2028ರಲ್ಲಿ ರಾಜ್ಯದಲ್ಲಿ, 2029ರಲ್ಲಿ ರಾಷ್ಟ್ರದಲ್ಲಿ ಕಾಂಗ್ರೆಸ್ ಬಾವುಟ ಹಾರಲಿದೆ: ಡಿ.ಕೆ.ಶಿವಕುಮಾರ್

Update: 2025-03-17 21:58 IST
2028ರಲ್ಲಿ ರಾಜ್ಯದಲ್ಲಿ, 2029ರಲ್ಲಿ ರಾಷ್ಟ್ರದಲ್ಲಿ ಕಾಂಗ್ರೆಸ್ ಬಾವುಟ ಹಾರಲಿದೆ: ಡಿ.ಕೆ.ಶಿವಕುಮಾರ್
  • whatsapp icon

ಬೆಂಗಳೂರು :  ‘2028ರಲ್ಲಿ ರಾಜ್ಯದಲ್ಲಿ ಹಾಗೂ 2029ರಲ್ಲಿ ರಾಷ್ಟ್ರದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲಿದೆ. ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ನಾಯಕತ್ವದಲ್ಲಿ ದೇಶದಲ್ಲಿ ಕಾಂಗ್ರೆಸ್ ಬಾವುಟ ಹಾರಲಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸೋಮವಾರ ನಗರದ ಅರಮನೆ ಮೈದಾನದಲ್ಲಿ ನಡೆದ ಯುವ ಕಾಂಗ್ರೆಸ್ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಯುವ ಕಾಂಗ್ರೆಸ್ ಚುನಾವಣೆ ಮೂಲಕ ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಜ್ಞಾ ವಿಧಿ ಬೋಧಿಸಿದರು. ನಂತರ ಡಿ.ಕೆ.ಶಿವಕುಮಾರ್ ಹಾಗೂ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮೊಹಮದ್ ಹಾರಿಸ್ ನಲಪಾಡ್ ನೂತನ ಅಧ್ಯಕ್ಷ ಮಂಜುನಾಥ್ ಗೌಡ ಅವರಿಗೆ ಕಾಂಗ್ರೆಸ್ ಧ್ವಜ ಹಸ್ತಾಂತರ ಮಾಡಿದರು.

ಬಳಿಕ ಮಾತನಾಡಿದ ಡಿ.ಕೆ.ಶಿವಕುಮಾರ್, ‘ಯುವ ಕಾಂಗ್ರೆಸ್ ಚುನಾವಣೆ ಮುಗಿದಿದೆ. ಚುನಾವಣೆಯಲ್ಲಿ ಗೆದ್ದವರು, ಸೋತವರು ಎಲ್ಲರೂ ಒಗ್ಗಟ್ಟಾಗಿ ಸೈದ್ಧಾಂತಿಕವಾಗಿ ರಾಜಕೀಯ ಎದುರಾಳಿಗಳಾಗಿರುವ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ವಿರುದ್ಧ ಎಲ್ಲಾ ಬೂತ್‍ಮಟ್ಟದಲ್ಲಿ ಹೋರಾಟ ಮಾಡಬೇಕು’ ಎಂದು ಕರೆ ಕೊಟ್ಟರು.

