವಿಭಾಗದ ಸಿಬ್ಬಂದಿಯವರಿಗೆ ಈ ಬಗ್ಗೆ ಸೂಚನೆ ನೀಡಿ, ಅಕ್ರಮ ರಕ್ತ ಚಂದನ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವಂತೆ ಸೂಚಿಸಲಾಗಿದೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.
ರಾತ್ರಿ ಸಮಯದಲ್ಲಿ ಪ್ರಮುಖ ರಸ್ತೆಗಳಲ್ಲಿ ನಾಕಬಂದಿ ಮಾಡಿ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದ್ದು, ಅಕ್ರಮ ರಕ್ತ ಚಂದನ ಸಾಗಾಣಿಕೆ ಆಗದಂತೆ ಸೂಕ್ತ ಕ್ರಮವನ್ನು ಕೈಗೊಳ್ಳಲಾಗಿದೆ. ಅಕ್ರಮವಾಗಿ ರಕ್ತ ಚಂದನ ಸಾಗಾಣಿಕೆ ಮಾಡುತ್ತಿರುವವರ ವಿರುದ್ಧ ರೌಡಿಶೀಟರ್ ತೆರೆದು ಆರೋಪಿಗಳ ಚಲನವಲನಗಳ ಮೇಲೆ ನಿಗಾ ವಹಿಸಲಾಗಿದೆ. ಅರಣ್ಯ ಸಂರಕ್ಷಣೆ/ಅರಣ್ಯ ಸಂಬಂಧಿತ ಕಳ್ಳತನ ಪ್ರಕರಣಗಳ ತನಿಖೆ ಮತ್ತು ನಿಗಾವಣೆಗಾಗಿ ಸಿಐಡಿ ವಿಭಾಗದಲ್ಲಿ ಡಿಐಜಿ/ಎಸ್.ಪಿ ರವರ ನೇತೃತ್ವದಲ್ಲಿ ಫಾರೆಸ್ಟ್ ಮೊಬೈಲ್ ಸ್ಕ್ವಾಡ್ ಕಾರ್ಯನಿರ್ವಹಿಸುತ್ತಿದೆ ಎಂದು ಡಾ.ಜಿ.ಪರಮೇಶ್ವರ್ ಹೇಳಿದರು.
ಬೆಂಗಳೂರು ಜಿಲ್ಲೆಯಲ್ಲಿ 2015ನೇ ಸಾಲಿನಿಂದ 2025(ಫೆಬ್ರವರಿ)ವರೆಗೆ ಒಟ್ಟು 80 ಪ್ರಕರಣಗಳನ್ನು ದಾಖಲಿಸಿದ್ದು. ಈ ಪ್ರಕರಣಗಳಲ್ಲಿ ಒಟ್ಟು 179 ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿತರಿಂದ ಒಟ್ಟು 31,835 ಕೆ.ಜಿ. ರಕ್ತ ಚಂದನದ ಮರದ ತುಂಡುಗಳನ್ನು ಜಪ್ತಿ ಪಡಿಸಿಕೊಳ್ಳಲಾಗಿದೆ. ಇವುಗಳ ಅಂದಾಜು ಮೌಲ್ಯ 1.51 ಕೋಟಿ ರೂ.ಗಳಾಗಿದೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.