ಗ್ಯಾರಂಟಿಗಳಿಗೆ ದಲಿತರ ಹಣ ಬಳಕೆ ಆರೋಪ: ಪರಿಷತ್‍ನಲ್ಲಿ ಗದ್ದಲ

ಬೆಂಗಳೂರು : ಎಸ್‍ಸಿಎಸ್‍ಪಿ ಹಾಗೂ ಟಿಎಸ್‍ಪಿ ಯೋಜನೆಗಳಿಗೆ ಮೀಸಲಿಟ್ಟಿದ್ದ ಹಣ ಗ್ಯಾರಂಟಿ ಯೋಜನೆಗಳಿಗೆ ಬಳಕೆಯಾಗುತ್ತಿದೆ ಎಂಬ ಆರೋಪಕ್ಕೆ ವಿಧಾನಪರಿಷತ್ತಿನಲ್ಲಿ ಉಭಯ ಪಕ್ಷಗಳಿಂದ ಮಾತಿನ ಚಕಮಕಿ ಜೋರಾಗಿ ಕೆಲಕಾಲ ಗದ್ದಲ ಉಂಟಾಯಿತು.
ಎಸ್‍ಸಿಎಸ್‍ಪಿ ಹಾಗೂ ಟಿಎಸ್‍ಪಿ ಯೋಜನೆಗಳಿಗೆ ಮೀಸಲಿಟ್ಟಿದ್ದ ಹಣವನ್ನು ಗ್ಯಾರಂಟಿಗಳಿಗೆ ಬಳಸಲಾಗಿದೆ. ಈ ಮೂಲಕ ದಲಿತರ ಕಲ್ಯಾಣ ಕಾರ್ಯಕ್ರಮಗಳಿಗೆ ಆಡ್ಡಿಯಾಗಿದೆ ಈ ಬಗ್ಗೆ ಸರಕಾರ ಕೈಗೊಂಡ ಕ್ರಮಗಳ ಬಗ್ಗೆ ಪ್ರತಿಪಕ್ಷ ಸದಸ್ಯರಾದ ಹೇಮಲತಾ ನಾಯಕ್ ಹಾಗೂ ಶರವಣ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಗ್ಯಾರಂಟಿ ಯೋಜನೆಗಳಿಗೆ ದಲಿತರ ಹಣವನ್ನು ಬಳಸಿಲ್ಲ. ಎಸ್‍ಸಿ/ಎಸ್‍ಟಿ ಸಮುದಾಯಕ್ಕೆ ಮೀಸಲಿಟ್ಟ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಲು ಆಗುವುದಿಲ್ಲ. ಮೀಸಲಿಟ್ಟ ಹಣವನ್ನು ಆ ಸಮುದಾಯದ ಜನರಿಗೆ ಮಾತ್ರ ಬಳಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.
ಇದಕ್ಕೆ ಆಕ್ಷೇಪಿಸಿದ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ದಲಿತರಿಗೆ ಈ ಸರಕಾರದಿಂದ ಆಗಿರುವಷ್ಟು ಅನ್ಯಾಯ ಬೇರೆ ಎಲ್ಲಿಯೂ ಆಗಿಲ್ಲ. ನಮಗೆ ಮೋಸ ಮಾಡಲು ನಮ್ಮ ಜನಾಂಗದ ವ್ಯಕ್ತಿಯನ್ನೇ ಇಡಲಾಗಿದೆ. ಇದು ನಮಗೆ ಮಾಡುತ್ತಿರುವ ವಂಚನೆ. ನಮ್ಮ ಹಣವನ್ನು ನಮಗೆ ವಾಪಸ್ ಕೊಡಿಸಿ ಗ್ಯಾರಂಟಿಗಳಿಗೆ ನಮ್ಮ ಹಣವನ್ನೇ ಬಳಸಿಕೊಳ್ಳಲಾಗುತ್ತಿದೆ. ದಲಿತರ ಹಣ ಗ್ಯಾರಂಟಿಗೆ ಕೊಡುವುದು ನಿಲ್ಲಿಸಬೇಕು. ನಿಲ್ಲಿಸುವವರೆಗೂ ನಮ್ಮ ಹೋರಾಟ ನಿರಂತರವಾಗಿರಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಸರಕಾರದ ವಿರುದ್ಧ ಪ್ರತಿಪಕ್ಷದ ಸದಸ್ಯರು ಧಿಕ್ಕಾರ ಕೂಗಿದರು. ಆಡಳಿತ ಮತ್ತು ಪ್ರತಿಪಕ್ಷಗಳ ವಾಕ್ಸಮರ ಹೆಚ್ಚಾಗಿದ್ದರಿಂದ ಸಭಾಪತಿಗಳು 10 ನಿಮಿಷಗಳ ಕಾಲ ಸದನ ಮುಂದೂಡಿದರು.