ಕರ್ನಾಟಕದಲ್ಲಿ 25 ಲಕ್ಷ ಯುವ ಕಾಂಗ್ರೆಸ್ ಸದಸ್ಯತ್ವ ಮಾಡಲಾಗಿದೆ ಎಂಬ ವರದಿ ಬಂದಿದೆ. ಇಲ್ಲಿ 15-20 ಸಾವಿರ ಸದಸ್ಯರು ಬಂದಿದ್ದೀರಿ. ಉಳಿದ ಸದಸ್ಯರು ಎಲ್ಲಿ ಹೋದರು ಎಂದು ಕೇಳಲು ಬಯಸುತ್ತೇನೆ. 25 ಲಕ್ಷ ಸದಸ್ಯತ್ವ ದೊಡ್ಡ ಮಟ್ಟದಲ್ಲಿ ತಾಲೂಕು ಮಟ್ಟದ ಅಧ್ಯಕ್ಷರು ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಇಂತಹುದೇ ಪದಗ್ರಹಣ ಕಾರ್ಯಕ್ರಮ ಮಾಡಬೇಕು. ಆ ಕಾರ್ಯಕ್ರಮಕ್ಕೆ ಆ ತಾಲೂಕಿನ ಯುವ ಕಾಂಗ್ರೆಸ್ ಸದಸ್ಯರನ್ನು ಆಹ್ವಾನಿಸಬೇಕು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆದವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸದಸ್ಯತ್ವ ಪಡೆದವರಿಂದ ಮತ ಹಾಕಿಸಿಕೊಂಡು ನಂತರ ಅವರನ್ನು ಬಿಡುವುದಲ್ಲ. ಸದಸ್ಯತ್ವ ಪಡೆದವರು ಕಾಂಗ್ರೆಸ್ ಪಕ್ಷದ ಲೆಕ್ಕದಲ್ಲಿರಬೇಕು. ಆಗ ಯಾರೆಲ್ಲಾ ನಿಜವಾದ ಸದಸ್ಯರು ಎಂಬುದು ತಿಳಿಯುತ್ತದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಮಹಾತ್ಮಾ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಶತಮಾನೋತ್ಸವ ಆಚರಿಸಿದೆವು. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗದ ಜನನ ಅದಿಕಾರಕ್ಕೆ ಬಂದಂತೆ. ಇಂದು ನೀವೆಲ್ಲರೂ ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಪದಾಧಿಕಾರಿಗಳಿದ್ದೀರಿ. ನಿಮಗೆಲ್ಲರಿಗೂ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಅವರ ಪರವಾಗಿ ಶುಭಾಶಯ ಅರ್ಪಿಸಲು ಬಯಸುತ್ತೇನೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ರಾಜಕೀಯದಲ್ಲಿ ಚುನಾವಣೆ ಗೆಲುವು ಸೋಲು ಸಹಜ. ಚುನಾವಣೆಯಲ್ಲಿ ಸ್ಪರ್ಧಿಸಿದವರೆಲ್ಲಾ ಗೆಲ್ಲಲು ಆಗುವುದಿಲ್ಲ. ಚುನಾವಣೆಯಲ್ಲಿ ಗೆದ್ದವರೆಲ್ಲಾ ನಾಯಕರಲ್ಲ. ಯಾರು ಪ್ರಾಮಾಣಿಕವಾಗಿ ಪಕ್ಷವನ್ನು ಶಿಸ್ತಿನಿಂದ ಸಂಘಟನೆ ಮಾಡುತ್ತಾರೋ, ಕಾಂಗ್ರೆಸ್ ತತ್ವ ಸಿದ್ಧಾಂತ ಬೆಳೆಸಿಕೊಂಡು, ದೇಶದ ಸಮಗ್ರತೆ, ಐಕ್ಯತೆ ಕಾಪಾಡಿಕೊಂಡು ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತೆ ಕಾಪಾಡುವವರು ನಿಜವಾದ ನಾಯಕ. ಅವರೇ ನಿಜವಾದ ಕಾಂಗ್ರೆಸಿಗ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಶಿಸ್ತು ಇಲ್ಲದಿದ್ದರೆ ಯಾರೂ ನಾಯಕರಾಗುವುದಿಲ್ಲ. ಶಿಸ್ತೇ ಯಶಸ್ಸಿನ ಮೂಲಮಂತ್ರ. ಪೋಸ್ಟರ್ ಬ್ಯಾನರ್ ಹಾಕಿದಾಕ್ಷಣ ನೀವು ನಾಯಕರಾಗುವುದಿಲ್ಲ. ನಿಮ್ಮ ಸಮರ ಸಿದ್ದಾಂತದ ಮೇಲೆ ಇರಬೇಕು. ಬೂತ್ ಮಟ್ಟದಲ್ಲಿ ಬಿಜೆಪಿ ಹಾಗೂ ಜನತಾ ದಳದವರ ವಿರುದ್ಧ ಇರಬೇಕೇ ಹೊರತು ಪೋಸ್ಟರ್ ಹಾಕಿಕೊಂಡು ಮಾಡುವುದಲ್ಲ. ನಿಮ್ಮ ಪೋಸ್ಟರ್ ನಿಮ್ಮ ಬೂತ್ ಮಟ್ಟದಲ್ಲಿ ಇರಬೇಕು. ಪೋಸ್ಟರ್ ಹಾಕುವಾಗ ಶಿಷ್ಟಾಚಾರ ಪಾಲನೆ ಮಾಡಬೇಕು ಎಂದು ಡಿ.ಕೆ.ಶಿವಕುಮಾರ್ ಕಿವಿಮಾತು ಹೇಳಿದರು.

ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿರಬಹುದು. ಸೂರ್ಯ ಹುಟ್ಟುತ್ತಾನೆ, ಮುಳುಗುತ್ತಾನೆ. ರಾಜಕೀಯದಲ್ಲಿ ಯಾವುದೂ ಶಾಶ್ವತವಿಲ್ಲ. ನಾನು ಪಕ್ಷದ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸುವಾಗ ಒಂದು ಮಾತು ಕೊಟ್ಟಿದ್ದೆ. ಮಹಿಳೆಯರು ಹಾಗೂ ಯುವಕರಿಗಾಗಿ ಕಾರ್ಯಕ್ರಮ ನೀಡುವುದಾಗಿ ಹೇಳಿದ್ದೆ. ಅದರಂತೆ ಯುವನಿಧಿ ಹಾಗೂ ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೇವೆ. ಬಿಜೆಪಿಯವರು ಭಾವನೆ ಮೇಲೆ ರಾಜಕೀಯ ಮಾಡಿದರೆ, ಕಾಂಗ್ರೆಸ್ ಪಕ್ಷ ಬದುಕಿನ ಮೇಲೆ ರಾಜಕೀಯ ಮಾಡುತ್ತಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ಪ್ರತಿ ಬೂತ್ ಮಟ್ಟದಲ್ಲಿ ಡಿಜಿಟಲ್ ಯೂಥ್ ಇರಬೇಕು ಎಂದು ಹೇಳುತ್ತಲೇ ಇದ್ದೇನೆ. ನೂತನ ಅಧ್ಯಕ್ಷ ಮಂಜುನಾಥ್ ಗೌಡ ಅವರಿಗೂ ನಾನು ಇದನ್ನು ಹೇಳಬಯಸುತ್ತೇನೆ. ಇದರಲ್ಲಿ ಯಾವುದೇ ರಾಜಿಯಿಲ್ಲ. ಪ್ರತಿ ಬೂತ್‍ನಲ್ಲಿ 25 ಕಾರ್ಯಕರ್ತರ ಪಡೆ ರಚಿಸಬೇಕು. ಆ ಬೂತ್ ಜವಾಬ್ದಾರಿಯನ್ನು ಅವರಿಗೆ ನೀಡಬೇಕು. ಯಾರು ಬೂತ್ ಮಟ್ಟದಲ್ಲಿ ಹೆಚ್ಚಿನ ಮತ ಕೊಡಿಸುತ್ತಾರೋ ಅವರೇ ನಿಜವಾದ ನಾಯಕರು. ಇದನ್ನು ಬಿಟ್ಟು, ನನ್ನ ಹಾಗೂ ಸಿದ್ದರಾಮಯ್ಯ ಅವರ ಸುತ್ತ ಗಿರಕಿ ಹೊಡೆದರೆ ನಾಯಕರಾಗುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಸಚಿವರಾದ ಕೃಷ್ಣ ಭೈರೇಗೌಡ, ದಿನೇಶ್ ಗುಂಡೂರಾವ್, ಲಕ್ಷ್ಮಿ ಹೆಬ್ಬಾಳ್ಕರ್, ಸಂತೋμï ಲಾಡ್, ರಾಷ್ಟ್ರೀಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ವಿ.ಶ್ರೀನಿವಾಸ್, ಶಾಸಕರಾದ ಪ್ರಸಾದ್ ಅಬ್ಬಯ್ಯ, ಅಶೋಕ್ ಕುಮಾರ್ ರೈ, ರಿಝ್ವಾನ್ ಅರ್ಶದ್, ಪರಿಷತ್ ಸದಸ್ಯರಾದ ಎಸ್.ರವಿ, ದಿನೇಶ್ ಗೂಳಿಗೌಡ, ನಾಗರಾಜ್ ಯಾದವ, ಬಸನಗೌಡ ಬಾದರ್ಲಿ, ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು ಚಿಬ್, ಆಡಳಿತ ಪಕ್ಷದ ಮುಖ್ಯಸಚೇತಕ ಸಲೀಂ ಅಹ್ಮದ್, ಎಐಸಿಸಿ ಕಾರ್ಯದರ್ಶಿ ಸೂರಜ್ ಹೆಗ್ಡೆ, ಕೆಪಿಸಿಸಿ ಕಾರ್ಯಾಧ್ಯಕ್ಷ ವಿನಯ್ ಕುಲಕರ್ಣಿ, ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

