ಬೆಂಗಳೂರು | ರಿಕವರಿ ಚಿನ್ನ ದುರ್ಬಳಕೆ ಆರೋಪ : ಪಿಎಸ್ಐ ಅಮಾನತು

ಬೆಂಗಳೂರು : ರಿಕವರಿ ಚಿನ್ನ ದುರ್ಬಳಕೆ ಮತ್ತು ಚಿನ್ನದ ವ್ಯಾಪಾರಿಗೆ ವಂಚಿಸಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಟನ್ ಪೇಟೆ ಠಾಣೆ ಪಿಎಸ್ಐ ಸಂತೋಷ್ ವಿರುದ್ಧ ಎಫ್ಐಆರ್ ದಾಖಲಾದ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತರು ಅಮಾನತು ಮಾಡಿದ್ದಾರೆ.
ಪಿಎಸ್ಐ ಸಂತೋಷ್ ಅವರು 2020ರಲ್ಲಿ ಹಲಸೂರು ಗೇಟ್ ಠಾಣೆಯಲ್ಲಿದ್ದಾಗ ರಿಕವರಿ ಚಿನ್ನವನ್ನು ದುರುಪಯೋಗ ಪಡಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ. ಚಿನ್ನದ ವ್ಯಾಪಾರಿಯಿಂದ 950 ಗ್ರಾಂ ಚಿನ್ನ ಪಡೆದು ವಾಪಸ್ ನೀಡದೆ ವಂಚಿಸಿದ್ದಾರೆ. ಎಫ್ಐಆರ್ ದಾಖಲಾದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ.
2020ರಲ್ಲಿ ಹಲಸೂರು ಗೇಟ್ ಠಾಣೆ ಪಿಎಸ್ಐ ಆಗಿದ್ದ ಸಂತೋಷ್ ಪ್ರಕರಣವೊಂದರ ರಿಕವರಿ ಚಿನ್ನ ದುರ್ಬಳಕೆ ಮಾಡಿಕೊಂಡಿದ್ದರು. ಚಿನ್ನದ ಅಂಗಡಿ ಮಾಲಕನ ಬಳಿ ರಿಕವರಿ ಚಿನ್ನ ತೋರಿಸಬೇಕಿದೆ. ಫೋಟೋ ತೆಗೆಸಿ ವಾಪಸ್ ಕೊಡುತ್ತೇನೆ. ನಿನ್ನ ಬಳಿ ಇರುವ 950 ಗ್ರಾಂ ಚಿನ್ನದ ಗಟ್ಟಿ ನೀಡುವಂತೆ ಪಿಎಸ್ಐ ಸಂತೋಷ್ ಚಿನ್ನದಂಗಡಿಯ ಮಾಲಕನಿಗೆ ತಿಳಿಸಿದ್ದಾರೆ.
ಪಿಎಸ್ಐ ಸಂತೋಷ್ ಅವರ ಮಾತು ನಂಬಿ 950 ಗ್ರಾಂ ಚಿನ್ನದ ಗಟ್ಟಿಯನ್ನು ಪಿಎಸ್ಐ ಸಂತೋಷ್‌ಗೆ ಚಿನ್ನದ ಅಂಗಡಿ ಮಾಲಕ ನೀಡಿದ್ದಾರೆ. ಚಿನ್ನ ವಾಪಸ್ ಕೇಳಿದಾಗ ಪಿಎಸ್ಐ ಸಂತೋಷ ಹಣ ನೀಡುತ್ತೇನೆಂದು ಹೇಳಿದ್ದು, ಭದ್ರತೆಗೆ ನಿವೇಶನದ ಕರಾರು ಮಾಡಿಕೊಟ್ಟಿದ್ದರು. ಆದರೆ ನಿವೇಶನವನ್ನು ಪಿಎಸ್ಐ ಸಂತೋಷ್ ಬೇರೆಯವರಿಗೆ ಮಾರಿದ್ದರು. ಈ ಹಿನ್ನೆಲೆಯಲ್ಲಿ ಚಿನ್ನದ ಅಂಗಡಿ ಮಾಲಕ ಮತ್ತೆ ಪಿಎಸ್ಐ ಸಂತೋಷರನ್ನು ಪ್ರಶ್ನಿಸಿದ್ದಾರೆ. ಆಗ, ಪಿಎಸ್ಐ ಸಂತೋಷ್ ಚಿನ್ನದ ಅಂಗಡಿ ಮಾಲಕರಿಗೆ ಖಾಲಿ ಚೆಕ್ ನೀಡಿದ್ದರು. ಆದರೆ, ಚೆಕ್ ಕೂಡ ಬೌನ್ಸ್ ಆಗಿತ್ತು. ಮತ್ತೆ ಹಣ ಅಥವಾ ಚಿನ್ನ ಕೇಳಿದಾಗ ಪಿಎಸ್ಐ ಸಂತೋಷ್ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.
ಚಿನ್ನದ ಅಂಗಡಿ ಮಾಲಕ ನೀಡಿದ್ದ ದೂರಿನನ್ವಯ ಹಲಸೂರು ಗೇಟ್ ಠಾಣೆಯಲ್ಲಿ ಪಿಎಸ್ಐ ಸಂತೋಷ್ ವಿರುದ್ಧ ಅಧಿಕಾರ ದುರುಪಯೋಗ, ವಂಚನೆ ಕೇಸ್ ದಾಖಲಾಗಿದೆ.