ಹೊರರಾಜ್ಯಗಳಿಂದ ನುಸುಳುವ ನಕ್ಸಲರ ಬಗ್ಗೆ ನಿಗಾ : ಡಾ.ಜಿ.ಪರಮೇಶ್ವರ್

ಡಾ.ಜಿ.ಪರಮೇಶ್ವರ್
ಬೆಂಗಳೂರು : ಕರ್ನಾಟಕವನ್ನು ನಕ್ಸಲ್ ಮುಕ್ತವೆಂದು ಘೋಷಿಸಲಾಗಿದ್ದು, ಹೊರ ರಾಜ್ಯಗಳಿಂದ ನಕ್ಸಲರು ರಾಜ್ಯಕ್ಕೆ ನುಸುಳಬಹುದೇ ಎಂಬುದರ ಬಗ್ಗೆ ನಿಗಾ ಇಡಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಗುರುವಾರ ವಿಧಾನಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯ ನಕ್ಸಲ್ ಮುಕ್ತ ಎಂದಾಗಿರುವುದರಿಂದ ನಕ್ಸಲ್ ವಿರೋಧಿ ಘಟಕವನ್ನು ವಿಸರ್ಜಿಸಲು ಆದೇಶ ಹೊರಡಿಸಲಾಗಿದೆ. ಕೇರಳ ಸೇರಿದಂತೆ ಅಕ್ಕಪಕ್ಕದ ರಾಜ್ಯಗಳಿಂದ ನಕ್ಸಲರು ನುಸುಳುವ ಸಾಧ್ಯತೆಗಳಿದ್ದು, ಈ ಬಗ್ಗೆ ಕಣ್ಗಾವಲು ಇಡಲು ಗುಪ್ತಚರ ವಿಭಾಗಕ್ಕೆ ಹೊಣೆಗಾರಿಕೆ ನೀಡಲಾಗಿದೆ ಎಂದರು.
2025ರ ಜ.6ರಂದು ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯಮಟ್ಟದ ನಕ್ಸಲ್ ಶರಣಾಗತಿ ಸಮಿತಿಯ ಸಭೆಯಲ್ಲಿ ಔಪಚಾರಿಕ ಶರಣಾಗತಿ ಅಂಗೀಕರಿಸಲು ತೀರ್ಮಾನಿಸಲಾಗಿದೆ. ರಾಜ್ಯದಲ್ಲಿ ಕಾರ್ಯಾಚರಣೆ ಮಾಡುತ್ತಿದ್ದ ಮತ್ತು ಘೋಷಿಸಲಾಗಿದ್ದ ನಕ್ಸಲರೆಲ್ಲರೂ ಮನಃಪೂರ್ವಕವಾಗಿ ಪರಿವರ್ತನೆಗೊಂಡು ಶರಣಾಗಿದ್ದಾರೆ. ನಕ್ಸಲ್ ಶರಣಾಗತಿ ಮತ್ತು ಪುನರ್ ವಸತಿ ಯೋಜನೆಯಡಿ ಇದುವರೆಗೂ 22 ಮಂದಿ ಭೂಗತ ನಕ್ಸಲರು ಶರಣಾಗಿದ್ದಾರೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.