‘799 ಜಿಲ್ಲೆಗಳಲ್ಲಿ 28 ರಾಜ್ಯಗಳಲ್ಲಿ, 8 ಕೇಂದ್ರಾಡಳಿತ ಪ್ರದೇಶಗಳಲ್ಲಿ, 1.74 ಲಕ್ಷ ಬೂತ್ ಮಟ್ಟದಲ್ಲಿ 5 ಕೋಟಿಗೂ ಹೆಚ್ಚು ಯುವ ಕಾಂಗ್ರೆಸ್ ಸದಸ್ಯರಿದ್ದಾರೆ ಎಂಬುದು ನಮ್ಮ ಹೆಮ್ಮೆ. ಬಿಜೆಪಿಯವರು ಅಭಿವೃದ್ದಿ ಕೆಲಸ ಮಾಡಿ ಜನರ ಬಳಿ ಮತಗಳನ್ನು ಕೇಳುತ್ತಿಲ್ಲ. ಕೇವಲ ಹಿಂದು, ಹಿಂದುತ್ವದ ಮುಖಾಂತರ ಜನರನ್ನು ವಿಭಜನೆ ಮಾಡಿ ಮತ ಕೇಳುತ್ತಾರೆ. ನಾನೂ ಹಿಂದು ಎಂದು ಹೆಮ್ಮೆಯಿಂದ ಹೇಳುತ್ತೇನೆ. ಆದರೆ, ಇದನ್ನು ಮತ ರಾಜಕಾರಣಕ್ಕೆ ಬಳಸಿಕೊಳ್ಳಬಾರದು’

-ಸಂತೋಷ್ ಲಾಡ್, ಕಾರ್ಮಿಕ ಸಚಿವ.

‘ಇಡೀ ಪ್ರಪಂಚ ಹಾಗೂ ನಮ್ಮ ದೇಶದ ಕೆಲವೇ ಕೆಲವು ರಾಜಕೀಯ ಪಕ್ಷಗಳಲ್ಲಿ ಮಾತ್ರ ಪ್ರಜಾಪ್ರಭುತ್ವ ಮಾದರಿಯಲ್ಲಿ ಪಕ್ಷದ ಒಳಗೆ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಸುವುದು. ಇದರಲ್ಲಿ ಕಾಂಗ್ರೆಸ್ ಪಕ್ಷವೇ ಮುಂಚೂಣಿಯಲ್ಲಿರುವುದು. ಹೊಸದಾಗಿ ಚುನಾಯಿತರಾದ ಯುವ ಕಾಂಗ್ರೆಸ್ ಪದಾಧಿಕಾರಿಗಳು ಹೊಸ ಆಲೋಚನೆಯನ್ನು ಇಟ್ಟುಕೊಂಡು ಬೆಳೆಯಬೇಕು. ಇದರ ಜೊತೆಗೆ ಪಕ್ಷವನ್ನು ಬೆಳೆಸಬೇಕು. ಕೇಂದ್ರ ಸರಕಾರ ಕರ್ನಾಟಕಕ್ಕೆ ಹೆಜ್ಜೆ, ಹೆಜ್ಜೆಗೂ ಅನ್ಯಾಯ ಮಾಡುತ್ತಿದೆ. ಕಾಂಗ್ರೆಸ್ ಯುವ ಸಮೂಹ ರಾಜ್ಯಕ್ಕೆ ನ್ಯಾಯ ಸಿಗುವಂತೆ ಹೋರಾಟ ರೂಪಿಸಬೇಕು’

-ಕೃಷ್ಣಬೈರೇಗೌಡ, ಕಂದಾಯ ಸಚಿವ.

