ಬೆಂಗಳೂರು | ಶಿಕ್ಷಣಕ್ಕೆಂದು ನೀಡಿದ್ದ 35 ಲಕ್ಷ ರೂ. ದುರ್ಬಳಕೆ: ತಂದೆಯ ಗಮನವನ್ನು ಬೇರೆಡೆ ಸೆಳೆಯಲು ಮನೆಗೇ ಬೆಂಕಿ ಹಚ್ಚಿದ್ದ ಪುತ್ರನೀಗ ಪೊಲೀಸರ ಅತಿಥಿ!

Update: 2025-03-20 21:17 IST
ಬೆಂಗಳೂರು | ಶಿಕ್ಷಣಕ್ಕೆಂದು ನೀಡಿದ್ದ 35 ಲಕ್ಷ ರೂ. ದುರ್ಬಳಕೆ: ತಂದೆಯ ಗಮನವನ್ನು ಬೇರೆಡೆ ಸೆಳೆಯಲು ಮನೆಗೇ ಬೆಂಕಿ ಹಚ್ಚಿದ್ದ ಪುತ್ರನೀಗ ಪೊಲೀಸರ ಅತಿಥಿ!

ಸಾಂದರ್ಭಿಕ ಚಿತ್ರ | PC : freepik.com

  • whatsapp icon

ಬೆಂಗಳೂರು : ಉನ್ನತ ವ್ಯಾಸಂಗ ಶಿಕ್ಷಣವನ್ನು ಮುಂದುವರಿಸಲು ತನ್ನ ತಂದೆ ನೀಡಿದ್ದ 1.1 ಕೋಟಿ ರೂ. ಪೈಕಿ 35 ಲಕ್ಷ ರೂ. ಹಣ ದುರ್ಬಳಕೆ ಮಾಡಿಕೊಂಡಿದ್ದ ಪುತ್ರನೊಬ್ಬ, ತನ್ನ ತಂದೆಯ ಗಮನವನ್ನು ಬೇರೆಡೆಗೆ ಸೆಳೆಯಲು ತನ್ನ ಮನೆಗೇ ಬೆಂಕಿ ಹಚ್ಚಿ, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಬಂಧಿತ ಆರೋಪಿಯನ್ನು ಹಿರಂಡಹಳ್ಳಿ ಗ್ರಾಮದ 22 ವರ್ಷದ ನಿವಾಸಿ ರಂಜಿತ್ ವಿವೇಕ್ ಎಂದು ಗುರುತಿಸಲಾಗಿದೆ.

ಇತ್ತೀಚೆಗೆ ಹಿರಂಡಹಳ್ಳಿ ಗ್ರಾಮದಲ್ಲಿರುವ ಬೆಂಗಳೂರು ಪೂರ್ವ ತಾಲ್ಲೂಕಿನ ಬಿದರಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಜಗನ್ನಾಥ್ ಎಂಬುವವರ ನಿವಾಸದಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿತ್ತು. ಮೊದಲಿಗೆ ದುಷ್ಕರ್ಮಿಗಳು ಈ ಕೃತ್ಯ ನಡೆಸಿರಬಹುದು ಎಂದು ಪೊಲೀಸರು ಶಂಕಿಸಿದ್ದರು. ಆದರೆ, ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿನ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ, ಪೊಲೀಸರಿಗೆ ಜಗನ್ನಾಥ್ ಅವರ ಪುತ್ರ ರಂಜಿತ್ ವಿವೇಕ್ ಚಲನವಲನಗಳ ಮೇಲೆ ಅನುಮಾನ ಮೂಡಿತು ಎಂದು ಗುರುವಾರ TNIE ಸುದ್ದಿ ಸಂಸ್ಥೆ ವರದಿ ಮಾಡಿದೆ.

