ನನ್ನ ರಾಜಕೀಯ ಅನುಭವದಷ್ಟು ವಯಸ್ಸಾಗಿರದ ವಿಜಯೇಂದ್ರ : ಬಿ.ಕೆ.ಹರಿಪ್ರಸಾದ್ ತಿರುಗೇಟು

ಬಿ.ವೈ.ವಿಜಯೇಂದ್ರ,ಬಿ.ಕೆ.ಹರಿಪ್ರಸಾದ್
ಬೆಂಗಳೂರು: ‘ನನ್ನ ರಾಜಕೀಯ ಜೀವನದ ಅನುಭವದಷ್ಟು ವಯಸ್ಸಾಗಿರದ ಬಿ.ವೈ.ವಿಜಯೇಂದ್ರ, ಎಳಸು ರಾಜಕಾರಣಿ ಎನ್ನುವುದನ್ನು ಬಿಜೆಪಿಯ ನಾಯಕರೇ ಹಾದಿಬೀದಿಯಲ್ಲಿ ಮಾತಾಡುತ್ತಿದ್ದಾರೆ’ ಎಂದು ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ತಿಳಿಸಿದ್ದಾರೆ.
ರವಿವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ವಿಜಯೇಂದ್ರ ತಮ್ಮ ತಂದೆಯ ಹೆಸರಿನಲ್ಲಿ ಚೆಕ್ ಮೂಲಕ ಲಂಚ ತೆಗೆದುಕೊಂಡು ಜೈಲಿಗೆ ಕಳುಹಿಸಿದ ಏಕೈಕ ಎಳಸು ಮಗ, ಜಗತ್ತಿನಲ್ಲಿ ಹುಡುಕಿದರೆ ವಿಜಯೇಂದ್ರ ಮಾತ್ರ ಸಿಗಬಹುದು ಎಂದು ಟೀಕಿಸಿದ್ದಾರೆ.
ಕಲೆಕ್ಷನ್ ಮಾಡುವುದನ್ನೇ ಅರ್ಹತೆ ಮಾಡಿಕೊಂಡು, ಡಿನೋಟಿಫಿಕೇಷನ್ ಮಾಡುವುದನ್ನೇ ಉದ್ಯೋಗ ಮಾಡಿಕೊಂಡು, ಹೊಂದಾಣಿಕೆ ರಾಜಕೀಯವೇ ನನ್ನ ಧ್ಯೇಯ ಎಂದು ಬಿಜೆಪಿ ಅಧ್ಯಕ್ಷರಾಗಿರುವ ವಿಜಯೇಂದ್ರ ತಮ್ಮ ಪಕ್ಷದವರು ಮಾಡುತ್ತಿರುವ ಘನಘೋರ ಆರೋಪಗಳಿಗೆ ಉತ್ತರಿಸದೆ, ಅಲ್ಲಾಡುತ್ತಿರುವ ಪೇಮೆಂಟ್ ಸೀಟ್‍ನ್ನು ಭದ್ರ ಮಾಡಿಕೊಳ್ಳಲು ಮೋದಿ ವಿರುದ್ಧದ ನನ್ನ ಮಾತುಗಳಿಗೆ ಮೈಎಲ್ಲಾ ಪರಚಿಕೊಂಡಿರುವುದನ್ನ ನೋಡಿ ಯಾವ ದಿಕ್ಕಿನಲ್ಲಿ ಮುಖ ಮಾಡಿ ನಗಬೇಕು ಗೊತ್ತಾಗುತ್ತಿಲ್ಲ ಎಂದು ಅವರು ಲೇವಡಿ ಮಾಡಿದ್ದಾರೆ.