‘ಯುವ ಸಂಘಟನೆ ಚೆನ್ನಾಗಿದ್ದರೆ ಮಾತ್ರ, ಆ ರಾಜಕೀಯ ಪಕ್ಷ ಚೆನ್ನಾಗಿ ಇರುತ್ತದೆ. ಆದ ಕಾರಣ ಯುವ ಕಾಂಗ್ರೆಸ್ ಪಕ್ಷದ ಬೆನ್ನೆಲುಬು. ಇದು ಗಟ್ಟಿಯಾಗಿದ್ದರೆ ಮಾತ್ರ ಎಲ್ಲರನ್ನು ಧೈರ್ಯವಾಗಿ ಎದುರಿಸಬಹುದು. ಹೊಸ ನಾಯಕತ್ವ ಇದರಿಂದ ಸಿಗುತ್ತದೆ. ಸರಕಾರದ ಹಾಗೂ ಪಕ್ಷದ ಕಾರ್ಯಕ್ರಮಗಳು ಯುವ ಕಾಂಗ್ರೆಸ್‍ನಿಂದ ಮಾತ್ರ ಜನರಿಗೆ ತಲುಪಲು ಸಾಧ್ಯ. ಪಕ್ಷದ ನಾಯಕರಿಗೆ ಘೋಷಣೆ ಕೂಗಿದರೆ ಸಾಲದು. ಸೈದ್ದಾಂತಿಕವಾಗಿ ನಾವು ಬೆಳೆದರೆ ಮಾತ್ರ ಪಕ್ಷ ಬೆಳೆಯುತ್ತದೆ’

-ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ.

ಈ ದೇಶವನ್ನು ಬಿಜೆಪಿ, ಆರೆಸ್ಸೆಸ್‍ನವರು ಒಡೆಯುತ್ತಿದ್ದಾರೆ. ಇದನ್ನು ನಿಲ್ಲಿಸುವ ಕೆಲಸವನ್ನು ದೇಶದ ಯುವಕರು ಮಾಡಬೇಕು. ದೇಶದಲ್ಲಿ ಯಾರು ಆಡಳಿತ ನಡೆಸುತ್ತಿದ್ದಾರೋ, ಅವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಲ್ಲ. ಅವರು ಸರ್ವಾಧಿಕಾರದಿಂದ ನಡೆಯುತ್ತಿದ್ದಾರೆ. ಅವರ ಪರವಾಗಿ ಒಂದಷ್ಟು ಮಾಧ್ಯಮಗಳು ಕೆಲಸ ಮಾಡುತ್ತಿವೆ. ಅವರನ್ನು ದೊಡ್ಡ ನಾಯಕರಾಗಿ ಬಿಂಬಿಸಲಾಗುತ್ತಿದೆ. ಈ ಸರ್ವಾಧಿಕಾರಿತನದ ವಿರುದ್ಧ ನಾವು ಹೋರಾಟ ಮಾಡಲೇಬೇಕು.

-ರಿಝ್ವಾನ್ ಅರ್ಶದ್, ಶಾಸಕ

ದೇಶದಲ್ಲಿ ಅತಿಹೆಚ್ಚು ಯುವ ಕಾಂಗ್ರೆಸ್ ಸದಸ್ಯತ್ವವನ್ನು ಕರ್ನಾಟಕದಲ್ಲಿ ಮಾಡಲಾಗಿದೆ. ಯುವ ಕಾಂಗ್ರೆಸ್ ನೂತನ ಅಧ್ಯಕ್ಷ ಮಂಜುನಾಥ್‍ಗೌಡ ಅವರ ಉತ್ತಮ ನಾಯಕತ್ವದಲ್ಲಿ ಸದಸ್ಯತ್ವದ ಕೆಲಸ ನಡೆದಿದೆ. ಬೂತ್ ಮಟ್ಟಕ್ಕೆ ಹೋಗಿ ಯುವ ಕಾಂಗ್ರೆಸ್ ನಾಯಕರು ಕೆಲಸ ಮಾಡಬೇಕು. ಅವರ ಸಮಸ್ಯೆಗಳನ್ನು ಆಲಿಸಬೇಕು. ಮೋದಿಯವರು ದೇಶದ ಸ್ವಾಭಿಮಾನವನ್ನು ಅಮೆರಿಕದ ಮುಂದೆ ಅಡವಿಟ್ಟಿದ್ದಾರೆ. ದೇಶದ ನಾಗರಿಕರಿಗೆ ಬೇಡಿ ಹಾಕಿ ಅಮೇರಿಕದಿಂದ ಕಳಿಸಲಾಗುತ್ತಿದೆ. ಇದರ ಬಗ್ಗೆ ದೇಶದ ಜನರು ದನಿ ಎತ್ತುತ್ತಾ ಇಲ್ಲ. ಆದರೆ ಯುವ ಕಾಂಗ್ರೆಸ್ ಇದರ ಬಗ್ಗೆ ದನಿ ಎತ್ತಿದೆ.

-ಉದಯ್ ಬಾನು ಚಿಬ್, ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News