ಬಳಿಕ ಕಲಾಪ ಆರಂಭವಾಗುತ್ತಿದ್ದಂತೆ ಮತ್ತೆ ಸಚಿವ ಎಚ್.ಸಿ.ಮಹದೇವಪ್ಪ ಮಾತನಾಡಿ, ಎಸ್‍ಸಿ-ಎಸ್‍ಟಿ ವರ್ಗದವರು ದೇಶದ ಮೂಲನಿವಾಸಿಗಳು. ಕೇಂದ್ರ ಸರಕಾರವು ಈ ಸಮುದಾಯಕ್ಕೆ ಹೆಚ್ಚು ಹಣ ಮೀಸಲಿಟ್ಟಿಲ್ಲ. ಆದರೆ ರಾಜ್ಯ ಸರಕಾರ ಹೆಚ್ಚು ಅನುದಾನ ಮೀಸಲಿರಿಸಿದೆ. ಎಸ್‍ಸಿಎಸ್‍ಪಿ/ಟಿಎಸ್‍ಪಿ ಕಾಯ್ದೆಯ ಸೆಕ್ಷನ್ 7ಸಿ ಅಡಿ ಶಿಕ್ಷಣ, ಆರೋಗ್ಯ, ಕಾರ್ಮಿಕ, ವಿಕಲಚೇತನ ಅಭಿವೃದ್ದಿ ಕಾರ್ಯಕ್ರಮಗಳಿಗೆ ಅನುಸೂಚಿತ ಜಾತಿಗಳ ಜನರು ಫಲಾನುಭವಿಗಳಾಗಿರುವುದರಿಂದ ಎಸ್‍ಸಿಎಸ್‍ಪಿ ಟಿಎಸ್‍ಪಿ ಅನುದಾನವನ್ನು ವಿನಿಯೋಗಿಸಲು ಹಂಚಿಕೆ ಮಾಡಲಾಗಿದೆ. ಹೀಗಾಗಿ ಗ್ಯಾರಂಟಿ ಯೋಜನೆಗಳಿಗಾಗಿ ಎಸ್‍ಸಿ ಟಿಎಸ್‍ಪಿಗಳ ಮೀಸಲಿಟ್ಟಿದ್ದ ಹಣ ದುರ್ಬಳಕೆ ಮಾಡಿಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದರು.
ಬಳಿಕ ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿ, ಎಸ್‍ಸಿಎಸ್‍ಪಿ ಹಾಗೂ ಟಿಎಸ್‍ಪಿ ಕಾಯ್ದೆಯಲ್ಲಿದ್ದ ಲೋಪಗಳನ್ನು ಕಾಂಗ್ರೆಸ್ ಸರಕಾರ ಕೈ ಬಿಟ್ಟಿದೆ. ದಲಿತರ ಅಭ್ಯುದಯಕ್ಕಾಗಿ ನಮ್ಮ ಸರಕಾರ ಹೆಚ್ಚಿನ ಅನುದಾನ ಕಲ್ಪಿಸಿದೆ ಎಂದರು.
ಸಚಿವರ ಉತ್ತರಕ್ಕೆ ಆಕ್ಷೇಪಿಸಿದ ಪ್ರತಿಪಕ್ಷ ಸದಸ್ಯರು ಸರಕಾರಕ್ಕೆ ಧಿಕ್ಕಾರ ಕೂಗಿ ಸದನದ ಬಾವಿಗಿಳಿದು ಪ್ರತಿಭಟಿಸಲು ಮುಂದಾದರು. ಆಗ ಸದನವನ್ನು ಮತ್ತೆ ಮುಂದೂಡಲಾಯಿತು.