ಹನಿಟ್ರ್ಯಾಪ್ ಕಾಂಗ್ರೆಸ್ ನಾಯಕರು ಮಾಡಿದ್ದಾರೆ ಎನ್ನುತ್ತಿರುವ ವಿಜಯೇಂದ್ರ ಅವರೇ, ಒಂದಿಷ್ಟು ಸಂಘ ಪರಿವಾರದ ಇತಿಹಾಸವನ್ನಾದರೂ ತಿಳಿದುಕೊಳ್ಳಿ. ಹನಿಟ್ರ್ಯಾಪ್‍ನ ಪರಂಪರೆ ಪ್ರಾರಂಭಿಸಿದ್ದೇ ಬಿಜೆಪಿ ಅತಿರಥ ಮಹಾರಥರು. ಪಾಪ ಇನ್ನೂ ರಾಜಕೀಯದಲ್ಲಿ ಎಳಸಾಗಿರುವ ಕಾರಣ ಗೊತ್ತಿಲ್ಲದೆ ಇದ್ದರೆ ನಿಮ್ಮ ಹಿರಿಯರಿಂದ ಸ್ವಲ್ಪ ಇತಿಹಾಸ ಹೇಳಿಸಿಕೊಳ್ಳಿ ಎಂದು ಹೇಳಿದ್ದಾರೆ.
ಆಪರೇಷನ್ ಕಮಲದ ರೂವಾರಿ ಬಿಜಯೇಂದ್ರ ಅವರೇ, ನಿಮ್ಮ ಅಧಿಕಾರದ ದಾಹಕ್ಕಾಗಿ ಶಾಸಕರನ್ನು ಖರೀದಿ ಮಾಡಿದ ಕಾರಣಕ್ಕಾಗಿ ‘ಬಾಂಬೆ ಬಾಯ್ಸ್’ಗಳು ತಮ್ಮ ವಿರುದ್ಧ ಯಾವುದೇ ಮಾನಹಾನಿ ಪ್ರಸಾರ ಮಾಡಬಾರದೆಂದು ಕೋರ್ಟ್ ಮೂಲಕ ನಿರ್ಬಂಧ ತಂದಿರುವುದು ಯಾವ ಪುರುಷಾರ್ಥಕ್ಕಾಗಿ? ಆ ಹನಿಟ್ರ್ಯಾಪ್‍ನ ಕಿಂಗ್‍ಪಿನ್ ನೀವೇ ಎಂದು ಯತ್ನಾಳ್ ಹೇಳಿರುವ ಮಾತಿಗೆ ಇಲ್ಲಿವರೆಗೂ ಉತ್ತರ ಕೊಡುವ ಧೈರ್ಯ ಇದೆಯಾ? ಎಂದು ಪ್ರಶ್ನಿಸಿದ್ದಾರೆ.
ತಮ್ಮ ಪಕ್ಷದ ಸಿಂಡ್ರೋಮ್‍ಗಳಿಂದ ತತ್ತರಿಸುತ್ತಾ ತಳ ಬುಡವಿಲ್ಲದ ಮಾತಾಡುವುದನ್ನ ಬಿಡಿ. ನಿಮ್ಮ ಸವಾಲನ್ನು ಸ್ವೀಕರಿಸುತ್ತೇನೆ. ಎಲ್ಲಾ ಪಕ್ಷದ ಹನಿಟ್ರ್ಯಾಪ್‍ಗಳ ಬಗ್ಗೆ ಮಾತಾಡುವ ಎದೆಗಾರಿಕೆ, ಧೈರ್ಯ, ಸಾಮಾಜಿಕ ಬದ್ಧತೆ ಎಲ್ಲವನ್ನು ಉಳಿಸಿಕೊಂಡೇ ಬಹಿರಂಗವಾಗಿ ಮಾತಾಡುತ್ತೇನೆ. ಆದರೆ ನಾನು ಕೇಳುವ ಒಂದೇ ಒಂದು ಪೋಕ್ಸೋ ಪ್ರಕರಣದ ಬಗ್ಗೆ ಬಹಿರಂಗವಾಗಿ ಸತ್ಯ ಹೇಳುವ, ಧೈರ್ಯ ಕಿಂಚಿತ್ತಾದರೂ ನಿಮ್ಮ ಎದೆಯಲ್ಲಿ ಇದ್ದರೇ ಬಹಿರಂಗ ಸವಾಲಿಗೆ ಬನ್ನಿ ಎಂದು ಅವರು ಸವಾಲು ಹಾಕಿದ್ದಾರೆ.