ಕೋಮುವಾದದ ವಿರುದ್ದ ಚಳುವಳಿ ಕಟ್ಟಬೇಕಾಗಿದೆ: ಬಿ.ಆರ್.ಪಾಟೀಲ್

Update: 2025-03-23 21:58 IST
ಕೋಮುವಾದದ ವಿರುದ್ದ ಚಳುವಳಿ ಕಟ್ಟಬೇಕಾಗಿದೆ: ಬಿ.ಆರ್.ಪಾಟೀಲ್

ಬಿ.ಆರ್.ಪಾಟೀಲ್

  • whatsapp icon

ಬೆಂಗಳೂರು : ಕೋಮುವಾದದ ವಿರುದ್ದ ದೇಶದ ಚಿಂತಕರು, ಹೋರಾಟಗಾರರು ಸೇರಿ ಚಳುವಳಿಯನ್ನು ಕಟ್ಟಬೇಕಾಗಿದೆ ಎಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್ ಕರೆ ನೀಡಿದ್ದಾರೆ.

ರವಿವಾರ ಇಲ್ಲಿನ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಭಾರತ ಯಾತ್ರಾ ಕೇಂದ್ರ- ಎಂ.ಪಿ. ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಮತ್ತು ಲೋಕನಾಯಕ ಜಯಪ್ರಕಾಶ್ ನಾರಾಯಣ್ ವಿಚಾರ ವೇದಿಕೆ ಸಹಯೋಗದಲ್ಲಿ ಆಯೋಜಿಸಿದ್ದ ‘ಡಾ. ರಾಮಮನೋಹರ್ ಲೋಹಿಯಾ ಜನ್ಮದಿನಾಚಾರಣೆ’ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇವತ್ತು ಕೋಮುವಾದದ ವಾತವರಣವನ್ನು ಸೃಷ್ಟಿ ಮಾಡಿದ್ದಾರೆ. ದ್ವೇಷ, ಅಸೂಹೆವನ್ನು ಉಂಟು ಮಾಡುತ್ತಿದ್ದಾರೆ, ಇದು ದೇಶದ ಬೆಳವಣಿಗೆಗೆ ಒಳ್ಳೆಯದಲ್ಲ. ಕೇಂದ್ರ ಸರಕಾರ ರಾಜಕೀಯ ಸ್ವಾರ್ಥಕ್ಕಾಗಿ ಕೋಮುವಾದವನ್ನು ಸೃಷ್ಟಿ ಮಾಡುತ್ತಿದೆ. ಅದನ್ನು ಹಿಮ್ಮೆಟ್ಟಲು ಯೋಗೇಂದ್ರ ಯಾದವ್‍ರಂತಹ ಚಿಂತಕರು, ಈ ದೇಶದ ಹೋರಾಟಗಾರರು ಒಗ್ಗಟ್ಟಾಗಿ ಹೋರಾಟ ಮಾಡಬೇಕಾಗಿದೆ ಎಂದು ಅವರು ತಿಳಿಸಿದರು.

ರಾಜಕೀಯ ಚಿಂತಕ ಡಾ. ಯೋಗೇಂದ್ರ ಯಾದವ್ ಅವರು ಗಾಂಧಿ-ಲೋಹಿಯಾ ಸಂಬಂಧವನ್ನು ಗಟ್ಟಿಯಾಗಿ ಬೆಳೆಸಿ ಇಡೀ ದೇಶದಲ್ಲಿ ಬದಲಾವಣೆ ತರುವಂತಹ ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ರೈತ ಚಳುವಳಿಯಲ್ಲಿ ಮಹತ್ತರ ಪಾತ್ರವನ್ನು ವಹಿಸಿ, ರೈತ ಚಳುವಳಿಗೆ ಶಕ್ತಿಯನ್ನು ತುಂಬಿದ್ದಾರೆ ಎಂದು ಬಿ.ಆರ್. ಪಾಟೀಲ್ ಹೇಳಿದರು.

ದೇಶದಲ್ಲಿ ರೈತ ಚಳುವಳಿ ಇನ್ನು ಆರಂಭವಾಗಿರಲಿಲ್ಲ, ಆಗ ನಾವು ಕರ್ನಾಟಕದಲ್ಲಿ ಐಕ್ಯ ಹೋರಾಟ ಎನ್ನುವ ವೇದಿಕೆಯನ್ನು ಮಾಡಿದ್ದೇವು. ರೈತ, ದಲಿತ, ಕಾರ್ಮಿಕ ಮೂರು ಸಂಘಟನೆಗಳನ್ನು ಸೇರಿಸಿದ್ದೇವು. ಆ ಹೋರಾಟಕ್ಕೆ ಯೋಗೇಂದ್ರ ಯಾದವ್ ಚಾಲನೆ ನೀಡಿದ್ದರು. ಆನಂತರ ದೇಶದಲ್ಲಿ ರೈತ ಚಳುವಳಿಗಳು ಆರಂಭವಾದವು. ರೈತ ಚಳುವಳಿಯ ಪರಿಣಾಮವಾಗಿ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆದಿದ್ದಾರೆ ಎಂದು ಅವರು ತಿಳಿಸಿದರು.

ಸರಕಾರಿ ಉದ್ಯೋಗಗಳಲ್ಲಿ ಮೀಸಲಾತಿ ವಿಚಾರ ಚರ್ಚೆಗೆ ಬಂದಿದೆ. ಕೇವಲ ಶೇ.2ರಷ್ಟು ಉದ್ಯೋಗಗಳು ಮಾತ್ರ ಸರಕಾರದಲ್ಲಿರುತ್ತವೆ. ಇದರಲ್ಲಿ ಮೀಸಲಾತಿಬೇಕು ಎಂದು ಎಲ್ಲರೂ ಹೋರಾಟ ಮಾಡುತ್ತಿದ್ದಾರೆ. ಸಂವಿಧಾನದ ಆಶಯಗಳನ್ನು ನಾವು ಈಡೇರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಮಸ್ಯಗಳು ಬಂದಿವೆ. ಸಂವಿಧಾನದ ಆಶಯ ಈಡೇರಿಸಿದರೆ ಮೀಸಲಾತಿಯಂತಹ ಸಣ್ಣ ಸಣ್ಣ ಸಮಸ್ಯೆಗಳು ಬಗೆಹರಿಯುತ್ತಿದ್ದವು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ರಾಜಕೀಯ ಚಿಂತಕ ಡಾ. ಯೋಗೇಂದ್ರ ಯಾದವ್‍ರಿಗೆ ‘ಡಾ.ರಾಮಮನೋಹರ ಲೋಹಿಯಾ ಪ್ರಶಸ್ತಿ’ಯನ್ನು ಡಾ.ವಿಜಯಾ ಅವರು ಪ್ರದಾನ ಮಾಡಿದರು. ಇದೇ ವೇಳೆ ಸಂಸದ ಡಾ. ರಾಜೀವ್ ರಾಯ್ ಅವರನ್ನು ಗೌರವಿಸಲಾಯಿತು. ಭಾರತ ಯಾತ್ರಾ ಕೇಂದ್ರದ ಡಾ. ಬಿ.ಎಲ್.ಶಂಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಂ.ಪಿ. ಪ್ರಕಾಶ್ ಸಮಾಜಮುಖಿ ಟ್ರಸ್ಟ್‍ನ ವೀಣಾ ಮಹಾಂತೇಶ್, ಕೆ.ವಿ.ನಾಗರಾಜ ಮೂರ್ತಿ ಸೇರಿದಂತೆ ಮತ್ತಿತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News