ನಂತರ, ರಂಜಿತ್ ವಿವೇಕ್ ನನ್ನು ಪೊಲೀಸರು ವಿಚಾರಣೆಗೊಳಪಡಿಸಿದಾಗ, ಆತ ತನ್ನ ತಪ್ಪೊಪ್ಪಿಕೊಂಡಿದ್ದಾನೆ. ನನ್ನ ತಂದೆ ನೀಡಿದ್ದ ಹಣವನ್ನು ನಾನು ಜೂಜಾಟ ಹಾಗೂ ಯುವತಿಯೊಬ್ಬಳಿಗಾಗಿ ಖರ್ಚು ಮಾಡಿದ್ದೆ ಎಂದು ಆತ ವಿಚಾರಣೆಯ ವೇಳೆ ಬಾಯಿ ಬಿಟ್ಟಿದ್ದಾನೆ.

ಗ್ರಾಮ ಪಂಚಾಯಿತಿ ಸದಸ್ಯರಾದ ನನ್ನ ತಂದೆ ನನ್ನಿಂದ ಹಣವನ್ನು ಮರಳಿ ವಾಪಸು ಕೇಳಬಹುದು ಎಂಬ ಭೀತಿಗೊಳಗಾಗಿದ್ದೆ. ಹೀಗಾಗಿ, ಅವರ ಗಮನವನ್ನು ಬೇರೆಡೆ ಸೆಳೆಯಲು, ನಾನು ಮನೆಗೆ ಬೆಂಕಿ ಹಚ್ಚಲು ತೀರ್ಮಾನಿಸಿದೆ ಎಂದೂ ರಂಜಿತ್ ವಿವೇಕ್ ವಿಚಾರಣೆಯ ಸಂದರ್ಭದಲ್ಲಿ ತಪ್ಪೊಪ್ಪಿಕೊಂಡಿದ್ದಾನೆ.

ತನ್ನ ಯೋಜನೆಯನ್ನು ಕಾರ್ಯಗತಗೊಳಿಸಲು ರಂಜಿತ್ ವಿವೇಕ್ ತನ್ನ ಮನೆಯ ಸಿಸಿಟಿವಿ ಕ್ಯಾಮೆರಾದ ಸಂಪರ್ಕವನ್ನು ಕಡಿತಗೊಳಿಸಿದ್ದನಾದರೂ, ಆತನ ಕೃತ್ಯ ಮತ್ತೊಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆರು ಕ್ಯಾನ್ ನಲ್ಲಿ 20 ಲೀಟರ್ ಪೆಟ್ರೋಲ್ ಖರೀದಿಸಿದ್ದ ರಂಜಿತ್ ವಿವೇಕ್, ಈ ಪೈಕಿ ನಾಲ್ಕು ಕ್ಯಾನ್ ನಲ್ಲಿದ್ದ ಪೆಟ್ರೋಲ್ ಅನ್ನು ಮನೆಗೆ ಬೆಂಕಿ ಹಚ್ಚಲು ಬಳಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆ ನಡೆದಾಗ, ರಂಜಿತ್ ವಿವೇಕ್, ಆತನ ಪೋಷಕರು ಹಾಗೂ ಸಹೋದರಿ ಮನೆಯಲ್ಲಿದ್ದರು. ಅದೃಷ್ಟವಶಾತ್, ಅವರೆಲ್ಲ ಯಾವುದೇ ಅಪಾಯವಿಲ್ಲದೆ ಅದರಿಂದ ಪಾರಾಗಿದ್ದರು. ಕೂಡಲೇ ಅವರು ಅಗ್ನಿಶಾಮಕ ದಳಕ್ಕೆ ಘಟನೆಯ ಕುರಿತು ಮಾಹಿತಿ ನೀಡಿದ್ದರಾದರೂ, ಬೆಂಕಿಯನ್ನು ನಂದಿಸುವ ವೇಳೆಗೆ ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳೆಲ್ಲ ಸಂಪೂರ್ಣವಾಗಿ ಹಾನಿಗೊಳಗಾಗಿದ್ದವು.

ವಿವೇಕ್ ವಿರುದ್ಧ ಹತ್ಯೆ ಪ್ರಯತ್ನ ಸೇರಿದಂತೆ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News